ಪ್ರೀತಿಸಿ ವಂಚಿಸಿದನೆಂದು ಯುವಕನ ಮೇಲೆ ಆ್ಯಸಿಡ್ ಎರಚಿದ ಯುವತಿ

Public TV
1 Min Read

ತುಮಕೂರು: ಪ್ರೀತಿಸಿ ವಂಚಿಸಿದ್ದಾನೆ ಎಂಬ ಆರೋಪದ ಮೇಲೆ ಯುವಕನ ಮೇಲೆ ಯುವತಿಯೊಬ್ಬಳು ಆ್ಯಸಿಡ್ ಎರಚಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಜಿಲ್ಲೆಯ ಗುಬ್ಬಿ ತಾಲೂಕು ಪಂಚಾಯ್ತಿಯಲ್ಲಿ ಎಸ್‍ಡಿಎ ಆಗಿ ಕಾರ್ಯನಿರ್ವಹಿಸುತ್ತಿರೋ ಮಂಜುನಾಥ್ ಮೇಲೆ ಗೌರಮ್ಮ ಎಂಬ ಯುವತಿಯಿಂದ ಆ್ಯಸಿಡ್ ದಾಳಿ ನಡೆದಿದೆ. ಬುರ್ಖಾ ಧರಿಸಿಕೊಂಡು ಬಂದ ಗೌರಮ್ಮ, ನೇರವಾಗಿ ಕಚೇರಿ ಒಳಗೆ ನುಗ್ಗಿ ಈ ಕೃತ್ಯ ನಡೆಸಿದ್ದಾಳೆ. ಅದೃಷ್ಟವಶಾತ್ ಮಂಜುನಾಥನಿಗೆ ಯಾವುದೇ ತೊಂದರೆಯಾಗಿಲ್ಲ. ಮಂಜುನಾಥ್ ಕೂಗಿಕೊಳ್ಳುತಿದ್ದಂತೆ ಯುವತಿ ಎಸ್ಕೆಪ್ ಆಗಿದ್ದಾಳೆ.

ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯ ಯುವತಿ ಗೌರಮ್ಮ ಹಾಗೂ ಮಂಜುನಾಥ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಸರ್ಕಾರಿ ನೌಕರಿ ಸಿಕ್ಕ ಮೇಲೆ ಮಂಜುನಾಥ್ ಗೌರಮ್ಮಳನ್ನು ತಿರಸ್ಕರಿಸಿದ್ದಾನೆ ಎಂಬ ಆರೋಪ ಇದೆ. ಇದರಿಂದ ಆಕ್ರೋಶಗೊಂಡ ಯುವತಿ ಆ್ಯಸಿಡ್ ಎರಚಿ ಸೇಡು ತಿರಿಸಿಕೊಳ್ಳಲು ಮುಂದಾಗಿದ್ದಾಳೆ. ಆ್ಯಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಠಾಣೆಯಲ್ಲಿ ಯುವತಿ ವಿರುದ್ಧ ದೂರು ದಾಖಲಾಗಿದೆ.

ಮಂಜುನಾಥ್ ಗೌರಮ್ಮಳನ್ನು 9 ವರ್ಷಗಳ ಕಾಲ ಪ್ರೀತಿಸಿ, ಲೈಂಗಿಕವಾಗಿ ಬಳಸಿಕೊಂಡು ಕಳೆದ ವರ್ಷ ಬೇರೆ ಹುಡುಗಿ ಜೊತೆ ಮದುವೆಯಾಗಿದ್ದಾನೆ ಎನ್ನಲಾಗಿದೆ. ಮೂರು ವರ್ಷದ ಹಿಂದೆ ಮಂಜುನಾಥನಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಅಲ್ಲಿಂದ ಗೌರಮ್ಮಳ ಜೊತೆ ನಿಧಾನವಾಗಿ ದೂರವಾಗುತ್ತಾ ಬಂದಿದ್ದಾನೆ. ಇದನ್ನು ಗಮನಿಸಿದ ಯುವತಿ ಹಾಗೂ ಗೌರಮ್ಮ ಪೋಷಕರು ಪೊಲೀಸರಿಗೆ ದೂರು ಕೊಟ್ಟು ದೇವಸ್ಥಾನದಲ್ಲಿ ಹಾರ ಬದಲಾಯಿಸಿ ಮದುವೆ ಮಾಡಿದ್ದರು.

ಈ ಮದುವೆ ಒಪ್ಪದ ಮಂಜುನಾಥ್, ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡಿ ಎಂದು ಬೇಡಿಕೆ ಇಟ್ಟಿದ್ದ. ನಂತರ ಫೆಬ್ರವರಿ 24 ಹಾಗೂ 25ರಂದು ಮದುವೆ ಡೇಟ್ ತಾನೇ ಫಿಕ್ಸ್ ಮಾಡಿದ್ದ.

ಕಳೆದ ನವೆಂಬರ್ ನಲ್ಲಿ ಕಲ್ಯಾಣ ಮಂಟಪ ಬುಕ್ ಮಾಡುವ ಸಲುವಾಗಿ ಯುವತಿ ಪೋಷಕರು ಮಂಜುನಾಥ್ ಮನೆಗೆ ಹೋದಾಗ ಆತ ಮನೆಗೆ ಬೀಗ ಹಾಕಿದ್ದು, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಅಕ್ಕ ಪಕ್ಕ ಮನೆಯವರನ್ನು ವಿಚಾರಿಸಿದಾಗ ಮಂಜುನಾಥ್ ಬೇರೆ ಹುಡುಗಿ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ ಎಂದು ಮಾಹಿತಿ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *