ಪೊಲೀಸರು ಬರದೆ ರಥ ಹೊರಡಲ್ಲ- ಇದು ಬ್ರಹ್ಮಾವರದ ಮಹಾಲಿಂಗೇಶ್ವರ ದೇವರ ಮಹಿಮೆ

Public TV
2 Min Read

ಉಡುಪಿ: ಒಂದು ಜಾತ್ರೆ ನಡೆಯಬೇಕಾದ್ರೆ ಅಲ್ಲಿ ರಥ, ಒಂದಷ್ಟು ಜನ ಜಂಗುಳಿ ಮಧ್ಯೆ ಶಾಸ್ತ್ರೋಕ್ತವಾಗಿ ಪೂಜೆ ನಡೆಯಬೇಕು. ಆದ್ರೆ ಉಡುಪಿಯ ಬ್ರಹ್ಮಾವರದಲ್ಲಿ ಅಪರೂಪದ ಜಾತ್ರೆ ನಡೆಯುತ್ತೆ. ಇಲ್ಲಿ ಯುನಿಫಾರ್ಮ್ ತೊಟ್ಟು ಪೊಲೀಸರು ದೇವಸ್ಥಾನದ ಮುಂದೆ ಬಂದಿಲ್ಲವೆಂದರೆ ರಥೋತ್ಸವ ಶುರುವಾಗಲ್ಲ.

ಹೌದು. ಏನಿದು ವಿಚಿತ್ರ ಎನಿಸಬಹುದು, ಆದರೂ ಇದು ಸತ್ಯ. ಬ್ರಹ್ಮಾವರದ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಂಪ್ರತಿ ಉತ್ಸವ ಸಂಭ್ರಮದಿಂದ ನೆರವೇರಿದ್ದು, ಇಲ್ಲಿನ ರಥೋತ್ಸವ ನಡೆಯಬೇಕು ಅಂದರೆ ಯಾರು ಇರುತ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದ್ರೆ ಪೊಲೀಸರಂತೂ ಜಾತ್ರೆಗೆ ಬಾರದಿದ್ದರೇ ಉತ್ಸವ ಶುರುವಾಗೋದೇ ಇಲ್ಲ. ಅಲ್ಲದೇ ಠಾಣೆಯಿಂದ ದೇವಸ್ಥಾನದವರೆಗೆ ಪೊಲೀಸರನ್ನು ಮೆರವಣಿಗೆಯಲ್ಲೇ ಕರೆತರಲಾಗುತ್ತದೆ. ಹಾಗೆಯೇ ವಿವಿಧ ವಾದ್ಯಘೋಷಗಳೊಂದಿಗೆ ಪೊಲೀಸರು ದೇವಸ್ಥಾನಕ್ಕೆ ಬರುವುದನ್ನೇ ಭಕ್ತರು ಕಾಯುತ್ತಿರುತ್ತಾರೆ. ಖಾಕಿಧಾರಿಗಳು ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ. ಈ ರೀತಿಯ ಸಂಪ್ರದಾಯದಿಂದ ಪೊಲೀಸರು ಹಾಗೂ ಊರ ಜನರ ಮಧ್ಯೆ ಅವಿನಾಭಾವ ಸಂಬಂಧ ನಿರ್ಮಾಣವಾಗಿದೆ.

ರಥೋತ್ಸವದ ದಿನ ಒಂದೆಡೆ ಬ್ರಹ್ಮಾವರ ಪೊಲೀಸ್ ಠಾಣೆಯ ಮುಂದೆ ಪೊಲೀಸ್ ಸಿಬ್ಬಂದಿ ಲಡ್ಡು, ಬಾಳೆಹಣ್ಣು, ಜ್ಯೂಸ್ ಜೋಡಿಸೋದರಲ್ಲಿ ಬ್ಯುಸಿಯಾಗಿದ್ದಾರೆ, ಎಸ್‍ಐ, ಎಎಸ್‍ಐ ತಮ್ಮ ಮನೆಯ ಕಾರ್ಯಕ್ರಮದ ತರ ಓಡಾಡುತ್ತಿರುತ್ತಾರೆ. ಇನ್ನೊಂದೆಡೆ ಠಾಣೆಯ ಅಂಗಳಕ್ಕೆ ಬಿರುದಾವಳಿಗಳ ಜೊತೆ ಬ್ಯಾಂಡು, ವಾದ್ಯ, ಕಹಳೆ ಜೊತೆಗೆ ದೇವಸ್ಥಾನಕ್ಕೆ ಸಂಬಂಧಪಟ್ಟವರು, ಊರ ಮುಖ್ಯಸ್ಥರು ಪೊಲೀಸ್ ಠಾಣೆಗೆ ಮೆರವಣಿಗೆಯ ಮೂಲಕ ಬರುತ್ತಾರೆ. ಜಾತ್ರೋತ್ಸವಕ್ಕೆ ಬರುವಂತೆ ಪೊಲೀಸರಿಗೆ ಮಲ್ಲಿಗೆ ಹೂವು ಕೊಟ್ಟು ಆಹ್ವಾನ ನೀಡುತ್ತಾರೆ. ಈ ವೇಳೆ ಪೊಲೀಸರು ದೇವಸ್ಥಾನಕ್ಕೆ ಹಣ್ಣುಕಾಯಿ ಕೊಡುತ್ತಾರೆ. ನೂರಾರು ಭಕ್ತರಿಗೆ ಸಿಹಿತಿಂಡಿ- ಹಣ್ಣು ಪಾನೀಯ ನೀಡಿ ಆತಿಥ್ಯ ವಹಿಸುತ್ತಾರೆ.

ಈ ಬಗ್ಗೆ ಮಹಾಲಿಂಗೇಶ್ವರ ದೇವಸ್ಥಾನದ ಅನಂತ ಪದ್ಮನಾಭ ಅವರು ಮಾತನಾಡಿ, ನಾವು ಬಹಳ ಸಂಭ್ರಮದಿಂದ ಈ ದಿನವನ್ನು ಎದುರು ನೋಡುತ್ತೇವೆ. ಪೊಲೀಸರಿಗೆ ಮೊದಲ ಗೌರವ ಕೊಡುವಾಗ ಹೆಮ್ಮೆಯಾಗುತ್ತದೆ. ರಕ್ಷಕರಾಗಿರುವ ಪೊಲೀಸರಿಗೆ ಎಲ್ಲಾ ಕಡೆ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಎಸ್ .ಪಿ ನಿಶಾ ಜೇಮ್ಸ್ ಮಾತನಾಡಿ, ಇದೊಂದು ಎಲ್ಲೂ ಇಲ್ಲದ ಸಂಪ್ರದಾಯ. ಜನರ ಜೊತೆ ಪೊಲೀಸರಿಗೆ ಬೆರೆಯಲು ಅವಕಾಶ. ನಾನೆಲ್ಲೂ ಇಂತಹ ಆಚರಣೆ ನೋಡಿಲ್ಲ ಅಂತ ಅವರು ಹೇಳಿದರು.

ಜಾತ್ರೆ ನಡೆಯಬೇಕಾದ್ರೆ ಪೊಲೀಸರ ಉಪಸ್ಥಿತಿ ಇರಲೇಬೇಕೆಂಬ ಸಂಪ್ರದಾಯ ಶುರುವಾಗಿದ್ದರ ಹಿನ್ನೆಲೆ ಸದ್ಯ ಯಾರಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಇದೊಂದು ವಿಶಿಷ್ಟ ಸಂಪ್ರದಾಯ ಆಗಿರೋದಂತೂ ಸತ್ಯ. ಭಧ್ರತೆಯ ಕಾರಣಕ್ಕೆ ಆರಂಭವಾದ ಈ ಆಚರಣೆ ಮುಂದೆ ಸಂಪ್ರದಾಯವಾಗಿ ಮಾರ್ಪಾಡಾಗಿರಬಹುದು. ಊರಿಗೆ, ಊರಿನ ಜನರಿಗೆ ರಕ್ಷಣೆ ಕೊಡುವ ಪೊಲೀಸರಿಗೆ ಉಡುಪಿಯ ಬ್ರಹ್ಮಾವರದಲ್ಲಿ ವಿಶೇಷ ರೀತಿಯಲ್ಲಿ ಸ್ಥಳೀಯರು ಗೌರವ ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *