ಆಲ್ಕರಜ್‌ ಹ್ಯಾಟ್ರಿಕ್‌ ಕನಸು ಭಗ್ನ- ಚೊಚ್ಚಲ ವಿಂಬಲ್ಡನ್‌ ಗೆದ್ದ ಸಿನ್ನರ್‌ | ನಗದು ಬಹುಮಾನ ಎಷ್ಟು?

Public TV
1 Min Read

ಲಂಡನ್‌: ಇಟಲಿಯ ಜಾನ್ನಿಕ್‌ ಸಿನ್ನರ್‌ (Jannik Sinner) ಚೊಚ್ಚಲ ಬಾರಿಗೆ ವಿಂಬಲ್ಡನ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್‌ ಆಲ್ಕರಜ್‌ (Carlos Alcaraz) ವಿರುದ್ಧ 4-6, 6-4, 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಈ ಸೋಲಿನೊಂದಿಗೆ ಹ್ಯಾಟ್ರಿಕ್‌ ವಿಂಬಲ್ಡನ್‌ ಪ್ರಶಸ್ತಿ ಗೆಲ್ಲುವ ಆಲ್ಕರಜ್‌ ಕನಸು ಭಗ್ನಗೊಂಡಿತು. ಸಿನ್ನರ್‌ಗೆ ಶರಣಾಗುವ ಮೂಲಕ ವಿಂಬಲ್ಡನ್‌ನಲ್ಲಿ ಸತತ 20 ಗೆಲುವುಗಳ ಓಟಕ್ಕೂ ಬ್ರೇಕ್‌ ಬಿತ್ತು. ಯಾನ್ನಿಕ್‌ ಸಿನ್ನರ್‌ ಅವರಿಗೆ ಈ ವರ್ಷ 2ನೇ ಹಾಗೂ ಒಟ್ಟಾರೆ 4ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಸಿಕ್ಕಿದಂತಾಗಿದೆ.

ಕಳೆದ ಎರಡೂ ಆವೃತ್ತಿಗಳಲ್ಲಿ ದಿಗ್ಗಜ ನೊವಾಕ್ ಜೊಕೊವಿಕ್‌ (Novak Djokovic) ಅವರನ್ನ ಮಣಿಸಿ 2 ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದ್ದ ಅಲ್ಕರಾಜ್‌ ಸತತ 3ನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರುವ ತವಕದಲ್ಲಿದ್ದರು. ಈ ಬಾರಿಯ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ನಂತೆ ಪುರುಷರ ಸಿಂಗಲ್ಸ್‌ನಲ್ಲೂ ಹೊಸ ಚಾಂಪಿಯನ್‌ನ ಉದಯವಾಗಿರುವುದು ವಿಶೇಷ.

ಬಹುಮಾನ ಎಷ್ಟು?
ಚಾಂಪಿಯನ್‌ ಆಗಿರುವ ಸಿನ್ನರ್‌ಗೆ 30 ಲಕ್ಷ ಪೌಂಡ್‌(ಅಂದಾಜು 34.75 ಕೋಟಿ ರೂ.) ಬಹುಮಾನ ಸಿಕ್ಕಿದರೆ, ರನ್ನರ್‌ ಅಪ್‌ ಆದ ಆಲ್ಕರಜ್‌ಗೆ 15.2 ಲಕ್ಷ ಪೌಂಡ್‌ (ಅಂದಾಜು 17.61 ಕೋಟಿ ರೂ.) ಬಹುಮಾನ ಮೊತ್ತ ಸಿಕ್ಕಿದೆ.

 

Share This Article