25,000 ರೂ.ಗೆ ಜೀತಕ್ಕಿರಿಸಿದ್ದ ಮಗ ಸಾವು – ರಹಸ್ಯವಾಗಿ ಸಮಾಧಿಯಲ್ಲಿ ಹೂತಿಟ್ಟಿದ್ದ ಮಾಲೀಕ ಅರೆಸ್ಟ್‌

Public TV
3 Min Read

– ಕರುಳು ಹಿಂಡುವ ಕಥೆ – ಪೊಲೀಸರು ಪ್ರಕರಣ ಭೇದಿಸಿದ್ದೇ ರೋಚಕ

ಚೆನ್ನೈ/ಹೈದರಾಬಾದ್‌: 25,000 ರೂ. ಸಾಲಕ್ಕಾಗಿ (Loan) ಜೀತಕ್ಕಿರಿಸಿಕೊಂಡಿದ್ದ ಹುಡುಗನೊಬ್ಬನ ಶವ ತಮಿಳುನಾಡಿನಲ್ಲಿ (TamilNadu) ಸಮಾಧಿಯಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು. ಆಂಧ್ರ ಪ್ರದೇಶದ ಬಾತುಕೋಳಿ ಸಾಕಣೆದಾರ (Duck Rearer) ಯಾನಾಡಿ ಬುಡಕಟ್ಟು ಸಮುದಾಯದ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳನ್ನು 25,000 ರೂ. ಸಾಲಕ್ಕೆ ಜೀತದಾಳುಗಳಾಗಿ ಇರಿಸಿಕೊಂಡಿದ್ದ. ಬಳಿಕ ತಾಯಿ ಇಬ್ಬರು ಮಕ್ಕಳನ್ನ ಬಿಟ್ಟು ಒಬ್ಬ ಮಗನನ್ನ ಮೇಲಾಧಾರವಾಗಿ (collateral) ಇರಿಸಿಕೊಂಡಿದ್ದ. ಮಹಿಳೆ ಬಡ್ಡಿ ಸಮೇತ ಸಾಲದ ಹಣ ಹೊಂದಿಸಿ ಮಗನನ್ನ ಬಿಡುವಂತೆ ಮಹಿಳೆ ಕೇಳಿದಾಗ ಹುಡುಗ ಓಡಿಹೋಗಿದ್ದಾನೆಂದು ಕಥೆ ಕಟ್ಟಿದ್ದ. ಇದನ್ನೂ ಓದಿ: ಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್‌ ವ್ಯಕ್ತಿ ಬಂಧನ

ಈ ಸಂಬಂಧ ಮಹಿಳೆ ನೀಡಿನ ದೂರಿನ ಮೇರೆಗೆ ಕೇಸ್‌ ದಾಖಲಿಸಿಕೊಂಡ ಪೊಲೀಸರು (Andhra Police) ಬಾತುಕೋಳಿ ಸಾಕಣೆದಾರನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಹುಡುಗ ಮೃತಪಟ್ಟಿರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಮಾಲೀಕನೇ ತಮಿಳುನಾಡಿನ ಕಾಂಚಿಪುರಂನಲ್ಲಿರುವ ತನ್ನ ಅತ್ತೆಯ ಮನೆಯ ಬಳಿ ಶವವನ್ನು ಹೂತಿದ್ದಾನೆಂದು ಬಾಯ್ಬಿಟ್ಟಿದ್ದಾನೆ. ಬಳಿಕ ಮಂಗಳವಾರ (ಮೇ 20) ಪೊಲೀಸರು ಹುಡುಗನ ಶವವನ್ನ ಹೊರತೆಗೆದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: Davanagere | ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ – 40ಕ್ಕೂ ಹೆಚ್ಚು ಮಂದಿಗೆ ಗಾಯ

ಕರುಳು ಹಿಂಡುವ ಕಥೆ ನೀವೂ ಓದಿ…
ಆಂಧ್ರ ಪ್ರದೇಶದ ನಿವಾಸಿ ಅನಕಮ್ಮ ಮತ್ತು ಆಕೆಯ ದಿ. ಪತಿ ಚೆಂಚಯ್ಯ ಮತ್ತವರ ಮೂವರು ಮಕ್ಕಳು ಬಾತುಕೋಳಿ ಸಾಕಣೆದಾರನ ಬಳಿ ಒಂದು ವರ್ಷದಿಂದ ಜೀತದಾಳುಗಳಾಗಿ ಕೆಲಸ ಮಾಡಿಕೊಂಡಿದ್ದರು. ಚೆಂಚಯ್ಯ ಮರಣದ ನಂತರ ಮಾಲೀಕ ಅನಕಮ್ಮ ಮತ್ತು ಆಕೆಯ ಮಕ್ಕಳನ್ನ ವಿರೀತವಾಗಿ ಶೋಷಣೆ ಮಾಡುತ್ತಿದ್ದ. ಆದ್ರೆ ಚೆಂಚಯ್ಯ ಮರಣಕ್ಕೂ ಮುನ್ನ 25,000 ರೂ. ಸಾಲ ಪಡೆದುಕೊಂಡಿದ್ದ ಕಾರಣ ಅವರು ಹೊರಗೆ ಹೋಗಲು ಸಾಧ್ಯವಿರಲಿಲ್ಲ. ಸಂಬಳ ಹೆಚ್ಚು ಮಾಡುವಂತೆ ಕೇಳಿಕೊಂಡಿದ್ದರೂ ಮಾಲೀಕನ ಮನಸ್ಸು ಕರಗಲಿಲ್ಲ. ಇದನ್ನೂ ಓದಿ: Bengaluru | ಅಕ್ರಮವಾಗಿ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ರೌಡಿಶೀಟರ್ ಬಂಧನ

ಕೊನೆಗೆ ಆಕೆ ಮನೆಯಿಂದ ಹೊರಹೋಗಲು ನಿರ್ಧರಿಸಿದಾಗ 25,000 ರೂ. ಸಾಲಕ್ಕೆ 20 ಸಾವಿರ ರೂ. ಬಡ್ಡಿ ಹಣ ಸೇರಿ 45,000 ರೂ. ಕೊಡುವಂತೆ ಪಟ್ಟು ಹಿಡಿದಿದ್ದ. ಇದರಿಂದ ವಿಧಿಯಿಲ್ಲದೇ ಅನಕಮ್ಮ ತಮ್ಮ ಮೂವರು ಮಕ್ಕಳಲ್ಲಿ ಒಬ್ಬ ಮಗನನ್ನ ಜೀತದಾಳಾಗಿ ಬಿಟ್ಟು ಹೋಗಲು ಒಪ್ಪಿಕೊಂಡಳು. ಆಗಾಗ್ಗೆ ತನ್ನ ಮಗನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಅಮ್ಮ ಫೋನ್‌ ಮಾಡಿದಾಗೆಲ್ಲ ಮಾಲೀಕ ತೊಂದ್ರೆ ಕೊಡ್ತಿದ್ದಾನೆ, ನನ್ನನ್ನು ಇಲ್ಲಿಂದು ಕರೆದುಕೊಂಡು ಹೋಗು ಅಂತ ಮಗ ಬೇಡಿಕೊಳ್ಳುತ್ತಿದ್ದ. ಅನಕಮ್ಮ ಏಪ್ರಿಲ್‌ನಲ್ಲಿ ಮಗನೊಂದಿಗೆ ಕೊನೆಯ ಬಾರಿ ಮಾತನಾಡಿದ್ದಳು.

ಹೇಗೋ ಏಪ್ರಿಲ್‌ ಅಂತ್ಯದ ವೇಳೆಗೆ ಅನಕಮ್ಮ ಕಟ್ಟಪಟ್ಟು ದುಡಿದು ಹಣ ಹೊಂದಿಸಿದಳು. ಸಾಲ ಪಾವತಿಸಿ ಮಗನನ್ನ ಬಿಡಿಸಿಕೊಂಡು ಬರಲೆಂದು ಆ ಬಾತುಕೋಳಿ ಸಾಕಣೆದಾರನ ಬಳಿ ಹೋದಾಗ ಆತ ತಕ್ಷಣಕ್ಕೆ ಆಟವಾಡಿಸಿದ. ಮೊದಮೊದಲು ಹುಡುಗನನ್ನ ಬೇರೆಡೆಗೆ ಕೆಲಸಕ್ಕೆ ಕಳುಹಿಸಿರುವುದಾಗಿ ಹೇಳುತ್ತಿದ್ದ ಮಾಲೀಕ ಬಳಿಕ ಓಡಿ ಹೋಗಿದ್ದಾನೆಂದು ಕಥೆ ಕಟ್ಟಿದ್ದ. ಇದರಿಂದ ಅನುಮಾನಗೊಂಡ ಅನಕಮ್ಮ ಬುಡಕಟ್ಟು ಸಮುದಾಯ ಮುಖಂಡದ ಸಹಾಯ ಪಡೆದು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ ಬಾತುಕೋಳಿ ಸಾಕಣೆದಾರನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆ ವೇಳೆ ಬಾತುಕೋಳಿ ಸಾಕಣೆದಾರ ಹುಡುಗ ಸಾವನ್ನಪ್ಪಿದ್ದಾನೆ ಮತ್ತು ಆತನನ್ನ ಕಾಂಚಿಪುರಂನಲ್ಲಿರುವ ತನ್ನ ಅತ್ತೆಯ ಮನೆಯ ಬಳಿ ರಹಸ್ಯವಾಗಿ ಸಮಾಧಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಈ ಪ್ರಕರಣದಲ್ಲಿ ಆರೋಪಿಗೆ ಸಹಕರಿಸಿದ್ದ ಬಾತುಕೋಳಿ ಸಾಗಣೆದಾರನ ಪತ್ನಿ, ಮಗನನ್ನೂ ಬಂಧಿಸಿ, ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ, ಬಾಲ ಕಾರ್ಮಿಕ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ. ಮಂಗಳವಾರ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಯಾನಾಡಿ ಬುಡಕಟ್ಟು ಜನಾಂಗದವರು ಜೀತಪದ್ದತಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ಈ ಸಮುದಾಯದ 50 ಜನರನ್ನ ರಕ್ಷಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವಿಧಾನಸೌಧ ಗೈಡೆಡ್ ಟೂರ್‌ಗೆ ಭಾನುವಾರ ಚಾಲನೆ – ಜೂ.1ರಿಂದ ಸಾರ್ವಜನಿಕರಿಗೆ ಪ್ರವೇಶ, ಶುಲ್ಕ ಪ್ರಕಟ

Share This Article