ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆತ ಪ್ರಕರಣ- 59 ಮಂದಿ ವಿರುದ್ಧ ಎಫ್‍ಐಆರ್

Public TV
2 Min Read

ಬಾಗಲಕೋಟೆ: ರಂಭಾಪುರಿ ಶ್ರೀಗಳ (Rambhapuri Shree) ಕಾರಿನ ಕಡೆ ಚಪ್ಪಲಿ ಎಸೆತ ಹಾಗೂ ಕಾರಿಗೆ ತಡೆ ಒಡ್ಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಗಳ ಭಕ್ತರು ಕಲಾದಗಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಮಹಿಳೆಯರು ಸೇರಿದಂತೆ 59 ಜನರ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.

ತಾಲೂಕಿನ (Bagalkote) ಕಲಾದಗಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಶನಿವಾರ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಉತ್ಸವಕ್ಕೆ ತೆರಳುತ್ತಿದ್ದ ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆದಿದ್ದಳು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಶ್ರೀಗಳ ಭಕ್ತರು ಈ ವಿಚಾರಕ್ಕೆ ಆಕ್ರೋಶಗೊಂಡಿದ್ದು, ಮಠದ ವಿವಾದ ಕೋರ್ಟ್ ನಲ್ಲಿರುವಾಗ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ. ಶಾಂತಿ ಕದಡುವ ಉದ್ದೇಶದಿಂದ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

ಈ ಸಂಬಂಧ ಬಾಗಲಕೋಟೆ ಎಸ್‍ಪಿ ಅಮರನಾಥ ರೆಡ್ಡಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಏನಿದು ಗಲಾಟೆ?:
ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್ ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ದರು. ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿದ್ದರು. ನಂತರ ರಂಭಾಪುರಿ ಶ್ರೀಗಳ ವಿರೋಧಿ ಬಣ ನೂತನ ಸ್ವಾಮೀಜಿಯನ್ನಾಗಿ ಮಹಾಂತ ದೇವರು ಸ್ವಾಮೀಜಿಯನ್ನ ಕರೆತಂದು ಅದ್ಧೂರಿ ಮೆರವಣಿಗೆ ಮಾಡಿತ್ತು. ಪರ, ವಿರೋಧ ಬಣಗಳು ಹುಟ್ಟಿಕೊಂಡು ಪ್ರಕರಣ ಈಗ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದೆ.

ಶನಿವಾರ, ಗಂಗಾಧರ ಸ್ವಾಮೀಜಿ ಮಠದ ಹೊಲದ ಉಳುಮೆಗೆ ಮುಂದಾದಾಗ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಮಠದ ಒಟ್ಟು 72 ಎಕರೆ ಭೂಮಿಯನ್ನು ರಂಭಾಪುರಿ ಶ್ರೀ ಮತ್ತು ಗಂಗಾಧರ ಸ್ವಾಮೀಜಿ ಲಪಟಾಯಿಸಲು ಮುಂದಾಗಿದ್ದಾರೆ ಎನ್ನುವುದು ಭಕ್ತರ ಆರೋಪ. ವಿವಾದ ಕೋರ್ಟ್‍ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗಲಾಟೆ ನಡೆಯುತ್ತಿರುವಾಗಲೇ ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳು ತೆರಳುತ್ತಿದ್ದರು. ಈ ವೇಳೆ ರಂಭಾಪುರಿ ಶ್ರೀಗಳ ಕಾರಿನ ಕಡೆ ಚಪ್ಪಲಿ ಎಸೆಯಲಾಗಿತ್ತು. ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ರಂಭಾಪುರಿ ಶ್ರೀಗಳು ಕಾರಿಗೆ ಯಾರು ಚಪ್ಪಲಿ ಎಸೆದಿಲ್ಲ ಎಂದಿದ್ದರು. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್‌ಡಿಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Share This Article