ಮೂವರು ಮಕ್ಕಳು, ಪತಿಯನ್ನು ಮನೆಯಿಂದ ಹೊರ ಹಾಕಿದ ಪತ್ನಿ

Public TV
1 Min Read

ಭೋಪಾಲ್: ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳನ್ನು ಮನೆಯಿಂದ ಹೊರ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.

ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ಘಟನೆ ನಡೆದಿದ್ದು, ಮಹಿಳೆ ಕೋಪಗೊಂಡು ಬಾಗಿಲು ತೆರೆದಿಲ್ಲ. ಆಗ ವ್ಯಕ್ತಿಯು ಮಗನನ್ನು ಸರ್ಕಾರಿ ರೇನ್ ಬಸೆರಾದಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿದ್ದಾರೆ. ಅಲ್ಲದೆ ಮಕ್ಕಳ ಸಹಾಯವಾಣಿ ಮೂಲಕ ಇಬ್ಬರು ಹೆಣ್ಣು ಮಕ್ಕಳನ್ನು ಆಶ್ರಯ ಕೇಂದ್ರಕ್ಕೆ ಸೇರಿಸಿದ್ದಾರೆ. ವ್ಯಕ್ತಿಯು ಅಶೋಕ ಗಾರ್ಡನ್ ಪೊಲೀಸ್ ಠಾಣೆಯಗೆ ಭೇಟಿ ನೀಡಿ ನನಗೆ ಹಾಗೂ ನನ್ನ ಮಕ್ಕಳಿಗೆ ಸುರಕ್ಷಿತ ಸ್ಥಳದ ವ್ಯವಸ್ಥೆ ಮಾಡುವಂತೆ ಸಹಾಯ ಕೇಳಿದ್ದಾರೆ.

ದಂಪತಿಗೆ ಮೂವರು ಮಕ್ಕಳಿದ್ದು, 11 ಹಾಗೂ 15 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಅಲ್ಲದೆ 13 ವರ್ಷದ ಮಗನಿದ್ದಾನೆ. ಈ ಕುರಿತು ಮಕ್ಕಳ ಸಹಾಯವಾಣಿಯ ನಿರ್ದೇಶಕಿ ಅರ್ಚನಾ ಸಹಾಯೆ ಮಾಹಿತಿ ನೀಡಿ, ದಂಪತಿಯ ವಿಚಾರಣೆ ನಡೆಸಿ, ಸಮಸ್ಯೆ ಇತ್ಯರ್ಥಪಡಿಸಲು ಯತ್ನಿಸಿದೆವು. ಆದರೆ ಮಹಿಳೆ ಇದಾವುದನ್ನೂ ಕೇಳುತ್ತಿಲ್ಲ. ಹೀಗಾಗಿ ಪೊಲೀಸರೊಂದಿಗೆ ಮಾತನಾಡಿ, ಇಬ್ಬರು ಹೆಣ್ಣು ಮಕ್ಕಳಿಗೆ ಆಶ್ರಯದ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.

ಮಹಿಳೆಯನ್ನು ಮನವೊಲಿಸಿ ಮಕ್ಕಳನ್ನು ಮನೆಗೆ ಮರಳಿ ಸೇರಿಸಲು ನಾವು ಹಾಗೂ ಪೊಲೀಸರು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದ ನಂತರ ಇಬ್ಬರು ಹೆಣ್ಣು ಮಕ್ಕಳನ್ನು ಆಶ್ರಯ ಕೇಂದ್ರಕ್ಕೆ ಕಳುಹಿಸಿದ್ದೇವೆ. ದಂಪತಿ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ವರೆಗೆ ಹುಡುಗಿಯರು ಆಶ್ರಯ ಕೇಂದ್ರದಲ್ಲಿಯೇ ಸುರಕ್ಷಿತವಾಗಿರುತ್ತಾರೆ ಎಂದು ತಿಳಿಸಿದರು.

ಪ್ರಕರಣದ ಕುರಿತು ಅಶೋಕ ಗಾರ್ಡನ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಉಮೇಶ್ ಯಾದವ್ ಮಾಹಿತಿ ನೀಡಿ, ಈ ಕುರಿತು ಚರ್ಚಿಸಲು ಮಹಿಳೆಯನ್ನು ಪೊಲೀಸ್ ಠಾಣೆಗೆ ಆಹ್ವಾನಿಸಿದ್ದೇವೆ. ಪ್ರಕರಣದ ಕುರಿತು ಈವರೆಗೆ ಎಫ್‍ಐಆರ್ ದಾಖಲಿಸಿಲ್ಲ. ದಂಪತಿ ಮಧ್ಯೆ ಇರುವ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

ಇಬ್ಬರು ಹೆಣ್ಣು ಮಕ್ಕಳು ಆಶ್ರಯ ಕೇಂದ್ರದಲ್ಲಿ ಸುರಕ್ಷಿತವಾಗಿದ್ದಾರೆ. ಹುಡುಗ ತನ್ನ ತಂದೆಯ ಜೊತೆಯಲ್ಲಿಯೇ ಇದ್ದಾನೆ. ಅಗತ್ಯವಿದ್ದಲ್ಲಿ ಪ್ರಕರಣದ ಕುರಿತು ಹುಡುಗಿಯರ ಹೇಳಿಕೆಯನ್ನು ಪಡೆಯುತ್ತೇವೆ. ಮಕ್ಕಳ ಹಿತದೃಷ್ಟಿಯಿಂದ ದಂಪತಿ ಮಧ್ಯೆ ಇರುವ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದೇವೆ. ಹೀಗಾಗಿ ಪ್ರಕರಣ ದಾಖಲಿಸಿಲ್ಲ ಎಂದು ಯಾದವ್ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *