ಮಯಾಂಕ್‌ ವೇಗಕ್ಕೆ ಐಪಿಎಲ್‌ನಲ್ಲಿ ದಾಖಲೆಗಳು ಪುಡಿ ಪುಡಿ!

Public TV
2 Min Read

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಯುವ ವೇಗಿ ಮಯಾಂಕ್‌ ಯಾದವ್‌ ಅವರ ಭರ್ಜರಿ ಬೌಲಿಂಗ್‌ ಪ್ರದರ್ಶನ ಲಕ್ನೋ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಅತ್ಯಂತ ವೇಗದ ಎಸೆತ ಎಸೆಯುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.

ಇದಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 155.8 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿದ್ದ ಮಯಾಂಕ್, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಅತೀ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ವಿರುದ್ಧ ಸಮರ ಸಾರಿದ ಮಯಾಂಕ್‌ ಆಲ್‌ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರೂನ್ ಗ್ರೀನ್ ಮತ್ತು ರಜತ್ ಪಾಟಿದಾರ್ ವಿಕೆಟ್‌ ಕಬಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಆತಿಥೇಯ ಆರ್‌ಸಿಬಿ ಎದುರು 4 ಓವರ್‌ಗಳಲ್ಲಿ 14 ರನ್‌ ಕೊಟ್ಟು 3 ವಿಕೆಟ್‌ ಪಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಪದಾರ್ಪಣೆ ಬಳಿಕ ಸತತ ಪಂದ್ಯಶ್ರೇಷ್ಠ ಪಡೆದ ಮೊದಲ ಆಟಗಾರ ಎಂಬ ದಾಖಲೆಯನ್ನೂ ತಮ್ಮ ಹೆಗಲಿಗೇರಿಸಿಕೊಂಡರು.

ಐಪಿಎಲ್‌ನಲ್ಲಿ ಐತಿಹಾಸಿಕ ದಾಖಲೆ:
21 ವರ್ಷ ವಯಸ್ಸಿನ ಮಯಾಂಕ್‌ ಯಾದವ್‌ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆಯನ್ನೂ ಬರೆದಿದ್ದಾರೆ. 150 ಕಿಮೀಗಿಂತಲೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಿದ 4ನೇ ಬೌಲರ್‌ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: IPL 2024: ತವರಿನಲ್ಲೇ ಆರ್‌ಸಿಬಿಗೆ ಹೀನಾಯ ಸೋಲು – ಲಕ್ನೋಗೆ 28 ರನ್‌ಗಳ ಸೂಪರ್‌ ಜಯ

ವೇಗದ ಬೌಲಿಂಗ್‌ ಮಾಡಿದ ಟಾಪ್‌-5 ಆಟಗಾರರು:
* ಶಾನ್‌ ಟೈಟ್‌ – 2011ರಲ್ಲಿ – 157.7 ಕಿಮೀ
* ಲಾಕಿ ಫರ್ಗೂಸನ್‌ – 2022ರಲ್ಲಿ – 157.3 ಕಿಮೀ
* ಉಮ್ರಾನ್‌ ಮಲಿಕ್‌ – 2022ರಲ್ಲಿ – 157.0 ಕಿಮೀ
* ಮಯಾಂಕ್‌ ಯಾದವ್‌ – 2024ರಲ್ಲಿ – 156.7 ಕಿಮೀ
* ಅನ್‌ರಿಚ್‌ ನಾರ್ಟೆ – 2020ರಲ್ಲಿ – 156.2 ಕಿಮೀ

ತನ್ನದೇ ದಾಖಲೆ ಬಗ್ಗೆ ಮಯಾಂಕ್‌ ಹೇಳಿದ್ದೇನು?
ಆರ್‌ಸಿಬಿ ವಿರುದ್ಧ ಪಂದ್ಯ ಗೆದ್ದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಮಯಾಂಕ್‌, ವಿಕೆಟ್‌ ಪಡೆಯುವುದಕ್ಕಿಂತಲೂ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡುವುದೇ ನನ್ನ ಮುಖ್ಯಗುರಿ. 2 ಪಂದ್ಯಗಳಲ್ಲಿ ನಾನು 6 ವಿಕೆಟ್‌ ಪಡೆದಿರುವುದು ನನಗೆ ಮುಖ್ಯವಲ್ಲ. ನನ ಗುರಿ ಏನಿದ್ದರೂ ನನ್ನ ಫ್ರಾಂಚೈಸಿಗೆ ಸಾಧ್ಯವಾದಷ್ಟು ಪಂದ್ಯಗಳನ್ನು ಗೆದ್ದುಕೊಡುವುದು. ಇದೇ ನನ್ನ ಮುಖ್ಯ ಗುರಿ ಕೂಡ. ಪಂಜಾಬ್‌ ಕಿಂಗ್ಸ್‌ ಮತ್ತು ಆರ್‌ಸಿಬಿ ವಿರುದ್ಧದ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಡಲು ನೆರವಾಗಿರುವುದಕ್ಕೆ ಬಹಳ ಸಂತಸವಿದೆ ಎಂದಿದ್ದಾರೆ.

ಅಲ್ಲದೇ ನನ್ನ ದೇಹವನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದೇನೆ. ಸೇವಿಸುವ ಆಹಾರದ ಕಡೆಗೆ ಗಮನ ಕೊಟ್ಟು ನಂತರ ನಿದ್ರೆ ಮತ್ತು ಕಸರತ್ತಿನ ಕಡೆಗೆ ಗಮನ ನೀಡುತ್ತೇನೆ. ಫಾಸ್ಟ್‌ ಬೌಲರ್‌ ಒಬ್ಬನಿಗೆ ವಿಶ್ರಾಂತಿ ಅತ್ಯಗತ್ಯ. ಈ ಕಡೆಗೆ ಹೆಚ್ಚಿ ಆದ್ಯತೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳಪೆ ಪ್ರದರ್ಶನದಿಂದ ಶಾಹೀನ್‌ ಶಾಗೆ ತಲೆದಂಡ – ಮತ್ತೆ ನಾಯಕನ ಪಟ್ಟಕ್ಕೇರಿದ ಬಾಬರ್‌ ಆಜಂ

Share This Article