ಕಾಲೇಜಿನಲ್ಲಿದ್ದ ಸಿಸಿಟಿವಿಯಿಂದ ಪತ್ನಿಯ ನೀಚ ಕೃತ್ಯ ಬಯಲು

Public TV
1 Min Read

ಚಿತ್ರದುರ್ಗ: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯತಮನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿ ರಸ್ತೆಗೆ ಎಸೆದಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕನಕಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ.

ಗೋಪಾಲ ಕೊಲೆಯಾದ ವ್ಯಕ್ತಿ. ಮೃತನ ಪತ್ನಿ ಯಶೋಧ ತನ್ನ ಪ್ರಿಯಕರ ತಿಪ್ಪೇಶನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಆದರೆ ಯಾರಿಗೂ ಅನುಮಾನ ಬರಬಾರದೆಂದು ಪತಿಯ ಮೃತ ದೇಹವನ್ನು ಕನಕಯ್ಯನಹಟ್ಟಿ ಗ್ರಾಮದ ಖಾಸಗಿ ಐಟಿಐ ಕಾಲೇಜು ಆವರಣದಲ್ಲಿ ಎಸೆದು ಹೋಗಿದ್ದರು.

ಏನಿದು ಪ್ರಕರಣ?
ಅಕ್ಟೋಬರ್ 14ರಂದು ಸಂಜೆ ಕನಕಯ್ಯನಟ್ಟಿ ಗ್ರಾಮದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಗೋಪಾಲ ನಾಪತ್ತೆಯಾಗಿದ್ದನು. ಆಗ ಆತನ ಪತ್ನಿ ಯಶೋಧ ಪೊಲೀಸರ ಬಳಿ ಬಂದು, ನನ್ನ ಪತಿ ರಾತ್ರಿ ನಾಪತ್ತೆಯಾಗಿದ್ದರು. ಆದರೆ ಮರುದಿನ ಹೃದಯಾಘಾತದಿಂದ ಸಾವನ್ನಪ್ಪಿ ಕಾಲೇಜು ಬಳಿ ಬಿದ್ದಿದ್ದಾರೆ ಎಂದು ಅಕ್ಟೋಬರ್ 15 ರಂದು ದೂರು ನೀಡಿದ್ದಳು. ಆಕೆಯ ಮಾತು ನಂಬಿದ ಪೊಲೀಸರು ಇದು ಸಹಜ ಸಾವೆಂದು ಭಾವಿಸಿ ಸುಮ್ಮನಾಗಿದ್ದರು.

ಇತ್ತ ತನ್ನ ಸಹೋದರನ ಸಾವನ್ನು ನಂಬದ ಗೋಪಾಲನ ಸೋದರಿ ರತ್ನಮ್ಮ ಇದು ಕೊಲೆಯೆಂದು ಆರೋಪಿಸಿ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದ್ದರು. ಜೊತೆಗೆ ಗೋಪಾಲನ ಪತ್ನಿ ಯಶೋಧ ಹಾಗೂ ತಿಪ್ಪೇಶನ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು.

ಪೊಲೀಸರು ವಿಚಾರಣೆ ಶುರುಮಾಡಿದಾಗ ಖಾಸಗಿ ಕಾಲೇಜು ಆವರಣದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದೆವು. ಅದರಲ್ಲಿ ಗೋಪಾಲನ ಪತ್ನಿ ಯಶೋಧ ಹಾಗೂ ಆಕೆಯ ಪ್ರಿಯಕರ ತಿಪ್ಪೇಶ ಜೊತೆಗೆ ಅವನ ಸಹಚರ ಹುಲಿಕುಂಟ ಸೇರಿ ಕೊಲೆ ಮಾಡಿದ್ದರು. ಆದರೆ ಶವವನ್ನು ಆಕಸ್ಮಿಕ ಸಾವು ಅಥವಾ ಅಪಘಾತವೆಂದು ನಂಬಿಸಲು ಕಾಲೇಜು ಆವರಣದಲ್ಲಿ ಎಸೆದು ಬಂದಿದ್ದರು ಎಂಬುದು ತಿಳಿದು ಬಂದಿದೆ. ತಕ್ಷಣ ಪೊಲೀಸರು ಆರೋಪಿ ಯಶೋಧಳನ್ನು ಬಂಧಿಸಿದ್ದಾರೆ. ಆದರೆ ಇನ್ನಿಬ್ಬರು ಆರೋಪಿಗಳಾದ ತಿಪ್ಪೇಶ್ ಹಾಗೂ ಉಲಿಕುಂಟ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಎಸ್‍ಪಿ ಡಾ.ಅರುಣ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *