ಮುಂಬೈ: ತನ್ನ ಕೈಯಿಂದಲೇ ಚಿರತೆಯ ದವಡೆಗೆ ಹೊಡೆದು 18 ತಿಂಗಳ ಮಗನನ್ನು ಭಾರೀ ಅನಾಹುತದಿಂದ ತಾಯಿ ಪಾರು ಮಾಡಿದ ಘಟನೆ ಮಹಾರಾಷ್ಟ್ರದ ಜುನ್ನರ್ ತಾಲೂಕಿನಲ್ಲಿ ಶುಕ್ರವಾರ ನಸುಕಿನ ಜಾವ ನಡೆದಿದೆ.
ಧ್ನ್ಯಾನೇಶ್ವರ್ ಮಲಿ ಅಪಾಯದಿಂದ ಪಾರಾದ ಬಾಲಕನಾಗಿದ್ದು, ಮಗನನ್ನು ಪಾರು ಮಾಡುತ್ತಿದ್ದಂತೆಯೆ ಚಿರತೆ ಆತನ ತಾಯಿ ಮೇಲೂ ದಾಳಿ ಮಾಡಿದೆ.
ಘಟನೆ ವಿವರ:
ಪುಣೆಯಿಂದ ಸುಮಾರು 90 ಕಿ.ಮೀ ದೂರದ ಜುನ್ನಾರ್ ತಾಲೂಕಿನ ಧೊಲ್ವಾಡ್ ಗ್ರಾಮದಲ್ಲಿ ಮನೆಯ ಹೊರಗೆ ಎಂದಿನಂತೆ ತನ್ನ ಹೆತ್ತವರಾದ ದಿಲೀಪ್ ಹಾಗೂ ದೀಪಾಲಿ ಜೊತೆ ಬಾಲಕ ಮಲಗಿದ್ದನು. ಈ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿದೆ. ಮಗನ ಮೇಲೆ ದಾಳಿ ಮಾಡುತ್ತಿದ್ದಂತೆಯೇ ತಾಯಿ ದೀಪಾಳಿ ಚಿರತೆಯ ದವಡೆಗೆ ತನ್ನ ಕೈಯಿಂದ ಹೊಡೆಯುವ ಮೂಲಕ ತಡೆದಿದ್ದಾರೆ. ಈ ವೇಳೆ ಚಿರತೆ ದೀಪಾಲಿ ಮೇಲೆಯೇ ದಾಳಿ ಮಾಡಲು ಯತ್ನಿಸಿದೆ. ಕೂಡಲೇ ದೀಪಾಲಿ ಕಿರುಚಿಕೊಂಡಿದ್ದಾರೆ.
ದಿಲೀಪ್, ದೀಪಾಲಿ ಕಾರ್ಮಿಕರಾಗಿದ್ದು, ಇವರಂತೆ ಇತರ ಕಾರ್ಮಿಕರು ಕೂಡ ಮನೆಯ ಹೊರಗಡೆ ಮಲಗಿದ್ದರು. 20 ವರ್ಷದ ದೀಪಾಲಿ ಚಿರತೆಯು ಮಗನ ತಲೆಯನ್ನೇ ಕಚ್ಚಿ ಹಿಡಿದುಕೊಂಡಿದ್ದನ್ನು ನೋಡಿ ದಂಗಾಗಿದ್ದಾರೆ. ಅಲ್ಲದೇ ಮಗನನ್ನು ರಕ್ಷಿಸುವ ಸಲುವಾಗಿ ತನ್ನ ಕೈಯಿಂದಲೇ ಚಿರತೆಗೆ ಹೊಡೆದಿದ್ದಾರೆ. ಪರಿಣಾಮ ಬಾಲಕನನ್ನು ಚಿರತೆ ಬಿಟ್ಟಿದ್ದು, ತಾಯಿಯ ಕೈಯನ್ನು ಕಚ್ಚಿಕೊಂಡಿದೆ. ಇದರಿಂದ ಮತ್ತಷ್ಟು ಗಾಬರಿಗೊಂಡ ದೀಪಾಲಿ, ಜೋರಾಗಿಯೇ ಕಿರುಚಿದ್ದಾರೆ. ಹೀಗಾಗಿ ಚಿರತೆ ಕೂಡಲೇ ಅಲ್ಲಿಂದ ಕಾಲ್ಕಿತ್ತಿತ್ತು. ಘಟನೆಯಿಂದ ಬಾಲಕನ ಕುತ್ತಿಗೆ, ಎಡಗಣ್ಣು ಹಾಗೂ ಕಿವಿಯಲ್ಲಿ ಕಚ್ಚಿದ ಗಾಯಗಳಾಗಿವೆ ಎಂದು ಅರಣ್ಯಾಧಿಕಾರಿ ವಿಶಾಲ್ ಅಧಗಲೆ ಶನಿವಾರ ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅರಣ್ಯಾಧಿಕಾರಿ ಸ್ಥಳಕ್ಕೆ ದೌಡಾಯಿಸಿ ಗ್ರಾಮದ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಗಾಯಾಳು ಬಾಲಕನನ್ನು ಮುಂಜಾನೆ 4 ಗಂಟೆ ಸುಮಾರಿಗೆ ಯಶ್ವಂತ್ ರಾವ್ ಚವಾನ್ ಮೆಮರಿಯಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸೋಮವಾರ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ ಎಂಬುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.
ಪುಷ್ಪಾವತಿ ನದಿ ಸಮೀಪದ ಧೊಲ್ವಾಡಿ ಗ್ರಾಮದಲ್ಲಿ ಹಲವು ಕುಟುಂಬಗಳು ವಾಸವಾಗಿವೆ. ಇದರಲ್ಲಿ ಹೆಚ್ಚಿನ ಕುಟುಂಬಗಳು ಕೆಲಸಕ್ಕಾಗಿ ನಾಸಿಕ್ ಜಿಲ್ಲೆಗೆ ವಲಸೆ ಹೋಗಿದ್ದಾರೆ. ಬೋನಿನ ಮೂಲಕ ಚಿರತೆಯನ್ನು ಸೆರೆಹಿಡಿಯಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದ್ರೆ ಪ್ರಾಣಿಗಳು ಇರುವುದರಿಂದ ಮನೆಯ ಹೊರಗಡೆ ಮಲಗಬೇಡಿ. ಹಾಗೆಯೇ ನಿಮ್ಮ ರಕ್ಷಣೆಗಾಗಿ ಸಾಕು ಪ್ರಾಣಿಗಳ ಮೊರೆ ಹೋಗಿ ಎಂದು ಸೂಚಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.