ಅಮೆರಿಕದಲ್ಲಿ ಭಾರಿ ಹಿಮಪಾತದ ಸುಳಿವು – ನ್ಯೂಯಾರ್ಕ್ ಸೇರಿ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ

Public TV
2 Min Read

ನ್ಯೂಯಾರ್ಕ್: ಚಳಿಗಾಲದ ಚಂಡಮಾರುತ ಕೆನಾನ್ ಭೀಕರತೆಯಿಂದಾಗಿ ನ್ಯೂಯಾರ್ಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಹಿಮಪಾತ ಮತ್ತು ಗಾಳಿ ಬೀಸಲು ತೊಡಗಿದೆ. ಹೀಗಾಗಿ ಪೂರ್ವ ಅಮೆರಿಕಾವು ತುರ್ತು ಪರಿಸ್ಥಿತಿ ಘೋಷಿಸಿದೆ.

ಶುಕ್ರವಾರ ಸಂಜೆಯಿಂದ ಭಾನುವಾರದ ಆರಂಭದವರೆಗೆ ನ್ಯೂಯಾರ್ಕ್ ನಗರವು 8 ರಿಂದ 12 ಇಂಚುಗಳಷ್ಟು ಹಿಮಪಾತವನ್ನು ದಾಖಲಿಸುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನ್ಯೂಯಾರ್ಕ್ ರಾಜ್ಯಪಾಲ ಕ್ಯಾಥಿ ಹೊಚುಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶನಿವಾರ ಬೆಳಗ್ಗೆ ನೆಲದಿಂದ 7 ರಿಂದ 11 ಇಂಚುಗಳಷ್ಟು ಹಿಮ ಬಿದ್ದಿರುವುದರಿಂದ ಸಫೋಲ್ಕ್ ಮತ್ತು ನಸ್ಸೌ ಕೌಂಟಿಗಳು ಹೆಚ್ಚು ಹಾನಿಗೊಳಗಾಗುತ್ತಿವೆ. ಇದು ಇನ್ನೂ 5 ರಿಂದ 12 ಇಂಚುಗಳಷ್ಟು ಹೆಚ್ಚಾಗುವ ನಿರೀಕ್ಷೆಯಲ್ಲಿದೆ. ನ್ಯೂಯಾರ್ಕ್ ನಗರವು ಇಲ್ಲಿಯವರೆಗೆ 4 ಇಂಚುಗಳಷ್ಟು ಹಿಮಪಾತವನ್ನು ದಾಖಲಿಸಿದೆ. 3 ಗಂಟೆಗೆ ಮೊದಲು ಮತ್ತೊಂದು 4-7 ಇಂಚುಗಳಷ್ಟು ಹೆಚ್ಚಾಗುವ ಸಂಭವವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ ದಾಳಿ- 6 ಇಸ್ಲಾಮಿಕ್ ಸ್ಟೇಟ್ ಉಗ್ರರ ಹತ್ಯೆ

ಇದಕ್ಕೂ ಮುನ್ನ, ರಾಜ್ಯಪಾಲರು ಶುಕ್ರವಾರ ಸಂಜೆಯಿಂದಲೇ ನ್ಯೂಯಾರ್ಕ್‍ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಪೂರ್ವ ಅಮೆರಿಕಾದ ಇತರ ರಾಜ್ಯಗಳಲ್ಲಿಯೂ ಸಹ ಭಾರೀ ಹಿಮಪಾತವನ್ನು ನಿರೀಕ್ಷಿಸಲಾಗಿದೆ. ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಲಾಗಾರ್ಡಿಯಾ ವಿಮಾನ ನಿಲ್ದಾಣ ಮತ್ತು ಸೆಂಟ್ರಲ್ ಪಾರ್ಕ್‍ನಲ್ಲಿ ಕಳೆದ 12 ಗಂಟೆಗಳಲ್ಲಿ ಹಿಮ ಪ್ರಮಾಣವು 5 ಇಂಚುಗಳನ್ನು ಮೀರಿದೆ ಎಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ರಾಷ್ಟ್ರೀಯ ಹವಾಮಾನ ಇಲಾಖೆಯು ಟ್ವಿಟರ್ ಮೂಲಕ ತಿಳಿಸಿದೆ.‌

ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಿಂದ ಒಟ್ಟು 80 ಪ್ರತಿಶತದಷ್ಟು 460 ವಿಮಾನಗಳ ಹಾರಾಟವು ರದ್ದಾಗಿದೆ. ಇದರ ಮಧ್ಯೆ ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 90 ಪ್ರತಿಶತ ವಿಮಾನಗಳು ಮತ್ತು ಲಾಗಾರ್ಡಿಯಾ ವಿಮಾನ ನಿಲ್ದಾಣದಿಂದ 97 ಪ್ರತಿಶತ ವಿಮಾನಗಳು ಕ್ರಮವಾಗಿ 322 ಮತ್ತು 279 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಟ್ರಾವೆಲ್ ಇನ್ಫರ್ಮೇಷನ್ ಪ್ಲಾಟ್‍ಫಾರ್ಮ್ ಫ್ಲೈಟ್ ಅವೇರ್.ಕಾಮ್ ಹೇಳಿದೆ. ಇದನ್ನೂ ಓದಿ: ಭಾರತಕ್ಕೆ ಭೇಟಿ ನೀಡಲಿದ್ದಾರೆ ಒಮಾನ್ ರಕ್ಷಣಾ ಅಧಿಕಾರಿಗಳು

ಇದೇ ಮಾದರಿಯಲ್ಲಿ ರಾಜ್ಯದಲ್ಲಿ 3 ವಿಮಾನ ನಿಲ್ದಾಣಗಳಿಗೆ ಹಾರಾಟವನ್ನು ರದ್ದುಗೊಳಿಸಲಾಗಿದೆ. ಭಾರೀ ಹಿಮಪಾತದಿಂದಾಗಿ ರಸ್ತೆಗಳು ಮತ್ತು ಮೇಲ್ಮೈಗಳು ಜಾರು ಆಗಿರಬಹುದು. ನ್ಯೂಯಾರ್ಕ್ ನಿವಾಸಿಗಳು ಅನಗತ್ಯ ಪ್ರಯಾಣದಿಂದ ದೂರವಿರಲು ಸಲಹೆ ನೀಡಲಾಗುತ್ತದೆ ಎಂದು ನ್ಯೂಯಾರ್ಕ್ ಸಿಟಿ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಸಾಮಾಜಿಕ ಜಾಲತಾಣದ ಮೂಲಕ ಮುನ್ನೆಚ್ಚರಿಕೆಯನ್ನು ನೀಡಿದೆ.

ನ್ಯೂಯಾರ್ಕ್ ನಿವಾಸಿಗಳು ಪ್ರಯಾಣಿಸಬೇಕಾದರೆ ಸಮೂಹ ಸಾರಿಗೆಯನ್ನು ಬಳಸಲು ಒತ್ತಾಯಿಸಲಾಗಿದೆ. ಆದಾಗ್ಯೂ, ನ್ಯೂಯಾರ್ಕ್ ನಗರದಲ್ಲಿ ಹಡಗು ಸೇವೆಯನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗಿದೆ. ಆದರೆ ಲಾಂಗ್ ಐಲ್ಯಾಂಡ್ ರೈಲು ರಸ್ತೆ ಸೇವೆಯನ್ನು ಮುನ್ನೆಚ್ಚರಿಕೆಯಾಗಿ ರಾತ್ರಿಯಿಡೀ ಸ್ಥಗಿತಗೊಳಿಸಲಾಗಿದೆ. ಲಾಂಗ್ ಐಲ್ಯಾಂಡ್‍ನ ಸಫೆÇಲ್ಕ್ ಕೌಂಟಿ ಮತ್ತು ಕನೆಕ್ಟಿಕಟ್‍ನ ನ್ಯೂ ಲಂಡನ್ ಕೌಂಟಿಯಲ್ಲಿ ಗಂಟೆಗೆ 60 ಮೈಲುಗಳಷ್ಟು ಬಲವಾದ ಗಾಳಿಯೊಂದಿಗೆ ಹಿಮಪಾತದ ಎಚ್ಚರಿಕೆ ಜಾರಿಯಲ್ಲಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *