ಸೋತು ಕಂಗೆಟ್ಟಿದ್ದ ರಣಬೀರ್ ಗೆ ಆಸರೆಯಾಗಿದ್ದು ಆಲಿಯಾ!

Public TV
2 Min Read

– ಸೋಲುಗಳಿಂದಲೇ ಪಾಠ ಕಲಿತಿದ್ದಾನಂತೆ ರಣಬೀರ್ ಕಪೂರ್!
– ಕುಸಿದು ಬಿದ್ದಾಗ ತೂರಿ ಬಂದಿತ್ತು ಆಳಿಗೊಂದು ಕಲ್ಲು!

ಮುಂಬೈ: ಸದ್ಯ ಬಾಲಿವುಡ್ ತುಂಬಾ ಭಾರೀ ನಿರೀಕ್ಷೆ ಹುಟ್ಟಿಸಿರೋ ಸಂಜಯ್ ದತ್ ಜೀವನಾಧಾರಿತ ಚಿತ್ರದ ಪ್ರಮುಖ ಆಕರ್ಷಣೆ ರಣಬೀರ್ ಕಪೂರ್. ಥೇಟು ಸಂಜಯ್ ದತ್ ನನ್ನು ಹೋಲುವಂಥಾದ್ದೇ ಹಾವಭಾವ, ಬಾಡಿ ಲಾಂಗ್ವೇಜ್‍ಗಳಿಂದ ರಣಬೀರ್ ಭಾರೀ ಸದ್ದು ಮಾಡುತ್ತಿದ್ದಾನೆ. ಹೀಗೆ ಈ ಪಾತ್ರದಲ್ಲಿ ಈತನನ್ನು ತಲ್ಲೀನನಾಗಿ ನಟಿಸುವಂತೆ ಪ್ರೇರೇಪಿಸಿರೋದು ಸೋಲಿಗೆ ಸೆಡ್ಡು ಹೊಡೆಯೋ ಉಮೇದು. ಈ ಹಿಂದೆ ಸುತ್ತಿಕೊಂಡ ದೊಡ್ಡ ಮಟ್ಟದ ಸೋಲಿನಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವ ತಹ ತಹ!

ಗೆಲುವನ್ನಷ್ಟೇ ಹೆಗಲ ಮೇಲೆ ಹೊತ್ತು ಮೆರೆದಾಡುತ್ತಾ ಸೋತವರನ್ನು ಮೆಟ್ಟಿ ಹೊಸಕೋದು ಬಣ್ಣದ ಜಗತ್ತಿನ ಮಾಮೂಲು ವರಸೆ. ಇದರಿಂದ ಬಾಲಿವುಡ್ ಕೂಡಾ ಹೊರತಾಗಿಲ್ಲ. ಒಂದು ಚಿತ್ರ ತೀರಾ ಸೋಲಬೇಕೆಂದೇನೂ ಇಲ್ಲ. ಬಾಕ್ಸಾಫೀಸಿನಲ್ಲಿ ಕೊಂಚ ಡಲ್ಲು ಹೊಡೆದರೂ ಎಂಥಾ ಸ್ಟಾರ್ ಆದರೂ ಆತನನ್ನು ಒಂದು ಮಟ್ಟಕ್ಕೆ ಕಡೆಗಣಿಸಲಾಗುತ್ತೆ. ಸೂಕ್ಷ್ಮ ಮನಸುಗಳನ್ನು ಘಾಸಿಗೊಳಿಸುವಂಥಾ ವಿದ್ಯಮಾನಗಳೂ ಧಾರಾಳವಾಗಿಯೇ ನಡೆಯುತ್ತವೆ.

ಪರಿಪಕ್ವವಾದ ನಟನಾಗಿ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ರಣಬೀರ್ ಕಪೂರ್ ಕೂಡಾ ಇಂಥಾದ್ದೊಂದು ಆಘಾತವನ್ನ ಎದುರುಗೊಂಡಿದ್ದಾನೆ. ಈ ಹಿಂದೆ ಭಾರೀ ಸದ್ದು ಮಾಡುತ್ತಲೇ ಈತ ನಟಿಸಿದ್ದ ಜಗ್ಗ ಜಾಜೂಸ್ ಚಿತ್ರ ತೆರೆಗಂಡಿತ್ತು. ಈ ಚಿತ್ರ ದೊಡ್ಡ ಮಟ್ಟದ ಹಿಟ್ ಚಿತ್ರವಾಗಿ ದಾಖಲಾಗುತ್ತದೆ ಎಂಬಂತೆ ಹವಾ ಸೃಷ್ಟಿಸಿತ್ತು. ಆದರೆ ಈ ಚಿತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಅದೇಕೋ ನೀರಸ ಪ್ರತಿಕ್ರಿಯೆ ಸಿಕ್ಕಿ ಬಾಕ್ಸಾಫೀಸಿನಲ್ಲಿಯೂ ಡಲ್ಲು ಹೊಡೆಯುವಂತಾಗಿತ್ತು. ಅದಾದ ಮರುಕ್ಷಣದಿಂದಲೇ ರಣಬೀರ್ ಕಪೂರನತ್ತ ಆಳಿಗೊಂದು ಕಲ್ಲುಗಳು ತೂರಿ ಬರಲಾರಂಭಿಸಿದ್ದವು!

ವರ್ಷಾನುಗಟ್ಟಲೆ ಇಂಥಾ ಸೋಲಿನ ಯಾತನೆಯಿಂದ ಕಂಗಾಲಾದ ರಣಬೀರ್ ಕಪೂರ್ ಸಂಜಯ್ ಜೀವನಾಧಾರಿತ ಚಿತ್ರದ ಮೂಲಕ ಎಲ್ಲರೂ ಬೆಚ್ಚಿಬೀಳುವಂತೆ ಎದ್ದು ನಿಂತಿದ್ದಾನೆ. ಸ್ವತಃ ಆತನೇ ತಾನು ಗೆಲುವಿನಿಂದ ಅದೇನು ಕಲಿತೆನೋ ಗೊತ್ತಿಲ್ಲ. ಆದರೆ ಸೋಲುಗಳಿಂದ ದೊಡ್ಡ ದೊಡ್ಡ ಪಾಠವನ್ನೇ ಕಲಿತಿದ್ದೇನೆ ಎಂಬಂಥ ಮಾತುಗಳನ್ನೂ ಆಡಿದ್ದಾನೆ. ಇನ್ನೂ ಪ್ರಮುಖ ವಿಚಾರವೆಂದರೆ ಜಗ್ಗ ಜಾಜೂಸ್ ಸೋಲಿನಿಂದ ಕಂಗಾಲಾಗಿದ್ದ ರಣಬೀರ್‍ಗೆ ಸಂಪೂರ್ಣ ಸಾಥ್ ನೀಡಿ ಎದ್ದು ನಿಲ್ಲುವಂತೆ ಮಾಡಿದ್ದ ಆಲಿಯಾ ಭಟ್ ಪ್ರೀತಿ. ಸೋಲಿನಿಂಗ ಕಂಗೆಟ್ಟಿದ್ದ ರಣಬೀರ್‍ಗೆ ಆಲಿಯಾ ಕ್ಷಣ ಕ್ಷಣವೂ ಹೆಗಲಾಗಿದ್ದಳಂತೆ. ಮತ್ತೊಂದು ಗೆಲುವಿನ ರೂವಾರಿಯಾಗಲು ಉತ್ತೇಜಿಸಿದ್ದಳಂತೆ. ಆ ಬಲದಿಂದಲೇ ರಣಬೀರ್ ಸಂಜಯ್ ಚಿತ್ರದ ಮೂಲಕ ಮೈ ಕೊಡವಿಕೊಂಡು ಮೇಲೆದ್ದು ನಿಂತಿದ್ದಾನೆ!

Share This Article
Leave a Comment

Leave a Reply

Your email address will not be published. Required fields are marked *