ಬೆಂಗಳೂರು: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಮೈಕೋಲೇಔಟ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ವರದಕ್ಷಿಣೆಗಾಗಿ ಗಂಡನೇ ಪತ್ನಿಯನ್ನೇ ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ.
28 ವರ್ಷ ವಯುಸ್ಸಿನ ನೇತ್ರಾ ಸಾವನ್ನಪ್ಪಿರೋ ಮಹಿಳೆ. ಉದಯ್ ಹಾಗೂ ನೇತ್ರಾ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ದಿನ ಕಳೆದಂತೆ ಪತಿ ಉದಯ್ ಆಕೆಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ನೇತ್ರಾಳ ಪೋಷಕರು ಮೊದಮೊದಲು ಹಣ ಕೇಳಿದಾಗೆಲ್ಲಾ ಕೊಡುತ್ತಿದ್ದರು. ಇಲ್ಲಿವರೆಗೆ ಸುಮಾರು 5 ಲಕ್ಷ ರೂ. ಹಣ ಕೊಟ್ಟಿದ್ದಾರೆ. ಹಣ ಕೈಗೆ ಸಿಗುತ್ತಿದ್ದಂತೆ ಪತಿ ಉದಯ್ ಕಂಠಪೂರ್ತಿ ಕುಡಿದು ಖರ್ಚು ಮಾಡಿ ಮತ್ತೆ ಹಣ ತುರುವಂತೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.
ಶುಕ್ರವಾರ ರಾತ್ರಿ ಇದೇ ವಿಚಾರಕ್ಕೆ ಮತ್ತೆ ಇಬ್ಬರ ನಡುವೆ ಜಗಳವಾಗಿ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿದ್ದಾನೆ. ಆದ್ರೆ ಊಟ ಮಾಡಿದ ನಂತರ ರಕ್ತ ವಾಮಿಟ್ ಮಾಡಿಕೊಂಡು ಸಾವನ್ನಪ್ಪಿದ್ದಾಳೆ ಅಂತ ಉದಯ್ ಕಥೆ ಕಟ್ಟಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಸದ್ಯಕ್ಕೆ ಮೈಕೋಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.