ಸಕಲೇಶಪುರ | ಮಹಿಳೆಯನ್ನು ಕೊಂದಿದ್ದ ಪುಂಡಾನೆ ಸೆರೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

2 Min Read

ಹಾಸನ: ಜು.13 ರಂದು ಸಕಲೇಶಪುರದ (Sakleshpur) ಮೂಗಲಿ ಗ್ರಾಮದ ಬಳಿ ಶೋಭ ಎಂಬ ಮಹಿಳೆಯನ್ನು ಬಲಿ ಪಡೆದಿದ್ದ ಕಾಡಾನೆ (Elephant) ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದೆ.

ಸತತ ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಆದರೂ ನಿತ್ರಾಣಗೊಳ್ಳದ ಕಾಡಾನೆ ಸುಮಾರು 12 ಕಿಲೋ ಮೀಟರ್ ಸುತ್ತಾಡಿ, ಕೊನೆಗೆ ಕಾಫಿ ತೋಟವೊಂದರಲ್ಲಿ ಕುಸಿದು ಬಿತ್ತು. ಕಾಡಾನೆಯನ್ನು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸ್ಥಳಾಂತರ ಮಾಡಲಾಯಿತು. ಪುಂಡಾನೆ ಸೆರೆ ಹಿಡಿದಿದ್ದರಿಂದ ಮಲೆನಾಡು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಸಕಲೇಶಪುರ | ಕಾಫಿ ತೋಟದಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನು ತುಳಿದು ಕೊಂದ ಕಾಡಾನೆ

ಕಳೆದ ಎರಡು ವಾರಗಳ ಹಿಂದೆ ಕೊಡಗು ಭಾಗದಿಂದ ಹಾಸನ ಜಿಲ್ಲೆಗೆ ಬಂದಿದ್ದ ಕಾಡಾನೆ ಶೋಭ ಎಂಬ ಮಹಿಳೆಯನ್ನು ಕೊಂದು ಹಾಕಿತ್ತು. ಆ ನಂತರ ಸಿಕ್ಕಸಿಕ್ಕವರ ಮೇಲೆ ದಾಳಿಗೆ ಮುಂದಾಗಿ ಆತಂಕ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಜನವರಿ 14 ರಂದು ಕಾಡಾನೆ ಸೆರೆ ಕಾರ್ಯಾಚರಣೆಗೆ ಅರಣ್ಯ ಸಚಿವರು ಅನುಮತಿ ನೀಡಿದ್ದರು. ಬಳಿಕ ದುಬಾರೆ ಹಾಗೂ ಹಾರಂಗಿ ಸಾಕಾನೆ ಶಿಬಿರದಿಂದ ಧನಂಜಯ, ಸುಗ್ರೀವ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಸೇರಿ ಐದು ಕುಮ್ಕಿ ಆನೆಗಳು ಆಲೂರು ತಾಲ್ಲೂಕಿನ ಭೈರಾಪುರ ಬಳಿಯಿರುವ ತಾತ್ಕಾಲಿಕ ಶಿಬಿರಕ್ಕೆ ಆಗಮಿಸಿದ್ದವು. ಜ.16ರ ಬೆಳಿಗ್ಗೆಯೇ ಇಟಿಎಫ್ ಸಿಬ್ಬಂದಿ ಪುಂಡಾನೆ ಟ್ರ್ಯಾಕ್ ಮಾಡಲು ತೆರಳಿದ್ದರು. ಮಧ್ಯಾಹ್ನ ಆದರೂ ಕಾಡಾನೆ ಸುಳಿವು ಸಿಗದ ಹಿನ್ನೆಲೆ ಡ್ರೋನ್ ಹಾರಿಸಿ ಕಾಡಾನೆ ಇರುವ ಜಾಗವನ್ನು ಪತ್ತೆ ಮಾಡಲಾಗಿತ್ತು.

ಬೇಲೂರು ತಾಲೂಕಿನ, ಚಂದಾಪುರ ಗ್ರಾಮದ ಬಳಿಯಿರುವ ಅರಣ್ಯ ಪ್ರದೇಶದಲ್ಲಿ ಕಾಡಾನೆ ನಿಂತಿದ್ದು, ಮಧ್ಯಾಹ್ನ 3 ಗಂಟೆಗೆ ಲಾರಿಯಲ್ಲಿ ಸಾಕಾನೆಗಳನ್ನು ತಂದು ಕಾರ್ಯಾಚರಣೆ ಆರಂಭಿಸಲಾಯಿತು. ಸುಮಾರು ಮ.3:45ಕ್ಕೆ ಪುಂಡಾನೆಗೆ ವೈದ್ಯ ರಮೇಶ್ ಚುಚ್ಚುಮದ್ದು ನೀಡಿದ್ರು. ಕೂಡಲೇ ಓಡಲು ಆರಂಭಿಸಿದ ಕಾಡಾನೆ ಕಾಫಿ ತೋಟ, ರೈತರ ಜಮೀನುಗಳಲೆಲ್ಲಾ ಸಂಚರಿಸಿತು. ಕಾಡಾನೆ ಎಲ್ಲಿಯೂ ನಿಲ್ಲದ ಕಾರಣ ಸಾಕಾನೆಗಳು ಹಾಗೂ ಇಟಿಎಫ್ ಸಿಬ್ಬಂದಿ ಕಾಡಾನೆಯನ್ನು ಹಿಂಬಾಲಿಸಿದರು. ಆದರೆ ಕಾಡಾನೆ ನಿತ್ರಾಣಗೊಳ್ಳದ ಹಿನ್ನೆಲೆಯಲ್ಲಿ ಮತ್ತೊಂದು ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಆಗಲೂ ಕಾಡಾನೆ ನಿಲ್ಲಲಿಲ್ಲ. ಎಲ್ಲಂದರಲ್ಲಿ ಓಡಾಡಿ ದಾರಿಯಲ್ಲಿ ಸಿಕ್ಕ ಕೆರೆಯಲ್ಲಿ ನೀರು ಕುಡಿದು ಅಲೆದಾಡಲಾರಂಭಿಸಿತು. ಅರವಳಿಕೆ ಚುಚ್ಚುಮದ್ದು ನೀಡಿದ ಎರಡು ಗಂಟೆಗಳ ಕಾಲ ನಿರಂತರವಾಗಿ ಓಡಾಡಿ ಸಂಜೆ ಸುಮಾರು 6:45ರ ಸುಮಾರಿಗೆ ಬೇಲೂರಿನ ಬೆಳ್ಳಾವರ ಗ್ರಾಮದ ಕಾಫಿ ತೋಟದಲ್ಲಿ ಕುಸಿದು ಬಿದ್ದಿತು.

ಕೂಡಲೇ ಸಾಕಾನೆಗಳನ್ನು ಬಳಸಿ ಕಾಡಾನೆಗೆ ನೀರು ಹಾಕಿ ಆರೈಕೆ ಮಾಡಿ ಹಗ್ಗ ಕಟ್ಟಿ ರಿವರ್ಸಲ್ ಇಂಜೆಕ್ಷನ್ ನೀಡಲಾಯಿತು. ಸುಮಾರು ಅರ್ಧ ಗಂಟೆ ನಂತರ ಎಚ್ಚರಗೊಂಡ ಕಾಡಾನೆ ಆರ್ಭಟಿಸಿತು. ಆದರೆ ಕುಮ್ಕಿ ಆನೆಗಳು ಅದನ್ನು ಸುತ್ತುವರೆದು ಕಾಫಿ ತೋಟದಿಂದ ಬಯಲ ಪ್ರದೇಶಕ್ಕೆ ಎಳೆದು ತಂದವು. ನಂತರ ಪುಂಡಾನೆ ಅಕ್ಕಪಕ್ಕ ಎರಡು ಸಾಕಾನೆಗಳು ನಿಲ್ಲಿಸಿಕೊಂಡು ಬೆಲ್ಟ್ ಹಾಕಿ ಕ್ರೇನ್ ಮೂಲಕ ಲಾರಿಗೆ ಇಳಿಸಿ ಸ್ಥಳಾಂತರ ಮಾಡಲಾಯಿತು. ಕತ್ತಲಾದರು ನೂರಾರು ಮಂದಿ ಕಾಡಾನೆಯನ್ನು ನೋಡಲು ಮುಗಿಬಿದ್ದಿದ್ದು ಅವರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ: ಸಕಲೇಶಪುರ | ಮಹಿಳೆಯನ್ನು ಕೊಂದಿದ್ದ ಕಾಡಾನೆ ಸೆರೆಗೆ ಬಂದಿಳಿದ ಕುಮ್ಕಿ ಟೀಮ್

Share This Article