ಬೆಂಗ್ಳೂರು ದರೋಡೆ ಪ್ರಕರಣಕ್ಕೆ ಟ್ವಿಸ್ಟ್ – ಹ್ಯಾಪಿ ಎಂಡಿಂಗ್‍ಗೆ ಬಂದವರಿಂದಲೇ ಮಹಿಳೆಗೆ ಚಾಕು ಇರಿತ

Public TV
2 Min Read

ಬೆಂಗಳೂರು: ದರೋಡೆ ಪ್ರಕರಣವೊಂದು ಭಾರೀ ತಿರುವು ಪಡೆದುಕೊಂಡಿದ್ದು, ಪರಿಚಿತರೇ ದರೋಡೆ ಮಾಡಿದರೂ ಅವರ್ಯಾರೂ ಗೊತ್ತೇ ಇಲ್ಲ ಎಂದಿದ್ದ ಮಹಿಳೆಯ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಕುಡಿಯಲು ನೀರು ಕೇಳುವ ನೆಪದಲ್ಲಿ ಅಕ್ರಮ ಸಂಬಂಧ ಹೊಂದಿದ್ದವನೇ ಮಹಿಳೆಗೆ ಚಾಕುವಿನಿಂದ ಇರಿದ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ. ದರೋಡೆಕೋರರು ಪರಿಚಯವಿದ್ದರೂ ಸಹ ಮಹಿಳೆ ಅವರ್ಯಾರು ಗೊತ್ತೇ ಇಲ್ಲ ಎಂದು ದೂರು ನೀಡಿದ್ದು, ಡಬಲ್ ಗೇಮ್ ಆಡುವ ಮೂಲಕ ಮಾಜಿ ಮುಖ್ಯಮಂತ್ರಿಗಳ ಪ್ರತಿಭಟನೆಯಲ್ಲಿ ಬ್ಯುಸಿ ಇದ್ದ ಪೊಲೀಸರಿಗೆ ಮಹಿಳೆ ಥಂಡಾ ಹೊಡೆಸಿದ್ದಾಳೆ.

ಏನಿದು ಪ್ರಕರಣ?
ಅ.1 ರಂದು ಮಹಿಳೆಯೊಬ್ಬರ ಮನೆಗೆ ನುಗ್ಗಿ ಚಾಕು ಹಾಕಿ, ದರೋಡೆ ಮಾಡಲಾಗಿತ್ತು. ಯಾರೋ ಅಪರಿಚಿತರು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ, ಚಾಕುವಿನಿಂದ ಇರಿದು ದರೋಡೆ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಳು. ಈ ದೂರಿನ ಹಿನ್ನೆಲೆಯಲ್ಲಿ ಟವರ್ ಲೋಕೇಶನ್ ಮೂಲಕ ಬಾಗಲಕುಂಟೆ ಪೊಲೀಸರು ಆರೋಪಿಗಳಾದ ರಾಕೇಶ್ ಗೌಡ ಮತ್ತು ಇರ್ಫಾನ್ ಬಂಧಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರಿಗೆ ಬೇರೆಯದೇ ಸತ್ಯ ಅನಾವರಣವಾಗಿದೆ.

ಮಲ್ಲೇಶ್ವರದ ಗ್ಲಾಮರ್ ಸ್ಪಾ ಆ್ಯಂಡ್ ಸಲೂನ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ರಾಕೇಶ್ ಗೌಡಮ ಪರಿಚಯವಾಗಿತ್ತು. ಸ್ಪಾ ಹೆಸರಲ್ಲಿ ರಾಕೇಶ್ ಗೌಡ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಆಗಾಗ ಸ್ಪಾಗೆ ಆಗಮಿಸಿ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸುತ್ತಿದ್ದ. ಇದೇ ಪರಿಚಯದ ಮೇಲೆ ರಾಕೇಶ್ ಮಹಿಳೆಗೆ ಸ್ವಲ್ಪ ಹಣ ಕೊಟ್ಟಿದ್ದ. ಈ ಹಣ ಕೇಳಲು ರಾಕೇಶ್ ತನ್ನ ಸ್ನೇಹಿತ ಇರ್ಫಾನನ್ನೂ ಜೊತೆಗೆ ಕರೆದುಕೊಂಡು ಮಂಗಳವಾರ ಬಾಗಲಗುಂಟೆಯ ಮಹಿಳೆ ಮನೆಗೆ ಹೋಗಿದ್ದ.

ಈ ವೇಳೆ ಮಹಿಳೆಯ ಜೊತೆ ರಾಸಲೀಲೆ ನಡೆಸಿದ ರಾಕೇಶ್, ಬಳಿಕ ಹಣ ಕೊಡುವಂತೆ ಕೇಳಿದ್ದ. ನಾನು ನಿನ್ನ ಜೊತೆ ಸಹಕರಿಸಿಯೂ ಹಣವನ್ನೂ ಕೊಡಬೇಕೇ? ನಾನು ಹಣ ನೀಡಲ್ಲ ಎಂದು ಮಹಿಳೆ ದಬಾಯಿಸಿದ್ದಾಳೆ. ಮಹಿಳೆ ಕೂಗಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ರಾಕೇಶ್ ಗೌಡ ಮತ್ತು ಇರ್ಫಾನ್ ಅವಳ ಮುಖಕ್ಕೆ ಬಟ್ಟೆ ಸುತ್ತಿ ಕೈಗೆ ಚಾಕು ಇರಿದಿದ್ದರು. ನಂತರ ಮಹಿಳೆಯ ಮನೆಯಲ್ಲಿದ್ದ ಚಿನ್ನ ದೋಚಿ ರಾಕೇಶ್ ಮತ್ತೂಟ್ ಫೈನಾನ್ಸಿನಲ್ಲಿ ಅಡವಿಟ್ಟಿದ್ದ.

ರಾಕೇಶ್ ಗೌಡ ದರೋಡೆ ಮಾಡಿಕೊಂಡು ಹೋಗುತ್ತಿದ್ದಂತೆ ಮಹಿಳೆ ಪೊಲೀಸರಿಗೆ ಸತ್ಯ ಮರೆಮಾಚಿ, ಯಾರೋ ಅಪರಿಚಿತರು ನೀರು ಕೇಳಲು ಬಂದು ನನ್ನ ಮನೆ ದರೋಡೆ ಮಾಡಿದ್ದಾರೆ ಎಂದು ಸುಳ್ಳು ದೂರು ದಾಖಲಿಸಿದ್ದಳು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಮಹಿಳೆಯ ಡಬಲ್ ಗೇಮ್ ಸಹ ಬಯಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *