ಕಾಫಿನಾಡಿನಲ್ಲಿ ಲಾಯೆಂಗೇ ಹಮ್ ಲಾಯೆಂಗೆ ಜೂ.ಇಂದಿರಾಗಾಂಧಿ ಕೋ ಲಾಯೆಂಗೆ ಘೋಷ ವಾಕ್ಯ

Public TV
2 Min Read

ಚಿಕ್ಕಮಗಳೂರು: 1979ರಲ್ಲಿ ಚಿಕ್ಕಮಗಳೂರಲ್ಲಿ ಝೇಂಕರಿಸುತ್ತಿದ್ದ ಲಾಯೆಂಗೆ ಹಮ್ ಲಾಯೆಂಗೆ ಇಂದಿರಾಗಾಂಧಿ ಕೋ ಲಾಯೆಂಗೆ, ಆದಾ ರೋಟಿ ಖಾಯೆಂಗೆ. ಎಂಬ ಘೋಷವಾಕ್ಯ ಇದೀಗ ಮತ್ತೊಮ್ಮೆ ಕಾಫಿನಾಡಿನ ಕಾಂಗ್ರೆಸ್ಸಿಗರ ಟ್ಯಾಗ್‍ಲೈನ್ ಆಗಿದೆ. ಆದರೆ ಹೆಸರೊಂದು ಬೇರೆಯಷ್ಟೇ. ಅಂದು ಅಜ್ಜಿಗೆ ಗ್ರೀನ್ ಕಾರ್ಪೇಟ್ ಹಾಸಿದ್ದ ಕಾಫಿನಾಡಿಗರು ಇದೀಗ ಜ್ಯೂನಿಯರ್ ಇಂದಿರಾಗೂ ಲಾಯೆಂಗಮ್ಮ ಲಾಯೆಂಗೆ ಅಂತಿದ್ದಾರೆ. ಜ್ಯೂನಿಯರ್ ಇಂದಿರಾ ಬರುತ್ತಾರೋ ಇಲ್ವೋ ಗೊತ್ತಿಲ್ಲ. ಕಾಫಿನಾಡ ಕಾಂಗ್ರೆಸ್ಸಿನ ಸದ್ಯದ ಸ್ಥಿತಿಯಂತು ಲಾಯೆಂಗ ಹಮ್ ಎಂಬಂತಿದೆ.

ಚಿಕ್ಕಮಗಳೂರು ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಹಾಗೂ ನೆಹರೂ ಕುಟುಂಬ ತಮ್ಮ ಜೀವಿತಾವಧಿಯಲ್ಲೇ ಮರೆಯಲಾರದ ಜಿಲ್ಲೆ. ಅಂತಹ ಕಾಫಿನಾಡಿನಿಂದ ಇಂದಿರಾ ಅವರ ಮೊಮ್ಮಗಳು ಪ್ರಿಯಾಂಕ ರಾಜಕೀಯಕ್ಕೆ ಅಖಾಡಕ್ಕಿಳಿಯುತ್ತಾರೆಂಬ ಸುದ್ದಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅಂದು ಇಂದಿರಾಗಾಂಧಿಗೆ ಡಿ.ಬಿ.ಚಂದ್ರೇಗೌಡ ಕ್ಷೇತ್ರ ಬಿಟ್ಟುಕೊಟ್ಟಂತೆ ಇಂದು ಯಾರೂ ಬಿಟ್ಟುಕೊಡುವ ಅಗತ್ಯವಿಲ್ಲ.

ಸದ್ಯಕ್ಕೆ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಕಾರ್ಯಕರ್ತರಿಗೆ ಗೊತ್ತಿಲ್ಲ. ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮದ್ವರಾಜ್ ಹೆಸರು ಕೇಳಿ ಬರುತ್ತಿದ್ದರೂ ಎರಡೂ ಜಿಲ್ಲೆಯನ್ನೂ ಸರಿದೂಗಿಸುವಂತವರು ಬೇಕೆಂಬುದು ಕಾರ್ಯಕರ್ತರ ವಾದ. ಹಾಗಾಗಿ 20 ವರ್ಷಗಳ ಬಳಿಕ ರಾಜಕೀಯಕ್ಕೆ ಬರುತ್ತಿರುವ ಪ್ರಿಯಾಂಕ ಗಾಂಧಿ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ರೆ ಮತ್ತೊಂದು ಹೊಸ ಇತಿಹಾಸ ಸೃಷ್ಟಿಯಾಗಲಿದ್ದು, ಅವರನ್ನ ಗೆಲ್ಲಿಸೋದಕ್ಕೆ ಯುವ ಸಮೂಹ ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸುವುದಕ್ಕೆ ಸಿದ್ಧವಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರೂಬಿನ್ ಮೊಸೆಸ್ ಹೇಳುತ್ತಾರೆ.

ಅಂದು ಇಂದಿರಾಗಾಂಧಿ ಅವರ ವಿರುದ್ಧ ನಟ ಡಾ.ರಾಜ್‍ಕುಮಾರ್ ನಿಲ್ಲಿಸೋದಕ್ಕೆ ತೆರೆಮರೆಯಲ್ಲಿ ಎಲ್ಲಾ ಕಸರತ್ತು ನಡೆದಿತ್ತು. ಆದರೆ ರಾಜಣ್ಣ ರಾಜಕೀಯಕ್ಕೆ ಬರೋದಕ್ಕೆ ಸುತಾರಾಂ ಒಪ್ಪಲಿಲ್ಲವಂತೆ. ಕೊನೆಗೆ 1968 ರಿಂದ 1971ರವರೆಗೆ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಅಧಿನಾಯಕಿ ವಿರುದ್ಧ ಅಖಾಡಕ್ಕಿಳಿದು ಸೋತಿದ್ದರು. ಇಲ್ಲಿಂದ ಗೆದ್ದ ಇಂದಿರಾ ಗಾಂಧಿ ಮತ್ತೆ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಇದೀಗ ಅವರ ಮೊಮ್ಮಗಳು ಪ್ರಿಯಾಂಕ ಫೆಬ್ರವರಿ 4 ರಂದು ಮೌನಿ ಅಮಾವಾಸ್ಯೆಯಂದು ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ರಾಜಕೀಯಕ್ಕೆ ಎಂಟ್ರಿ ಕೊಡ್ತಿರೋದ್ರಿಂದ ಅವರ ರಾಜಕೀಯ ಜೀವನ ಇಲ್ಲಿಂದಲೇ ಆರಂಭವಾಗಲಿ ಅನ್ನೋದು ಹಿರಿಯ ಕಾಂಗ್ರೆಸ್ಸಿಗರ ಅಭಿಪ್ರಾಯ. ಕಾಫಿನಾಡಿಗರು ಪ್ರಿಯಾಂಕ ಗಾಂಧಿಯನ್ನ ಚಿಕ್ಕಮಗಳೂರಿಗೆ ಆಹ್ವಾನ ನೀಡಿದ್ದಾರೆ. ಜನ ಬದಲಾವಣೆ ಬಯಸಿದ್ದಾರೆ. ಅವರು ಇಲ್ಲಿ ಸ್ಪರ್ಧಿಸಿದ್ರೆ ಗೆಲ್ಲಿಸಿ ಅವರನ್ನ ಇಲ್ಲೇ ಗೆಲ್ಲಿಸಿ ಲೋಕಸಭೆಗೆ ಕಳಿಸೋಕೆ ಕಾಫಿನಾಡಿಗರು ಪಣ ತೊಟ್ಟಿದ್ದಾರೆ. ಕಾರ್ಯಕರ್ತರಲ್ಲಿ ಹುಮ್ಮಸ್ಸಿರೋದಂತು ಸತ್ಯ. ಆದರೆ ಜ್ಯೂನಿಯರ್ ಇಂದಿರಾ ಬರುತ್ತಾರೋ ಇಲ್ವೋ ಅನ್ನೋದು ಮಾತ್ರ ಗೊಂದಲಮಯವಾಗಿದೆ.

 

ಕಾಫಿನಾಡ ಕಾಂಗ್ರೆಸ್ ಪ್ರಿಯಾಂಕ ಆಗಮನಕ್ಕಂತೂ ತುದಿಗಾಲಲ್ಲಿ ನಿಂತಿದೆ. 1980ರ ಆಸುಪಾಸಿನ ರಾಜಕೀಯವೇ ಬೇರೆ. 2020ರ ಆಸುಪಾಸಿನ ರಾಜಕೀಯವೇ ಬೇರೆ. ಇಂದು ಪ್ರಿಯಾಂಕ ಬಂದ್ರು ಗೆಲವು ಅಜ್ಜಿಗೆ ಒಲಿದಷ್ಟು ಸುಲಭವಾಗಿ ಸಿಗುವುದಿಲ್ಲ ಅನ್ನೋದಂತು ಸ್ಪಷ್ಟ. ಉಡುಪಿ-ಚಿಕ್ಕಮಗಳೂರಿನ 9 ಎಂಎಲ್‍ಎಗಳಲ್ಲಿ 8 ಜನ ಬಿಜೆಪಿಯವರು. ಸಾಲದಕ್ಕೆ ಸ್ಟ್ರಾಂಗ್ ಹಿಂದು ಅಜೆಂಡಾದ ಮಲೆನಾಡ ಜೊತೆ ಮೋದಿ ಅಲೆ ಇವೆಲ್ಲದರ ನಡುವೆ ಪ್ರಿಯಾಂಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬರುತ್ತಾರ ಅನ್ನೋದು ಮಾತ್ರ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *