ಸುಳ್ವಾಡಿ ವಿಷ ಪ್ರಸಾದ ದುರಂತ ಬೆನ್ನಲ್ಲೇ ಮತ್ತೊಂದು ಘೋರ ಅವಘಡ

Public TV
1 Min Read

ಚಿಕ್ಕಬಳ್ಳಾಪುರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ವಿಷ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿದ ಘಟನೆ ಮಾಸುವ ಬೆನ್ನಲ್ಲೇ ಇದೀಗ ಇಂತದ್ದೇ ಘೋರ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ನರಸಿಂಹ ಪೇಟೆಯ ಗಂಗಮ್ಮ ಗುಡಿ ದೇವಸ್ಥಾನದಲ್ಲಿ ಶುಕ್ರವಾರ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯವಿತ್ತು. ಈ ವೇಳೆ ದೇವರ ಪ್ರಸಾದ ಸೇವಿಸಿ ಕವಿತಾ(28) ಸಾವನ್ನಪ್ಪಿ, ಒಂದೇ ಕುಟುಂಬದ 5 ಮಂದಿ ಅಸ್ವಸ್ಥರಾಗಿದ್ದಾರೆ. ಗಂಗಾಧರ, ರಾಜ, ರಾಧ ಹಾಗು ಮಕ್ಕಳಾದ ಗಾನವಿ, ಶರಣ ಅಸ್ವಸ್ಥರು.

ಇಬ್ಬರು ಮಕ್ಕಳು ಹಾಗೂ ರಾಜ ಅವರ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಅಸ್ವಸ್ಥರು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಡೆದಿದ್ದೇನು..?
ರಾಜ ಎಂಬವರು ದೇವಸ್ಥಾನದಿಂದ ಸ್ವೀಟ್ ಪೊಂಗಲ್ ತಂದಿದ್ದರು. ಪ್ರಸಾದವನ್ನು ಸೇವಿಸಿದ ಬಳಿಕ ಎಲ್ಲರಿಗೂ ವಾಂತಿಯಾಗಿದ್ದರಿಂದ, ಕೂಡಲೇ ಎಲ್ಲರನ್ನೂ ಸ್ಥಳೀಯರು ಚಿಂತಾಮಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕವಿತಾ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದ ಅಸ್ವಸ್ಥರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆತರಲಾಗಿದೆ.

ಪ್ರಸಾದ ಸೇವಿಸಿದ ಬಳಿಕವೇ ನಾವೆಲ್ಲರೂ ಅಸ್ವಸ್ಥರಾಗಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಆದ್ರೆ ದೇವಸ್ಥಾನದಲ್ಲಿ 100-150 ಜನ ಪ್ರಸಾದ ಸೇವಿಸಿದ್ದಾರೆ. ಹೀಗಾಗಿ ಒಂದೇ ಕುಟುಂಬಕ್ಕೆ ವಿಷ ಪ್ರಸಾದ ಸಿಕ್ಕಿತಾ ಅನ್ನೋ ಪ್ರಶ್ನೆ ಇದೀಗ ಮೂಡಿಬಂದಿದ್ದು, ವಿಚಾರಣೆ ಬಳಿಕವಷ್ಟೇ ಸತ್ಯಾಂಶ ಬೆಳಕಿಗೆ ಬರಬೇಕಿದೆ.

ಘಟನೆ ಸಂಬಂಧ ಪೊಲೀಸರು ದೇವಸ್ಥಾನದ ಟ್ರಸ್ಟಿ ಮತ್ತು ಅರ್ಚಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರ ಪೂಜಾ ಕೈಂಕರ್ಯದಲ್ಲಿ ಎಷ್ಟು ಜನ ಭಾಗಿಯಾಗಿದ್ದರು? ಪ್ರಸಾದ ತಯಾರಿಕೆ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *