ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಮತ್ತೆ ಕ್ರಿಕೆಟ್ ಪಂದ್ಯಾವಳಿ ನಡೆಸಲು ಸಮಿತಿ ನೀಡಿರುವ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲಾಗಿದೆ. ಮಾರ್ಗಸೂಚಿಯ ಅನ್ವಯ ಎಲ್ಲಾ ಸರಿಪಡಿಸಿದ ಬಳಿಕ ಗೃಹ ಮಂತ್ರಿಗಳು ಮತ್ತು ಕಮಿಟಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಲಿದೆ ಎಂದು ಕೆಎಸ್‌ಸಿಎ (KSCA) ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಸೇರಿದಂತೆ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ವಿಚಾರವಾಗಿ ಕೆಎಸ್‌ಸಿಎ ಜೊತೆಗೆ ಬೆಂಗಳೂರು ನಗರ ಪೊಲೀಸರು ಸಭೆ ನಡೆಸಿದರು. ಸಭೆಯಲ್ಲಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, ಎಂ ಹಾಕೆ, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಲವರು ಪಾಲ್ಗೊಂಡಿದ್ದರು. ಸಭೆಯ ಬಳಿಕ ವಿನಯ್ ಮೃತ್ಯುಂಜಯ ಮಾತನಾಡಿದರು. ಇದನ್ನೂ ಓದಿ: IPL 2026 | ಗುಡ್‌ನ್ಯೂಸ್; ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕ್ರಿಕೆಟ್ ಪಂದ್ಯ ನಡೆಸಲು ಸಂಪುಟ ಗ್ರೀನ್ ಸಿಗ್ನಲ್
ಗೃಹ ಮಂತ್ರಿಗಳು ಒಂದು ಸಮಿತಿ ರಚನೆ ಮಾಡಿದ್ದಾರೆ. ಕ್ರಿಕೆಟ್ ಪಂದ್ಯಕ್ಕೂ ಮುನ್ನ ಈ ಸಮಿತಿ ಮೈದಾನ ಪರಿಶೀಲನೆ ಮಾಡಬೇಕು. ಹಾಗಾಗಿಯೇ ಹಲವು ಇಲಾಖೆಯೊಂದಿಗೆ ನಾವು ಮೀಟಿಂಗ್ ಮಾಡ್ತಿದ್ದೀವಿ. ಇವತ್ತು ಕೂಡ ಕಮಿಟಿ ನೀಡಿರೋ ಮಾರ್ಗ ಸೂಚಿಗಳ ಬಗ್ಗೆ ಚರ್ಚೆ ಮಾಡಿದ್ದೀವಿ. ಅವುಗಳಲ್ಲಾ ಸರಿ ಹೋದ ಮೇಲೆ ಕಮಿಟಿ ಮುಂದೆ ಬರ್ತಿವಿ. ಆಗ ಗೃಹ ಮಂತ್ರಿಗಳು ಮತ್ತು ಕಮಿಟಿ ಕ್ರಿಕೆಟ್ ಪಂದ್ಯ ಗಳಿಗೆ ಅನುಮತಿ ನೀಡಲಿದ್ದಾರೆ. ಪಂದ್ಯಗಳು ಇಲ್ಲಿ ನಡೆಯಬೇಕು ಅನ್ನೊ ದೃಷ್ಟಿ ಯಿಂದ ನಮ್ಮ ಪ್ರಯತ್ನ ನಾವು ಮಾಡ್ತಿದ್ದೀವಿ. ಪಂದ್ಯಗಳು ಇಲ್ಲಿ ನಡೀತಾವೋ ಇಲ್ಲವೋ ಅನ್ನೋದನ್ನ ಈಗಲೇ ಹೇಳೋಕೆ ಆಗಲ್ಲ ಎಂದಿದ್ದಾರೆ.
ಅನುಮತಿ ನಿರಾಕರಣೆ ಯಾಕೆ?
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ನಷ್ಟು ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಬಂದಿದೆ. ಜೊತೆಗೆ ನಾಳೆ ಮ್ಯಾಚ್‌ಗೆ ವಿರಾಟ್ ಕೊಹ್ಲಿ ಆಗಮಿಸುವುದರಿಂದ ಹೊರಭಾಗದಲ್ಲಿ ಅಭಿಮಾನಿಗಳು ಸೇರುವ ಆತಂಕ ವ್ಯಕ್ತವಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ಗೆ ರೆಡ್‌ಸಿಗ್ನಲ್ – ಸರ್ಕಾರದ ಕ್ರಮ ಸಮರ್ಥಿಸಿಕೊಂಡ ಪರಮೇಶ್ವರ್
ಸ್ಟೇಡಿಯಂ ಗೇಟ್ ಹೊರಭಾಗದಲ್ಲಿಯೇ ಕಾಲ್ತುಳಿತ ದುರಂತ ಸಂಭವಿಸಿತ್ತು. ಹೀಗಾಗಿ ನಾಳೆ ಮತ್ತಷ್ಟು ಅಭಿಮಾನಿಗಳು ಸೇರಿದರೆ ಕಷ್ಟ ಅನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಗೇಟ್ ಅಗಲೀಕರಣ ಮತ್ತು ಜನ ಒಡಾಡಲು ಅನುಕೂಲವಾಗುವ ವಾತಾವರಣವನ್ನು ಸ್ಟೇಡಿಯಂ ನಿರ್ಮಾಣ ಮಾಡದ ಕಾರಣ ಪೊಲೀಸರು ಪಂದ್ಯ ಆಯೋಜನೆಗೆ ಅನುಮತಿ ನೀಡಿಲ್ಲ. ಪ್ರೇಕ್ಷಕರಿಗೆ ಅವಕಾಶ ಇಲ್ಲದೇ ಪಂದ್ಯ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮುಖ್ಯಸ್ಥ ವೆಂಕಟೇಶ್ ಪ್ರಸಾದ್ ಗೃಹ ಸಚಿವ ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದರು. ಆದಾಗ್ಯೂ ಪಂದ್ಯವನ್ನ ಹೊರವಲಯದಲ್ಲಿರುವ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು.
ಕಳೆದ ಜೂನ್‌ನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನ ಸ್ಥಗಿತಗೊಳಿಸಲಾಗಿದೆ. ಇದೇ ಕಾರಣದಿಂದ ಮಹಿಳಾ ವಿಶ್ವಕಪ್ ಪಂದ್ಯ ಕೂಡ ಕೈತಪ್ಪಿತ್ತು.



