ಪೈಲಟ್ ಪತಿಯನ್ನ ಕಳೆದ್ಕೊಂಡು ವಾಯುಪಡೆ ಸೇರಲು ಪತ್ನಿ ಸಜ್ಜು

Public TV
1 Min Read

ನವದೆಹಲಿ: ಬೆಂಗಳೂರಿನಲ್ಲಿ ಮಿರಾಜ್ 2000 ಫೈಟರ್ ಜೆಟ್ ಹಾರಾಟದ ಸಂದರ್ಭದಲ್ಲಿ ಪೈಲಟ್ ಸ್ಕ್ವಾಡ್ರನ್ ನಾಯಕ ಸಮೀರ್ ಅಬ್ರೋಲ್ ಮೃತಪಟ್ಟಿದ್ದರು. ಇದೀಗ ಅವರ ಪತ್ನಿ ಗರೀಮಾ ಅಬ್ರೋಲ್ ಅವರು ಸದ್ಯದಲ್ಲೆ ವಾಯುಪಡೆ ಸೇರಲಿದ್ದಾರೆ.

ಗರೀಮಾ ಅಬ್ರೋಲ್ ಅವರು ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ನಡೆಸಿದ ‘ಸರ್ವಿಸ್ ಸೆಲಕ್ಷನ್ ಬೋರ್ಡ್’ ಪ್ರವೇಶಾತಿ ಸಂದರ್ಶನದಲ್ಲಿ ಪಾಸಾಗಿದ್ದಾರೆ. ಅವರು ತೆಲಂಗಾಣದ ದುಂಡಿಗಲ್‍ನಲ್ಲಿರುವ ವಾಯುಪಡೆಯ ಅಕಾಡೆಮಿ ಮತ್ತು 2020ರ ಜನವರಿಯಲ್ಲಿ ಭಾರತೀಯ ವಾಯುಪಡೆಗೆ ಸೇರಲಿದ್ದಾರೆ. ಅಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ನಿವೃತ್ತ ಏರ್ ಮಾರ್ಷಲ್ ಅನಿಲ್ ಚೋಪ್ರಾ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.

ಜೊತೆಗೆ ದಂಪತಿಯ ಫೋಟೋ ಮತ್ತು ಅಬ್ರೋಲ್ ಅವರ ಇತ್ತೀಚಿನ ತರಬೇತಿಯ ನಂತರದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೆಬ್ರವರಿ 1 ರಂದು ಬೆಂಗಳೂರಿನಲ್ಲಿ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಪರೀಕ್ಷಾರ್ಥ ಮಿರಾಜ್ 2000 ಫೈಟರ್ ಜೆಟ್ ಟೇಕ್‍ಆಫ್ ಮಾಡುತ್ತಿದ್ದಾಗ ಪತನಗೊಂಡಿತ್ತು. ಸ್ಕ್ವಾಡ್ರನ್ ನಾಯಕರಾದ ಸಮೀರ್ ಅಬ್ರೋಲ್ (33) ಮತ್ತು ಸಿದ್ಧಾರ್ಥ ನೇಗಿ (31) ಮೃತಪಟ್ಟಿದ್ದರು.

ಪತಿಯನ್ನು ಕಳೆದುಕೊಂಡ ದುಃಖದಲ್ಲಿ ಗರೀಮಾ ಅವರು “ಎಚ್ಚರಿಕೆಯ ನಡುವೆಯೂ ಹಳೆಯ ಯುದ್ಧ ವಿಮಾನಗಳನ್ನು ಏಕೆ ಬಳಸಲಾಗುತ್ತದೆ. ಕೆಟ್ಟ ವ್ಯವಸ್ಥೆಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು” ಎಂದು ಭಾವನಾತ್ಮಕವಾಗಿ ಪೋಸ್ಟ್ ಬರೆದಿದ್ದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಈಗ ಅವರು ವಾಯುಪಡೆ ಸೇರಲು ಸಜ್ಜಾಗುತ್ತಿದ್ದು, ಈ ವೇಳೆ ‘ದೇಶ ಸೇವೆಗೆ ವಾಯುಪಡೆ ಸೇರಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *