ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಸೊಸೆಗೆ ಮತ್ತೊಂದು ಮದ್ವೆ

Public TV
1 Min Read

ಭುವನೇಶ್ವರ್: ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಕುಟುಂಬಸ್ಥರು ಸೊಸೆಗೆ ಮತ್ತೊಂದು ಮದುವೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಒಡಿಶಾದ ಅಂಗುಲ್ ಜಿಲ್ಲೆಯ ಪ್ರತಿಮಾ ಬೆಹೆರಾ ಅವರು ತಮ್ಮ 20 ವರ್ಷದ ಸೊಸೆ ಲಿಲ್ಲಿ ಬೆಹೆರಾಗೆ ಮತ್ತೊಂದು ಮದುವೆ ಮಾಡಿಸಿದ್ದಾರೆ. ಪ್ರತಿಮಾ ಅವರು ಅಂಗುಲ್ ಜಿಲ್ಲೆಯ ಗೋಬರಾ ಗ್ರಾಮದ ಪಂಚಾಯ್ತಿ ಮಾಜಿ ಸರ್ಪಂಚ್ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 11ರಂದು ಟಾಲ್ಚರ್ ಏರಿಯಾದ ಜಗನ್ನಾಥ ದೇವಸ್ಥಾನದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಪ್ರತಿಮಾ ಅವರ ಕಿರಿಯ ಮಗ ರಶ್ಮಿರಂಜನ್ ಅವರು ತುರಂಗಾ ಗ್ರಾಮದ ಲಿಲ್ಲಿ ಅವರನ್ನು ಮದುವೆ ಮಾಡಿಕೊಂಡಿದ್ದರು. ಆದರೆ ಜುಲೈ ತಿಂಗಳಲ್ಲಿ ಭಾರತಪುರದಲ್ಲಿ ನಡೆದ ಕಲ್ಲಿದ್ದಲು ಗಣಿ ಅವಘಡದಲ್ಲಿ ರಶ್ಮಿರಂಜನ್ ಮೃತಪಟ್ಟಿದ್ದರು. ಪತಿಯ ಸಾವಿನಿಂದ ಲಿಲ್ಲಿ ತೀವ್ರ ದುಃಖದಲ್ಲಿದ್ದಳು. ಅಲ್ಲದೆ ಯಾರ ಜೊತೆಯೂ ಮಾತನಾಡದೇ ಮೂಕಳಾಗಿದ್ದಳು ಎಂದು ಪ್ರತಿಮಾ ಹೇಳಿದ್ದಾರೆ.

ಲಿಲ್ಲಿಯ ದುಃಖ ನೋಡಲಾಗದೇ ನಾನು ಆಕೆಗೆ ಸಮಾಧಾನ ಮಾಡಿದೆ. ಅಲ್ಲದೆ ಮತ್ತೊಂದು ಮದುವೆ ಆಗಿ ಜೀವನದಲ್ಲಿ ಮುಂದೆ ಸಾಗುವಂತೆ ಆಕೆಗೆ ಸಲಹೆ ನೀಡಿದೆ. ಲಿಲ್ಲಿ ಮರುಮದುವೆಗೆ ಒಪ್ಪಿದ ಕೂಡಲೇ ನಾನು ವರನನ್ನು ಹುಡುಕಲು ಶುರು ಮಾಡಿದೆ. ಮೊದಲು ನಾನು ನನ್ನ ಸಹೋದರನನ್ನು ಸಂಪರ್ಕಿಸಿ ಲಿಲ್ಲಿ ಹಾಗೂ ಅವರ ಮಗ ಸಂಗ್ರಾಮ್ ಬೆಹೆರಾ ನಡುವಿನ ವಿವಾಹದ ಪ್ರಸ್ತಾಪ ಮುಂದಿಟ್ಟೆ ಎಂದು ಪ್ರತಿಮಾ ತಿಳಿಸಿದ್ದಾರೆ.

ನನ್ನ ಮಗ ಮತ್ತೆ ಹಿಂತಿರುಗುವುದಿಲ್ಲ ಎಂದು ನನಗೆ ತಿಳಿದಿದೆ. ನಷ್ಟವನ್ನು ಭರಿಸುವುದಕ್ಕೆ ಆಗಲ್ಲ. ಕೇವಲ 20 ವರ್ಷದ ನನ್ನ ಸೊಸೆಯ ದುಃಖವನ್ನು ನನಗೆ ನೋಡಲು ಆಗುತ್ತಿರಲಿಲ್ಲ. ಜೀವನದಲ್ಲಿ ಸಂತೋಷವಾಗಿ ಇರಲು ಆಕೆಗೆ ಹಕ್ಕಿದೆ. ಹಾಗಾಗಿ ನನ್ನ ಸೊಸೆಗೆ ಮತ್ತೊಂದು ಮದುವೆ ಮಾಡಿಸಲು ನಿರ್ಧರಿಸಿದೆ ಎಂದು ಪ್ರತಿಮಾ ಪ್ರತಿಕ್ರಿಯಿಸಿದ್ದಾರೆ.

ಲಿಲ್ಲಿಯ ಪತಿ ಸಂಗ್ರಾಮ್, “ನನ್ನ ತಂದೆ ಹಾಗೂ ನನ್ನ ಕುಟುಂಬದ ಸದಸ್ಯರು ಲಿಲ್ಲಿಯನ್ನು ಸೊಸೆಯಾಗಿ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ನನಗೆ ಏಕೆ ಆಕ್ಷೇಪಣೆ ಇರುತ್ತೆ? ಬದಲಿಗೆ ನಾನೂ ತುಂಬಾ ಖುಷಿಯಾಗಿದ್ದೇನೆ” ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *