35ರ ಶಿಕ್ಷಕಿಯೊಂದಿಗೆ ಲವ್- ವಿರೋಧಿಸಿದ್ದಕ್ಕೆ ಹೆತ್ತ ತಾಯಿಯನ್ನೇ ರಾಡಿನಿಂದ ಹೊಡೆದು ಕೊಂದ ಮಗಳು!

By
2 Min Read

ಲಕ್ನೋ: 18 ವರ್ಷದ ಯುವತಿಯೊಬ್ಬಳು ಹೆತ್ತ ತಾಯಿಯನ್ನೇ ರಾಡ್‍ನಿಂದ ಹೊಡೆದು ಪರಾರಿಯಾದ ಘಟನೆ ಘಜಿಯಾಬಾದ್‍ನ ಕವಿನಗರದಲ್ಲಿ ಶುಕ್ರವಾರ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ತಾಯಿ ಭಾನುವಾರದಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನಡೆದಿದ್ದೇನು?: ಯುವತಿ 35 ವರ್ಷದ ಶಿಕ್ಷಕಿ ಜೊತೆ ಪ್ರೇಮ ಸಂಬಂಧ ಹೊಂದಿದ್ದು, ಇದಕ್ಕೆ ತನ್ನ ಪ್ರೀತಿಗೆ ಅಡ್ಡಿಪಡಿಸಿದ ಕಾರಣಕ್ಕೆ ಮನೆಯಲ್ಲಿದ್ದ ಕಬ್ಬಿಣದ ರಾಡಿನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದು, ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಆಗ ತಾನೆ ಶಾಲೆಯಿಂದ ಬಂದ ಕಿರಿಯ ಮಗಳು ರಕ್ತದ ಮಡುವಿನಲ್ಲಿ ಬಿದಿದ್ದ ತಾಯಿಯನ್ನ ಕಂಡು ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಮನೆಗೆ ಧಾವಿಸಿದ ಪತಿ ತನ್ನ ಹೆಂಡತಿಯನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಅಲ್ಲಿಂದ ದೆಹಲಿಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ತೀವ್ರವಾದ ಗಾಯಗಳಿಂದ ತಾಯಿ ಮೃತಪಟ್ಟಿದ್ದಾರೆ.

ಘಟನೆಯ ಸಂಬಂಧ ಪೊಲೀಸರಿಗೆ ದೂರು ನೀಡಿದ ತಂದೆ, ತನ್ನ ಮಗಳು ಶಾಲೆಯ ಶಿಕ್ಷಕಿಯ ಜೊತೆ ಪ್ರೇಮ ಸಂಬಂಧವನ್ನ ಹೊಂದಿದ್ದಳು. ಮನೆಯಲ್ಲಿ ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಎರಡು ತಿಂಗಳ ಹಿಂದೆಯಷ್ಟೆ ಆಕೆ ಶಿಕ್ಷಕಿಯ ಜೊತೆ ಓಡಿ ಹೋಗಿದ್ದಳು. ಆಗ ಪೊಲೀಸರ ನೆರವಿನಿಂದ ಅವಳನ್ನ ಹುಡುಕಿ ಮನೆಗೆ ಕರೆತರಲಾಯಿತು. ಗಂಡನನ್ನು ಬಿಟ್ಟ 35 ವರ್ಷದ ಶಾಲಾ ಶಿಕ್ಷಕಿಯ ಜೊತೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದ ಮಗಳು, ಈಗ ತಾಯಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾಳೆ ಎಂದು ಹೇಳಿದ್ದಾರೆ.

ಮಗಳು ಶಿಕ್ಷಕಿಯೊಂದಿಗೆ ಪ್ರೇಮ ಸಂಬಂಧ ಹೊಂದಿರುವುದು ತಿಳಿದ ಬಳಿಕ ಆಕೆಯನ್ನ 11ನೇ ತರಗತಿಯಿಂದ ಬಿಡಿಸಲಾಗಿತ್ತು. ಅದೇ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದಳು ಎಂದು ತಂದೆ ಹೇಳಿದ್ದಾರೆ. ಈಗ ಮಗಳು ಪರಾರಿಯಾಗಿದ್ದು ಶಿಕ್ಷಕಿಯ ಬಳಿಗೇ ಹೋಗಿರಬಹುದು ಎಂದು ತಂದೆ ಶಂಕಿಸಿದ್ದಾರೆ.

ಶಿಕ್ಷಕಿ, ಯುವತಿಯ ವಿರುದ್ಧ ಎಫ್‍ಐಆರ್: ತಾಯಿಯ ಮೇಲೆ ಹಲ್ಲೆ ನಡೆಸಿರುವ ಯುವತಿ ಮತ್ತು ಶಿಕ್ಷಕಿಯ ವಿರುದ್ಧ ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಘಜಿಯಾಬಾದ್‍ನಲ್ಲಿ ನೆಲೆಸಿರುವ ಕುಟುಂಬ ಇಬ್ಬರು ಹೆಣ್ಣು ಮಕ್ಕಳನ್ನ ಹೊಂದಿದ್ದಾರೆ. ತಂದೆ ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಮನೆಯಲ್ಲಿರುತ್ತಿದ್ದರು. ಮಗಳ ಮತ್ತು ಶಾಲಾ ಶಿಕ್ಷಕಿಯ ವಿವರವನ್ನ ಭಾನುವಾರದಂದು ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *