ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್

Public TV
1 Min Read

ಕೋಲ್ಕತ್ತಾ: ಯುವತಿಯರ ಕನ್ಯತ್ವದ ಬಗ್ಗೆ ಅಶ್ಲೀಲವಾಗಿ ಪಶ್ಚಿಮ ಬಂಗಾಳದ ಪ್ರೊಫೆಸರ್ ಒಬ್ಬರು ಬರೆದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಕೋಲ್ಕತ್ತಾದ ಪ್ರತಿಷ್ಠಿತ ಜಾಧವ್‍ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಕನಕ್ ಸರ್ಕಾರ್ ಕನ್ಯತ್ವವನ್ನು ತಂಪು ಪಾನೀಯಕ್ಕೆ ಹೋಲಿಸಿ, ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ ಎಂದು ಪ್ರಶ್ನಿಸಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

ನೀವು ಸೀಲ್ ಒಡೆದಿರುವ ತಂಪು ಪಾನೀಯವನ್ನು ಖರೀದಿ ಮಾಡುತ್ತೀರಾ ಅಥವಾ ಪ್ಯಾಕ್ ಆಗಿರುವ ಬಿಸ್ಕೇಟ್ ಅನ್ನು ಖರೀದಿ ಮಾಡುತ್ತೀರಾ ಎಂದು ಯುವಕರಿಗೆ ಕನಕ್ ಸರ್ಕಾರ್ ಪ್ರಶ್ನೆ ಮಾಡಿದ್ದಾರೆ.

20 ವರ್ಷ ಬೋಧನ ಅನುಭವ ಮತ್ತು ಪಿಎಚ್‍ಡಿ ಮಾರ್ಗದರ್ಶಕರಾಗಿರುವ ಕನಕ್ ಸರ್ಕಾರ್, ಕನ್ಯತ್ವ ಹೊಂದಿರುವ ಯುವತಿಯರ ಬಗ್ಗೆ ಈಗಿನ ಹುಡುಗರಿಗೆ ಅರಿವು ಇಲ್ಲ. ಹುಡುಗಿ ಸೀಲ್ ಆಗಿದ್ದರೆ ಆಕೆ `ದೇವತೆ’ ಎಂದು ಬರೆದುಕೊಂಡಿದ್ದಾರೆ.

ಹುಟ್ಟಿನಿಂದ ಸೀಲ್ ಓಪನ್ ಆಗುವರೆಗೂ ಆಕೆ ಹುಡುಗಿಯಾಗಿರುತ್ತಾಳೆ. ಮದುವೆಯ ಸಮಯದಲ್ಲೂ ಕನ್ಯತ್ವವನ್ನು ಉಳಿಸಿಕೊಂಡಿದ್ದಾಳೆ ಎಂದರೆ ಆಕೆ ಉತ್ತಮ ಗುಣ ನಡತೆಯ ಜೊತೆ ಸುಸಂಸ್ಕೃತೆ ಎಂದರ್ಥ. ಇಂದಿನ ಕಾಲದಲ್ಲಿ ಹುಡುಗರು, ಹುಡುಗಿಯರು ಬ್ರಹ್ಮಚರ್ಯೆ ಮತ್ತು ಕನ್ಯತ್ವದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಹುಡುಗಿಯರು ಹುಡುಗರ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಕನ್ಯತ್ವದ ಬಗ್ಗೆ ಜಪಾನ್ ದೇಶದ ಉದಾಹರಣೆ ನೀಡಿದ ಅವರು, ಜಪಾನಿನ ಶೇ.99ರಷ್ಟು ಹುಡುಗಿಯರು ಮದುವೆಯಾಗುವವರೆಗೂ ಕನ್ಯತ್ವ ಉಳಿಸಿಕೊಂಡಿರುತ್ತಾರೆ ಎನ್ನುವುದು ಹೆಮ್ಮೆಯ ವಿಚಾರ. ಜಪಾನಿನ ಸಮಾಜ ಅಭಿವೃದ್ಧಿ ಹೊಂದಿದೆ ಎನ್ನುವುದನ್ನು ಇದರಿಂದಲೇ ಗುರುತಿಸಬಹುದು ಎಂದು ಹೇಳಿದ್ದಾರೆ.

ಪಾಶ್ಚಿಮಾತ್ಯ ಜೀವನ ಶೈಲಿ ಅಳವಡಿಸಿಕೊಂಡ ಕಾರಣ ಇಂದಿನ ಯುವಕ, ಯುವತಿ ಹಾಳಾಗುತ್ತಿದ್ದಾರೆ. ಹೀಗಾಗಿ ಇವರಿಗೆ ಕನ್ಯತ್ವದ ಮಹತ್ವವೇ ತಿಳಿದಿಲ್ಲ ಎಂದು ದೂರಿದ್ದಾರೆ.

ಫೇಸ್‍ಬುಕ್ ನಲ್ಲಿ ಕೆಲ ದಿನಗಳಿಂದ ಕನ್ಯತ್ವದ ಬಗ್ಗೆ ಪೋಸ್ಟ್ ಪ್ರಕಟಿಸುತ್ತಿದ್ದ ಕನಕ್ ಸರ್ಕಾರ್ ತನ್ನ ಅಭಿಪ್ರಾಯಗಳು ವಿವಾದಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ತಿಳಿದು ಎಲ್ಲ ಪೋಸ್ಟ್ ಗಳನ್ನು ಈಗ ಡಿಲೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *