ವಿಚ್ಛೇದನ ಹಂತ ತಲುಪಿದ ವಿವಾಹಿತನ ಸ್ಪರ್ಧಾತ್ಮಕ ಪರೀಕ್ಷೆ ಗೀಳು

Public TV
1 Min Read

ಭೋಪಾಲ್: ಕೋಚಿಂಗ್ ಕ್ಲಾಸ್ ಮಾಲೀಕನ ಸ್ಪರ್ಧಾತ್ಮಕ ಪರೀಕ್ಷೆಯ ಗೀಳಿನಿಂದಾಗಿ ನವ ದಾಂಪತ್ಯ ಜೀವನ ಮುರಿದು ಬೀಳುವ ಹಂತ ತಲುಪಿದೆ.

ಮಧ್ಯಪ್ರದೇಶದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ(ಡಿಎಲ್‍ಎಸ್‍ಎ)ದ ಸಲಹೆಗಾರರ ಮಾಹಿತಿ ಪ್ರಕಾರ, ಯುಪಿಎಸ್‍ಸಿ ಹಾಗೂ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಪತಿ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಪತಿಯಿಂದ ನಾನು ನಿರ್ಲಕ್ಷಿಸಲ್ಪಟ್ಟಿದ್ದೇನೆ ಎಂದು ಪತ್ನಿ ಆರೋಪಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಬೇರೆ ವಿಷಯಗಳತ್ತ ಪತಿ ಗಮನ ನೀಡಲ್ಲ. ಪತಿಯ ಹತ್ತಿರ ತೆರಳಿದಾಗಲೆಲ್ಲ ನಿರ್ಲಕ್ಷ್ಯ ವಹಿಸುತ್ತಿದ್ದರು ಎಂದು ಕೌನ್ಸಿಲಿಂಗ್ ಸಮಯದಲ್ಲಿ ಮಹಿಳೆ ತಿಳಿಸಿದ್ದಾಳೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಲಹೆಗಾರ್ತಿ ನೂರನ್ನಿಸಾ ಖಾನ್ ತಿಳಿಸಿದ್ದಾರೆ.

ಆಕೆಯ ಪತಿಯು ಈಗಾಗಲೇ ಪಿಎಚ್‍ಡಿ ಪಡೆದಿದ್ದು, ಅವರ ತಂದೆ, ತಾಯಿಗೆ ಇವರೊಬ್ಬರೇ ಮಗ. ಹೆತ್ತವರಲ್ಲಿ ಒಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಪೋಷಕರ ಒತ್ತಾಯದ ಮೇರೆಗೆ ಆತ ಮದುವೆ ಆಗಿದ್ದನು ಎಂದು ನೂರನ್ನಿಸಾ ತಿಳಿಸಿದ್ದಾರೆ.

ಇದೀಗ ಪತಿ ವಿಚ್ಛೇದನದ ಅರ್ಜಿ ಸಲ್ಲಿಸಿದ್ದು, ಪತ್ನಿಯು ತನ್ನನ್ನು ತೊರೆದು ತವರು ಮನೆಗೆ ತೆರಳಿದಾಗಿನಿಂದ ನನ್ನೊಂದಿಗೆ ಸಂಪರ್ಕ ಹೊಂದಿಲ್ಲ. ಮರಳಿ ಬರುವಂತೆ ಹಲವು ಬಾರಿ ಕರೆದರೂ ಸಹ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸಂಬಂಧಿಕರು ಹಾಗೂ ಇತರರು ಮಧ್ಯಸ್ಥಿಕೆ ವಹಿಸುವ ಪ್ರಯತ್ನಗಳು ಸಹ ವಿಫಲವಾಗಿವೆ. ಹೀಗಾಗಿ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಅಲ್ಲಿಂದ ಕೌನ್ಸಿಲಿಂಗ್‍ಗಾಗಿ ಉಲ್ಲೇಖಿಸಲಾಗಿದೆ ಎಂದು ನೂರನ್ನಿಸಾ ಖಾನ್ ಮಾಹಿತಿ ನೀಡಿದ್ದಾರೆ.

ನ್ಯಾಯಾಲಯವು ಪ್ರಕರಣದ ವಿಚಾರಣೆ ಪ್ರಾರಂಭಿಸುವುದಕ್ಕೂ ಮುನ್ನ ಇಬ್ಬರ ನಡುವೆ ಇನ್ನೂ ನಾಲ್ಕು ಸುತ್ತು ಸಮಾಲೋಚನೆ ನಡೆಯಬೇಕಿದೆ. ಅವರ ಮದುವೆಯ ಬಂಧವನ್ನು ಉಳಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಖಾನ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *