ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ನಡೆದಿರುವ ದುರಂತದಿಂದ ಈ ಭಾಗದ ಜನ ಕಂಗೆಟ್ಟು ಹೋಗಿದ್ದಾರೆ. ಇಲ್ಲಿ ಭಾರೀ ದೊಡ್ಡ ಸ್ಫೋಟ ಸಂಭವಿಸಿದ್ದು, ಆ ಬಳಿಕ ಸಾಕಷ್ಟು ಮನೆಗಳಿಗೆ ನೀರು, ಮಣ್ಣು ನುಗ್ಗಿತ್ತು. ಹೀಗಾಗಿ ಇಲ್ಲಿಯ ನಿವಾಸಿಗಳು ಬಹಳ ತೊಂದರೆಗಳನ್ನು ಅನುಭವಿಸಿದ್ದು, ಜನ ತಮ್ಮ ನಿವಾಸದಿಂದ ತೆರಳಿ ನಿರಾಶ್ರಿತ ಕೇಂದ್ರಗಳಲ್ಲಿ ವಾಸವಿದ್ದರು.

ಇದೀಗ ಸುಮಾರು 5 ದಿನಗಳ ಬಳಿಕ ಮನೆಗೆ ಬಂದು ಪರಿಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಈ ವೇಳೆ ಮನೆಯ ಸ್ಥಿತಿಯನ್ನು ನೋಡಲು ಬಂದ ಕುಟುಂಬವನ್ನು ಪಬ್ಲಿಕ್ ಟಿವಿ ಮಾತನಾಡಿಸಿತ್ತು. `ಮೊನ್ನೆ ಸುಮಾರು 8.30ಗೆ ಜೋಡುಪಾಲದಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಹೀಗಾಗಿ ಅಲ್ಲಿಂದ ಸುಮಾರು 20 ಮಂದಿ ನಮ್ಮ ಮನೆಗೆ ಬಂದ್ರು. ಅವರಿಗೆ ಬೆಳಗ್ಗಿನ ಉಪಹಾರ ನೀಡಿ, ಇನ್ನೇನು ಮಧ್ಯಾಹ್ನ ಊಟಕ್ಕೆ ಸಿದ್ಧತೆ ನಡೆಸುತ್ತಿರಬೇಕಾದ್ರೆ ಅಂದ್ರೆ 11.30 ಸುಮಾರಿಗೆ ನಮ್ಮ ಮನೆಯ ಹಿಂದೆಯೇ ಮತ್ತೊಂದು ಸ್ಫೋಟ ಸಂಭವಿಸಿತ್ತು. ಅಲ್ಲದೇ ನೋಡ ನೋಡುತ್ತಿದ್ದಂತೆಯೇ ನಮ್ಮ ತೋಟ, ಮರಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವು. ಇದರಿಂದ ಗಾಬರಿಗೊಂಡ ನಾವು ಮಗಳ 2 ತಿಂಗಳ ಮಗುವನ್ನು ಎತ್ತಿಕೊಂಡು ಬೆಟ್ಟಕ್ಕೆ ಓಡಿದೆವು. ಅಲ್ಲಿದ್ದಾಗ ಮತ್ತೊಮ್ಮೆ ಅಂತದ್ದೇ ದೊಡ್ಡ ಶಬ್ದವೊಂದು ಕೇಳಿಸಿತ್ತು. ಹೀಗಾಗಿ ಅಲ್ಲಿಂದ ಮತ್ತೊಂದು ಬೆಟ್ಟಕ್ಕೆ ಓಡಿದೆವು. ಅಲ್ಲಿಗೆ ಮಿಲಿಟ್ರಿಯವರು ಬಂದ್ರು. ನನ್ನ ಪತಿ, 2 ತಿಂಗಳ ಮಗುವನ್ನು ಹಿಡಿದುಕೊಂಡು ಪಾರಾದ್ರು, ನಾನು ಮತ್ತು ನನ್ನ ಬಾಣಂತಿ ಮಗಳನ್ನು ಮಿಲಿಟ್ರಿಯವರು ರಕ್ಷಿಸಿದ್ರು. ನಂತರ ನಾವು ಸ್ವಲ್ಪ ದೂರ ನಡೆದು ಪರಿಹಾರ ಕೇಂದ್ರಕ್ಕೆ ತೆರಳಿದೆವು ಅಂತ ನಡೆದ ಘಟನೆಯನ್ನು ಕಣ್ಣೀರು ಹಾಕುತ್ತಲೇ ಮಹಿಳೆಯೊಬ್ಬರು ವಿವರಿಸಿದ್ರು.

ಮಗಳು ಬಾಣಂತಿಯಾಗಿದ್ದರಿಂದ ಮಗುವನ್ನು ಹಿಡಿದುಕೊಂಡು ಪರಿಹಾರ ಕೇಂದ್ರದಲ್ಲಿ ಇರಲು ಸಾಧ್ಯವಾಗಿಲ್ಲ. ಹೀಗಾಗಿ ನಾವು ಅಲ್ಲಿಂದ ಸಂಬಂಧಿಕರ ಮನೆಗೆ ತೆರಳಿದೆವು. ಮಳೆ ಸ್ವಲ್ಪ ಕಡಿಮೆಯಾದ ಬಳಿಕ ನಮಗೆ ಧೈರ್ಯ ಬಂತು. ಒಟ್ಟಿನಲ್ಲಿ 5 ದಿನದ ಬಳಿಕ ಮನೆಯ ಪರಿಸ್ಥಿತಿಯನ್ನು ನೋಡಲು ಮನೆ ಬಂದಿದ್ದೇವೆ ಅಂತ ಮನೆಯವರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=mYi6vJ3i3Wg

Share This Article
Leave a Comment

Leave a Reply

Your email address will not be published. Required fields are marked *