ನವದೆಹಲಿ: ರಾಜ್ಯದ ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ 23 ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ (Yettinahole Drinking Water Project) ಹಿನ್ನೆಡೆಯಾಗಿದೆ. ಹೆಚ್ಚುವರಿಯಾಗಿ 423 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡಬೇಕೆಂಬ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಒಪ್ಪಿಗೆ ಕೊಟ್ಟಿಲ್ಲ. ಇದರ ಬೆನ್ನಲ್ಲೇ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್‌ರನ್ನು ಡಿಸಿಎಂ ಡಿಕೆಶಿ (DK Shivakumar) ಭೇಟಿಯಾಗಿ ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ನೀಡಿಕೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ.
ಎತ್ತಿನಹೊಳೆ ಯೋಜನೆಗಿರುವ ಅಡ್ಡಿಯನ್ನು ಬಗೆಹರಿಸೋದಾಗಿ ಕೇಂದ್ರ ಭರವಸೆ ನೀಡಿದೆ ಎನ್ನಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ, ಕೃಷ್ಣ ಮೇಲ್ದಂಡೆ, ಕಳಸಾ ಬಂಡೂರಿ ಯೋಜನೆ ವಿಚಾರವಾಗಿ ಜಲಶಕ್ತಿ ಸಚಿವ ಸಿಆರ್ ಪಾಟೀಲರನ್ನೂ ಡಿಕೆಶಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಮಧ್ಯೆ, ಸಂಸತ್ ಅಧಿವೇಶನ ಆರಂಭವಾಗುವ ಮುನ್ನ ನಮ್ಮ ಎಲ್ಲಾ ಸಂಸದರ ಜೊತೆ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹದಾಯಿ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಒತ್ತಡ ಹೇರಲಾಗುವುದು ಎಂದು ಡಿಕೆಶಿ ತಿಳಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನೂ ಕೂಡ ಭೇಟಿಯಾಗಿ, ಎಲ್ಲಾ ಸಹಕಾರ ನೀಡುವಂತೆ ಕೇಳಿಕೊಂಡಿದ್ದಾರೆ.