ಫೋಟೊ ತೆಗೆಯುವ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ ಕೇಸ್‌ಗೆ ಟ್ವಿಸ್ಟ್‌ – 16ರ ಬಾಲಕಿ ಮದುವೆಯಾಗಿದ್ದ ತಾತಪ್ಪ

Public TV
2 Min Read

ರಾಯಚೂರು: ಫೋಟೊ ತೆಗೆಯುವ ನೆಪದಲ್ಲಿ ಪತಿಯನ್ನು ಪತ್ನಿ ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. 16 ವರ್ಷದ ಅಪ್ರಾಪ್ತೆಯನ್ನು ತಾತಪ್ಪ ಮದುವೆಯಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ರಾಯಚೂರಿನ (Raichuru) ಗುರ್ಜಾಪುರ ಬ್ಯಾರೇಜ್ ಬಳಿ ಫೋಟೊ ತೆಗೆಯುವ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ ಪ್ರಕರಣ ನಡೆದಿತ್ತು. ನದಿಗೆ ಬಿದ್ದಿದ್ದ ತಾತಪ್ಪನನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಬಳಿಕ ತಾತಪ್ಪ ತನ್ನ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ. ಇದನ್ನೂ ಓದಿ: ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಕೇಸ್‌ – ಪರಸ್ಪರ ವಿಚ್ಛೇದನಕ್ಕೆ ಮುಂದಾದ ದಂಪತಿ

ಪ್ರಕರಣದ ತನಿಖೆ ವೇಳೆ ಮತ್ತೊಂದು ಅಚ್ಚರಿದಾಯಕ ವಿಚಾರ ಹೊರಬಿದ್ದಿದೆ. ತಾತಪ್ಪ ಅಪ್ರಾಪ್ತೆಯನ್ನು ಮದುವೆಯಾಗಿದ್ದುದು ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳಾ ರಕ್ಷಣಾ ಘಟಕದಿಂದ ತನಿಖೆ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಅಪ್ರಾಪ್ತೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಕ್ರಮಕೈಗೊಳ್ಳಲಾಗಿದೆ. ಸದರಿ ಶಾಲೆಗೆ ಭೇಟಿ ನೀಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. 16 ವಯಸ್ಸಿನ ಅಪ್ರಾಪ್ತೆ ಜೊತೆ ತಾತಪ್ಪ ಮದುವೆಯಾಗಿದ್ದಾನೆ. ಘಟನೆಗೆ ಸಂಬಂಧಪಟ್ಟಂತೆ ಈ ಬಗ್ಗೆ ಕೇಸ್ ದಾಖಲಿಸಲು ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ

ಬಾಲ್ಯ ವಿವಾಹ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲು ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪತ್ರ ಬರೆದಿದ್ದಾರೆ. ರಾಯಚೂರು ಜಿಲ್ಲೆಯ ಶಕ್ತಿನಗರದ ನಿವಾಸಿ ತಾತಪ್ಪ ಜೊತೆ ಯಾದಗಿರಿ ಜಿಲ್ಲೆಯ ಅಪ್ರಾಪ್ತೆ ಜೊತೆ ವಿವಾಹವಾಗಿದೆ. ಕಳೆದ ಎ.18 ರಂದು ಶಕ್ತಿ ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ವಿವಾಹ ನೆರವೇರಿಸಿದವರ ಮತ್ತು ಭಾಗವಹಿಸಿದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಚೇರಿಗೆ ವರದಿ ನೀಡಲು ಸೂಚನೆ ನೀಡಲಾಗಿದೆ.

Share This Article