ಸಮಯ ಬಂದಾಗ ಮತ್ತೆ ಸಚಿವ ಸ್ಥಾನ ಪಡೆಯುತ್ತೇನೆ: ಕೆ.ಎನ್.ರಾಜಣ್ಣ

Public TV
3 Min Read

– ಕಾಣದ ಕೈಗಳ ಕೈವಾಡ ಇದೆ, ಸಿಎಂಗೂ ಅದು ಗೊತ್ತಿಲ್ಲ ಎಂದ ಮಾಜಿ ಸಚಿವ

ತುಮಕೂರು: ಸಮಯ ಬಂದಾಗ ಇದೇ ಅವಧಿಯಲ್ಲಿ ಸಚಿವ ಸ್ಥಾನ ಮತ್ತೆ ಪಡೆಯುತ್ತೇನೆ. ಹೈಕಮಾಂಡ್ ಕನ್ವಿನ್ಸ್ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಭರವಸೆ ವ್ಯಕ್ತಪಡಿಸಿದರು.

ಸಚಿವ ಸ್ಥಾನದಿಂದ ವಜಾ ಆದ ಬಳಿಕ ರಾಜಣ್ಣ ತಮ್ಮ ಸ್ವಕ್ಷೇತ್ರ ಮಧುಗಿರಿಗೆ ಇದೇ ಮೊದಲ ಬಾರಿಗೆ ಭೇಟಿ ಕೊಟ್ಟಿದ್ದಾರೆ. ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ನಡೆಸಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಮಧುಗಿರಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ: ಅಭಿಮಾನಿಗಳಿಗೆ ರಾಜಣ್ಣ ಭಾವುಕ ಪತ್ರ

ಕಳೆದ ವಾರ ಸಚಿವನಾಗಿ ಮಧುಗಿರಿಗೆ ಬಂದಿದ್ದೆ. ಈ ವಾರ ಮಾಜಿ ಸಚಿವನಾಗಿ ಬಂದಿದ್ದೇನೆ. ಇದರಲ್ಲಿ ಯಾವುದೇ ವ್ಯತ್ಯಾಸ ನನಗೆ ಕಾಣುತ್ತಿಲ್ಲ. ಜನರ ಪ್ರೀತಿ-ವಿಶ್ವಾಸ ಒಂದಿದ್ದರೆ ಸಾಕು. ನಿನ್ನೆ ರಾತ್ರಿ ಜಿ ಪರಮೇಶ್ವರ್ ಕೂಡ ನನ್ನ ಮನೆಗೆ ಬಂದು ಕುಶಲೋಪರಿ ವಿಚಾರಿಸಿ ಹೋಗಿದ್ದಾರೆ. ಅಸೆಂಬ್ಲಿ ಮುಗಿದ ಬಳಿಕ ಹೈಕಮಾಂಡ್‌ಗೆ ಭೇಟಿ ಆಗಿ ಸತ್ಯ ವಿವರಿಸುತ್ತೇನೆ. ನನಗೆ ರಾಜಕೀಯ ಏಳು-ಬೀಳು ಹೊಸತಲ್ಲ. ಸಮಯ ಬಂದಾಗ ಮತ್ತೆ ಸಚಿವನಾಗುತ್ತೇನೆ. ಹೈಕಮಾಂಡ್ ಕನ್ವಿನ್ಸ್ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಶೂ ಭಾಗ್ಯ ನನ್ನ ಮನವಿ ಮೇರೆಗೆ ಜಾರಿ ಮಾಡಿದ್ದು. ರಾಹುಲ್ ಗಾಂಧಿ ಮತಗಳ್ಳತನ ವಿರುದ್ಧ ಹೋರಾಟ ಮಾಡುತ್ತಿದ್ದರು. ಸಿಟಿಯಲ್ಲಿ ಮತಗಳ್ಳತನ ಹೆಚ್ಚಾಗುತ್ತದೆ. ಗ್ರಾಮಾಂತರದಲ್ಲಿ ಮತಗಳ್ಳತನ ಆಗಲ್ಲ. ಆರ್‌ಎಸ್‌ಎಸ್ ನವರು ಬಹಳ ಪದ್ಧತಿ ಪೂರ್ವಕವಾಗಿ ಚುನಾವಣೆ ಮಾಡುತ್ತಾರೆ. ನಮ್ಮ ಕಾರ್ಯಕರ್ತರು ಮತಗಳ್ಳತನ ಕುರಿತಂತೆ ಎಚ್ಚರಿಕೆಯಿಂದ ಇರಬೇಕು. ಮತಗಳ್ಳತನದ ವಿರುದ್ಧದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಅಸೆಂಬ್ಲಿ ಮುಗಿದ ಬಳಿಕ ನಾನು ಹೈಕಮಾಂಡ್‌ಗೆ ಭೇಟಿಯಾಗಿ ವಿವರಿಸುತ್ತೇನೆ. ಆಗ ನನಗೆ ನೈಜ ಕಾರಣ ಗೊತ್ತಾಗುತ್ತದೆ. ನನಗೆ ಯಾವ ಬೇಸರನೂ ಇಲ್ಲ. ಇಂಡಿಯಾ ಒಕ್ಕೂಟಕ್ಕೆ 20 ಸೀಟ್ ಜಾಸ್ತಿ ಪಡೆದರೆ, ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ನನಗೆ ರಾಜಕೀಯ ಏಳು-ಬೀಳು ಹೊಸತ್ತಲ್ಲ. ಜನರ ವಿಶ್ವಾಸ, ಆಶೀರ್ವಾದ ಇರೋವರೆಗೂ ಎಂತಹ ಸಂದರ್ಭವನ್ನೂ ಎದುರಿಸಬಹುದು. ಅಧಿಕಾರ ಬಂದರೆ ಜನಪರ ಕೆಲಸ ಮಾಡುತ್ತೇನೆ. ನಾನು ಸುಳ್ಳು ಹೇಳೋನು, ಮೋಸ ಮಾಡೋನು ಅಲ್ಲ. ಸ್ವಾರ್ಥಕೋಸ್ಕರ ಸುಳ್ಳು ಹೇಳಿಲ್ಲ. ಅಧಿಕಾರ ಇಲ್ಲದೇ ಹಾಳಾಗಿ ಹೋಗಲಿ. ಜನರ ವಿಶ್ವಾಸ-ಪ್ರೀತಿ ಹೀಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಹುಲ್‌ ಗಾಂಧಿ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಲಾಗಿದೆ: ಸಿದ್ದರಾಮಯ್ಯ

ವಿ.ಸೋಮಣ್ಣ ಮಧುಗಿರಿ ಹಾಗೂ ಕೊರಟಗೆರೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅದನ್ನು ಹೇಳಿದರೆ ಸೋಮಣ್ಣನ ಹೊಗಳಿದರು ಅಂತಾರೆ. ಶ್ರೀರಾಮುಲು ಅವರನ್ನು ನಾನೇ ಕಾಂಗ್ರೆಸ್‌ಗೆ ಕರೆದುಕೊಂಡು ಬರುತ್ತೇನೆ. ಶ್ರೀರಾಮುಲುಗೆ ನನ್ನ ಮೇಲೆ ವಿಶ್ವಾಸ ಇದೆ. ಹಾಗಾಗಿ ಅವರು ಬಿಜೆಪಿಗೆ ಬರುವಂತೆ ಹೇಳಿರಬಹುದು. ನನಗೆ ಕಾಂಗ್ರೆಸ್ ಏನೂ ಕಡಿಮೆ ಮಾಡಿಲ್ಲ. ಸಿಎಂ ಅಧಿವೇಶನಕ್ಕೆ ಬಂದು ವಿಧಾನ ಸೌಧದಲ್ಲಿ ಇಳಿಯುತ್ತಿದ್ದಂತೆ ಕಾಲ್ ಬಂದಿದೆ. ಸಿಎಂ ಕಾರಿನಲ್ಲೇ ಕುಂತು ಮಾತನಾಡಿದರು. ಅದೇ ಮಾತು ನನ್ನ ವಿಚಾರ ಎಂದರು.

ನನ್ನ ವಜಾಗೆ ಕಾರಣ ಏನೂ ಅನ್ನೋದು ದೆಹಲಿಗೆ ಹೋದ ನಂತರ ಗೊತ್ತಾಗಲಿದೆ. ಮತಗಳ್ಳತನದ ಹೇಳಿಕೆ ಸೇರಿದಂತೆ ಹಿಂದಿನ ಎಲ್ಲಾ ಹೇಳಿಕೆ ಸೇರಿಸಿ ಹೈಕಮಾಂಡ್‌ಗೆ ಬೇರೆ ರೀತಿ ಅರ್ಥೈಸಿದ್ದಾರೆ. ಪಾರ್ಟಿಯಲ್ಲಿ ವಾಕ್ ಸ್ವಾತಂತ್ರ‍್ಯ ಇದೆ. ನಾನು ಒಳಮೀಸಲಾತಿ ಪರ ಇದ್ದೇನೆ. ಎಡಗೈ ಸಮುದಾಯ ರಾಜಕೀಯ ಪ್ರಾತಿನಿಧ್ಯ ಕುಗ್ಗುತ್ತಿದೆ. ಹಾಗಾಗಿ, ಅವರಿಗೆ ಒಳಮೀಸಲಾತಿ ಕೊಡಬೇಕು. ಸಿಎಂ ಸಿದ್ದರಾಮಯ್ಯರಿಗೆ ಕೂಡ ಒಲವಿದೆ ಎಂದು ಹೇಳಿದರು. ಇದನ್ನೂ ಓದಿ: ಸಚಿವ ಸಂಪುಟದಿಂದ ರಾಜಣ್ಣ ವಜಾ – ಪರಿಷತ್‌ನಲ್ಲಿ ಗದ್ದಲ ಗಲಾಟೆ

ಅಲ್ಲಿ (ಹೈಕಮಾಂಡ್) ಯಾರಾದರು ನನ್ನ ವಿರುದ್ಧ ಹೇಳೋರಲೂ ಇರಬಹುದು. ಅದಕ್ಕೆ ನಾನು ತಲೆ ಕೆಡಿಸಿಕೊಂಡಿಲ್ಲ. ಕಾಣದ ಕೈಗಳ ಕೈವಾಡ ಇದೆ. ಸಿಎಂಗೂ ಗೊತ್ತಿರಲಿಲ್ಲ. ಏಕಾಏಕಿ ನಿರ್ಣಯ ಆಗಿದೆ. ಸಿಎಂ ಏನೂ ಮಾಡೋಕೆ ಆಗಲ್ಲ ಅಂದರು ಎಂದು ತಿಳಿಸಿದರು.

Share This Article