ನಕ್ಸಲರಿಂದ ನಿರಂತರ ಬೆದರಿಕೆ- ಪದ್ಮಶ್ರೀ ಹಿಂದಿರುಗಿಸಲು ಹೇಮಚಂದ್ ಮಾಂಝಿ ನಿರ್ಧಾರ

Public TV
2 Min Read

ರಾಯ್ಪುರ: ಗೌರವಾನ್ವಿತ ಸಾಂಪ್ರದಾಯಿಕ ವೈದ್ಯ ವೃತ್ತಿಗಾರರಾದ ಹೇಮಚಂದ್ ಮಾಂಝಿ (Hemchand Manjhi,) ಅವರು ತಮ್ಮ ಪದ್ಮಶ್ರೀ (Padma Shree) ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನಕ್ಸಲ್ (Naxals) ಗುಂಪುಗಳಿಂದ ಹೆಚ್ಚುತ್ತಿರುವ ಬೆದರಿಕೆಗಳಿಂದ ಮನನೊಂದು ಮಾಂಝಿ ಈ ತೀರ್ಮಾನ ಮಾಡಿದ್ದಾರೆ. ಇದು ಅವರ ಸುರಕ್ಷತೆಯ ಬಗ್ಗೆ ಭಯಪಡುವಂತೆ ಮಾಡಿದೆ. ಮಾಂಝಿ ಅವರು ಸಾಂಪ್ರದಾಯಿಕ ಔಷಧಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಅವರ ಕೆಲಸವು ಸ್ಥಳೀಯ ಚಿಕಿತ್ಸಾ ಪದ್ಧತಿಗಳನ್ನು ಸಂರಕ್ಷಿಸುವಲ್ಲಿ ಮತ್ತು ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಈ ಸಂಬಂಧ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಡಾ. ಮಾಂಝಿ ಮತ್ತೊಮ್ಮೆ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದರು. ಕಬ್ಬಿಣದ ಅದಿರು ಗಣಿಯೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಗ್ರಾಮಸ್ಥರಿಗೆ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು. ಇದೇ ವೇಳೆ ಕುಟುಂಬದವರೊಂದಿಗೆ ಚರ್ಚಿಸಿದ ನಂತರ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಲು ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ನಿಲ್ಲಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದರು. ಇದನ್ನೂ ಓದಿ: ಇವಿಎಂ ಯಂತ್ರಗಳು ಏನು ಆಗದೇ ಹೋದರೆ ಸರಿ, ಜನ ನಮ್ಮ ಪರವಾಗಿದ್ದಾರೆ: ಡಿಕೆಶಿ

ನಾನು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ. ಯಾಕೆಂದರೆ ಮಾವೋವಾದಿಗಳು ನನಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಹೇಗೆ ಸಿಕ್ಕಿತು ಎಂದು ಪ್ರಶ್ನಿಸುತ್ತಾರೆ. ನಾನು 20 ವರ್ಷ ವಯಸ್ಸಿನವನಾಗಿದ್ದಾಗಿನಿಂದ ನಾನು ಜನರ ಸೇವೆಗಾಗಿ ಪ್ರಶಸ್ತಿಯನ್ನು ಪಡೆದಿದ್ದೇನೆ. ಆದರೆ ನಾನು ಈ ಪ್ರಶಸ್ತಿಗೆ ಬೇಡಿಕೆ ಇಟ್ಟಿಲ್ಲ ಎಂದರು.

ನಡೆದಿದ್ದೇನು..?: ಮೇ 26 ರಂದು ರಾತ್ರಿ ನಕ್ಸಲರು ಜಿಲ್ಲೆಯ ಛೋಟೆಡೊಂಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಚಮೇಲಿ ಮತ್ತು ಗೌರ್ದಂಡ್ ಗ್ರಾಮಗಳಲ್ಲಿ ನಿರ್ಮಾಣ ಹಂತದಲ್ಲಿರುವ 2 ಮೊಬೈಲ್ ಟವರ್‌ಗಳಿಗೆ ಬೆಂಕಿ ಹಚ್ಚಿದರು. ಅಲ್ಲದೇ ಡಾ. ಮಾಂಝಿ ಅವರು ಪದ್ಮಶ್ರೀ ಪ್ರಶಸ್ತಿ ಪಡೆಯುತ್ತಿರುವ ಫೋಟೋವನ್ನೇ ಬ್ಯಾನರ್‌ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಮೊದಲಲ್ಲ: ಮಾಂಝಿ ಅವರಿಗೆ ನಕ್ಸಲರು ಬೆದರಿಕೆ ಹಾಕುವುದು ಇದೇ ಮೊದಲಲ್ಲ. ಈ ಹಿಂದೆ ನಾರಾಯಣಪುರದ ಛೋಟೆಡೊಂಗರ್ ಪ್ರದೇಶದಲ್ಲಿ ಆಮ್ದೈ ಘಾಟಿ ಕಬ್ಬಿಣದ ಅದಿರು ಯೋಜನೆ ಕಾರ್ಯಾರಂಭಕ್ಕೆ ಮಾಝಿ ಸಹಾಯ ಮಾಡಿದ್ದಾರೆ. ಮಾತ್ರವಲ್ಲದೇ ಅದಕ್ಕಾಗಿ ಭಾರಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ನಕ್ಸಲರು ಆರೋಪಿಸಿದ್ದರು. ಆದರೆ ಈ ಆರೋಪವನ್ನು ಮಾಂಝಿ ನಿರಾಕರಿಸಿದ್ದರು. ಇದೀಗ ಮತ್ತೆ ಮಾಂಝಿ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

Share This Article