-ಕಲ್ಯಾಣಮಂಟಪ ಕಳ್ಳಿ ಮುನ್ನಿಯ ಕಥೆ
ಬೆಂಗಳೂರು: ಇತ್ತೀಚೆಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಳ್ಳರು ಓಡಾಡುತ್ತಿರುತ್ತಾರೆ. ಇಲ್ಲೊಬ್ಬ ಕಳ್ಳಿ ಬೆಂಗಳೂರಿನ ಕಲ್ಯಾಣ ಮಂಟಪಗಳನ್ನೇ ಕೇಂದ್ರಿಕರಿಸಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದಳು. ಇದೀಗ ಆ ಕಳ್ಳಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಮುನ್ನಿ ಬಂಧಿತ ಕಳ್ಳಿ. ಮದುವೆ ನಡೆಯುತ್ತಿರುವ ಕಲ್ಯಾಣ ಮಂಟಪಗಳನ್ನ ಟಾರ್ಗೆಟ್ ಮಾಡಿಕೊಳ್ಳುವ ಮುನ್ನಿ ವಧುವಿನಂತೆ ಡ್ರೆಸ್ ಮಾಡಿಕೊಂಡು ಎಂಟ್ರಿ ಕೊಡುತ್ತಾಳೆ. ಕಲ್ಯಾಣ ಮಂಟಪದಲ್ಲಿ ಲವಲವಿಕೆಯಿಂದ ಓಡಾಡಿದ್ದಂತೆ ನಟಿಸಿ ಚಿನ್ನಾಭರಣ ಕದ್ದು ಎಸ್ಕೇಪ್ ಆಗೋದು ಮುನ್ನಿಯ ಕೆಲಸ.
ನಗರದ ಜಿಆರ್‍ಎಸ್ ಕಲ್ಯಾಣಮಂಟಪದಲ್ಲಿ ಶನಿವಾರ ನಡೆದ ಮದುವೆಯಲ್ಲಿಯೂ ಮುನ್ನಿ ತನ್ನ ಕೈಚಳಕ ತೋರಿಸಿದ್ದಳು. ಕಲ್ಯಾಣ ಮಂಟಪಕ್ಕೆ ಸಂಬಂಧಿಗಳ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದ ಮುನ್ನಿ ಕ್ಷಣ ಮಾತ್ರದಲ್ಲಿ 244 ಗ್ರಾಂ ಚಿನ್ನಾಭರಣವನ್ನು ಕದ್ದು ಮಾಯವಾಗಿದ್ದಳು. ಅಸಲಿಗೆ ಮುನ್ನಿ ಜಯನಗರಕ್ಕೆ ಶಾಪಿಂಗ್ ಗಾಗಿ ಬಂದಿದ್ದಳು. ಕಲ್ಯಾಣ ಮಂಟಪದಲ್ಲಿ ಮದುವೆ ನೋಡುತ್ತಿದ್ದಂತೆ ತನ್ನ ಕಾಯಕ ಶುರು ಹಚ್ಚಿಕೊಂಡಿದ್ದಳು.
ಮೂರು ತಿಂಗಳ ಹಿಂದೆಯೂ ಇದೇ ಕಲ್ಯಾಣ ಮಂಟಪದಲ್ಲಿ ತನ್ನ ಕೈಚಳಕ ತೋರಿಸಿದ್ದ ವಿಚಾರ ತನಿಖೆಯ ವೇಳೆ ಬಯಲಾಗಿದೆ. ಸದ್ಯ ಮುನ್ನಿಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ 244 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.