25 ವರ್ಷಗಳ ಹಿಂದಿನ ಕೊಲೆ ಕೇಸ್ ಬೇಧಿಸಿದ ಪೊಲೀಸರು

Public TV
2 Min Read

– ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ತುಮಕೂರು: ಸುಮಾರು 25 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಕಡೆಗೂ ಬಂಧಿಸಿದ್ದು, ಈ ಮೂಲಕ ಹಲವು ವರ್ಷಗಳ ಪ್ರಕರಣ ಅಂತ್ಯ ಕಂಡಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕರಕಲಘಟ್ಟದಲ್ಲಿ 1994 ಡಿಸೆಂಬರ್ 1ರಂದು ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಆರೋಪಿಯ ಹೆಸರು ಗೊತ್ತಿದ್ದರೂ ಪೊಲೀಸರು ಬಂಧಿಸಲು ಸಾಧ್ಯವಾಗಿರಲಿಲ್ಲ. 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖತರ್ನಾಕ್ ಆರೋಪಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಕೊಲೆಯಾದ ಮಹಿಳೆಯನ್ನು ಅದೇ ಗ್ರಾಮದ ಈರಮಲ್ಲಮ್ಮ ಎಂದು ಗುರುತಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಕೊರಟಗೆರೆ ಪೊಲೀಸರು ಪರಿಶೀಲನೆ ನಡೆಸಿ, ಸ್ಥಳೀಯರ ಮಾಹಿತಿ ಪ್ರಕಾರ ಅದೇ ಗ್ರಾಮದ ಸಿದ್ದಹನುಮಯ್ಯ ಕೆಎಎಸ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ನಂತರ ಪ್ರಕರಣ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ಪತ್ತೆಯಾಗದ ಕಾರಣ ತಲೆ ಮರೆಸಿಕೊಂಡಿದ್ದಾನೆ ಎಂದು 1997ರಲ್ಲಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.

25 ವರ್ಷಗಳ ಬಳಿಕ ಪ್ರಕರಣಕ್ಕೆ ಮರು ಜೀವ..!
ಕಳೆದ ಒಂದು ವರ್ಷದ ಹಿಂದೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿರುವ ಡಾ.ಕೆ.ವಂಶಿಕೃಷ್ಣ ಇತ್ತೀಚೆಗೆ ಕೊರಟಗೆರೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ವೇಳೆ ದೀರ್ಘ ಕಾಲದಿಂದ ಬಾಕಿ ಇರುವ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಈ ವೇಳೆ ಕರಕಲಘಟ್ಟ ಈರಮಲ್ಲಮ್ಮ ಕೊಲೆ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಸಿಪಿಐ ನದಾಫ್, ಪಿಎಸ್‍ಐ ಮಂಜುನಾಥ್‍ಗೆ ಸೂಚಿಸಿದ್ದರು. ಅವರ ಸೂಚನೆಯಂತೆ ಪ್ರಕರಣ ಬೆನ್ನತ್ತಿ ಹೊರಟ ನದಾಫ್ ಮತ್ತು ಮಂಜುನಾಥ್ ನೇತೃತ್ವದ ತಂಡ ಆರೋಪಿ ಸಿದ್ದಹನುಮಯ್ಯನನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ.

ಸಿದ್ದಹನುಮಯ್ಯ ಸಿರಾಜ್ ಆದ ಕಥೆ
ಪ್ರಕರಣದ ತನಿಖೆ ನಡೆಸಿದ ಸಿಪಿಐ ನದಾಫ್ ಹಾಗೂ ತಂಡಕ್ಕೆ ತುಂಬಾ ಇಂಟ್ರೆಸ್ಟಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಕೆಎಎಸ್ ಅಂತಲೇ ಕರಕಲಘಟ್ಟದಲ್ಲಿ ಫೇಮಸ್ ಆಗಿದ್ದ ಸಿದ್ದಹನುಮಯ್ಯ, ಈರಮಲ್ಲಮ್ಮ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ನಂತರ ಅವಳ ಮೈಮೇಲಿದ್ದ ಚಿನ್ನಾಭರಣ ದೋಚಿ ಹಲವು ವೇಷ, ಭಾಷೆಗಳ ಮೂಲಕ ತಲೆ ಮರೆಸಿಕೊಂಡು ಬಾಂಬೆ ಸೇರಿದ್ದ.

ನಂತರ ಬಾಂಬೆಯಲ್ಲಿ ಲಾರಿ ಕ್ಲೀನರ್ ಆಗಿ ಬಳಿಕ ಡ್ರೈವರ್ ಜೀವನ ಸಾಗಿಸುತ್ತಿದ್ದ. ಬಂಧನದ ಭೀತಿಯಿಂದ ಕರಕಲಘಟ್ಟದಲ್ಲಿದ್ದ ತನ್ನ ಹೆಂಡತಿ ಮಕ್ಕಳನ್ನು ಮರೆತು ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದ. ಕೆಲ ವರ್ಷಗಳ ಬಳಿಕ ಕೊಪ್ಪಳ ನಗರಕ್ಕೆ ಬಂದು ಸಿದ್ದಹನುಮಯ್ಯ ಬದಲಿಗೆ ಸಿರಾಜ್ ಎಂಬ ಹೆಸರು ಹೇಳಿಕೊಂಡು ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ. ನಂತರ ಕೊಪ್ಪಳದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೆಟ್ಟಹಳ್ಳಿಗೆ ಬಂದು ವಾಸವಾಗಿದ್ದ. ತವರು ಪ್ರೇಮ ಮರೆಯದ ಕಾರಣ ಕರಕಲಘಟ್ಟದ ಸಂಬಂಧಿಕರ ಜೊತೆ ಸಂಪರ್ಕದಲ್ಲಿದ್ದುಕೊಂಡು ಮೊದಲನೇ ಹೆಂಡತಿ, ಮಕ್ಕಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ನೆಲಮಂಗಲ ಬಳಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಮೂಲಕ ಹಳ್ಳ ಹಿಡಿದಿದ್ದ 25 ವರ್ಷಗಳ ಹಿಂದಿನ ಈರಮಲ್ಲಮ್ಮಳ ಕೊಲೆ ಪ್ರಕರಣದ ಆರೋಪಿ ಸಿದ್ದಹನುಮಯ್ಯನನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ತುಂಬಾ ಹಳೆಯ ಪ್ರಕರಣವನ್ನು ಭೇದಿಸಿದ ಸಿಪಿಐ ನಧಾಫ್, ಪಿಎಸ್‍ಐ ಮಂಜುನಾಥ್ ಮತ್ತವರ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ನಗದು ಬಹುಮಾನ ಘೋಷಿಸುವ ಮೂಲಕ ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *