ವರದಿಯಲ್ಲಿ ಕೊರೊನಾ ಪಾಸಿಟಿವ್- ಬೆದರಿಸಿ ವೈದ್ಯರಿಗೆ ಅವಾಚ್ಯವಾಗಿ ನಿಂದಿಸಿದ ಮಹಿಳೆ

Public TV
1 Min Read

ಮುಂಬೈ: ತನ್ನ ವೈದ್ಯಕೀಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಗಾಬರಿಗೊಂಡ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಲ್ಲದೇ, ವೈದ್ಯರನ್ನೇ ನಿಂದಿಸಿದ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

48 ವರ್ಷದ ಮಹಿಳೆ ಅನಾರೋಗ್ಯದಿಂದಾಗಿ ರತ್ನಗಿರಿ ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾಳೆ. ಆದರೆ ಪ್ರಪಂಚದಾದ್ಯಂತ ಕೊರೊನಾ ವೈರಸ್ ಭೀತಿ ಇರುವ ಹಿನ್ನೆಲೆಯಲ್ಲಿ ಮಹಿಳೆಯ ಗಂಟಲು ದ್ರವವನ್ನು ಟೆಸ್ಟ್‍ಗೆ ಕಳುಹಿಸಿದ್ದಾರೆ. ಈ ವೇಳೆ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂಬುದಾಗಿ ಉಲ್ಲೇಖವಾಗಿದೆ. ಇದರಿಂದ ಶಾಕ್ ಆದ ಮಹಿಳೆ ಭಯಗೊಂಡು, ವೈದ್ಯರು ಹಾಗೂ ನರ್ಸ್ ಗಳನ್ನು ಅವಾಚ್ಯವಾಗಿ ನಿಂದಿಸಿದ್ದಾಳೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬ್ಲೇಡ್ ಮೂಲಕ ತನ್ನ ಮಣಿಕಟ್ಟು ಕೊಯ್ದುಕೊಂಡು ಆಸ್ಪತ್ರೆಯ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆ ಸಖರ್ತಾರ್ ಗ್ರಾಮದವಳಾಗಿದ್ದು, ಏಪ್ರಿಲ್ 7 ರಂದು ತೀವ್ರ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ ಜಿಲ್ಲಾಡಳಿತ ಮಹಿಳೆ ಕುಟುಂಬದ 13 ಮಂದಿಯನ್ನು ಐಸೋಲೇಷನ್ ವಾರ್ಡಿನಲ್ಲಿ ಇರಿಸಿದೆ.

ಸದ್ಯ ಕೋವಿಡ್-19 ಪ್ರಕರಣ ಪತ್ತೆಯಾದ ಬೆನ್ನಲ್ಲೇ ರತ್ನಗಿರಿ ತಾಲೂಕಿನಲ್ಲಿರುವ 10 ಗ್ರಾಮಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ. ತಾಲೂಕಿನಲ್ಲಿ ಈಗಾಗಲೇ ಐವರಿಗೆ ಕೊರೊನಾ ಪಾಸಿಟಿವ್ ಎಂದು ಬಂದಿದ್ದು, ಅದರಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇತ್ತ 48 ವರ್ಷದ ಮಹಿಳೆ ಕೊರೊನಾ ಬಂದ ಬೆನ್ನಲ್ಲೇ ಆಕೆಯ ಸಂಬಂಧಿ 49 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಸದ್ಯ ಮಹಿಳೆಗೆ ಚಿಕಿತ್ಸೆ ನಿಡಲಾಗುತ್ತಿದೆ. ಅಲ್ಲದೆ ಆಕೆಯ ಕುಟುಂಬಕ್ಕೂ ಉತ್ತಮ ಆರೈಕೆಯಲ್ಲಿದ್ದಾಳೆ ಎಂದು ವಿವರಿಸಲಾಗಿದೆ. ಒಂದು ವೇಳೆ ಮಹಿಳೆ, ಆಸ್ಪತ್ರೆಯ ಕಾರ್ಯಾಚರಣೆಗೆ ಅಡ್ಡಿಪಡಿಸುವುದನ್ನು ಮುಂದುವರಿಸಿದರೆ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *