ಬಾಗಲಕೋಟೆ: ಅಭಿವೃದ್ಧಿ ಕೆಲಸ ಮಾಡಿದರೂ ನಮಗೆ ವೋಟ್ ಹಾಕುವುದಿಲ್ಲ. ಕ್ಷೇತ್ರದಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಬಿಜೆಪಿಗೆ ವೋಟ್ ಹಾಕುತ್ತೀರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯ ಜನತೆಯನ್ನು ಪ್ರಶ್ನಿಸಿದ್ದಾರೆ.
ತಮ್ಮ ಕ್ಷೇತ್ರವಾದ ಬಾದಾಮಿಗೆ ಸಿದ್ದರಾಮಯ್ಯ ಆಗಮಿಸಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ಬಾಗಲಕೋಟೆ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ. ಆಲೂರು ಎಸ್.ಕೆ ಗ್ರಾಮದಲ್ಲಿ ಪಂಚಾಯತ್ ಕಟ್ಟಡ ಶಿಲಾನ್ಯಾಸ ನೇರವೇರಿಸಿ ಲೋಕಸಭೆ ಚುನಾವಣೆ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾದ ವಿಚಾರವನ್ನು ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು.
ಬಿಜೆಪಿಗೆ ಬಾದಾಮಿಯಿಂದ 9 ಸಾವಿರ ಲೀಡ್ ಹೋಗಿದೆ. ಅವರು ಏನು ಕೆಲಸ ಮಾಡಿದ್ದಾರೆ ಎಂದು ಅವರಿಗೆ ವೋಟ್ ಹಾಕುತ್ತೀರಾ ಅಂತ ನನಗೆ ಗೊತ್ತಾಗುತ್ತಿಲ್ಲ. ಅಭಿವೃದ್ಧಿ ಕೆಲಸ ಮಾಡಿದರೂ ನಮಗೆ ವೋಟ್ ಹಾಕುವುದಿಲ್ಲ. ಹೀಗೆ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿ ಅಸಮಾಧಾನ ಹೊರ ಹಾಕಿದರು.
ಇದೇ ವೇಳೆ ಭಾಷಣದ ಮಧ್ಯೆ ಮಾತಾಡೋಕೆ ಮುಂದಾದ ವ್ಯಕ್ತಿಗೆ ವೇದಿಕೆ ಮೇಲೆಯೇ ಸಿದ್ದರಾಮಯ್ಯ ಅವರು ಗದರಿದರು. “ಹೆ ಸುಮ್ನೆ ಇರಪ್ಪಾ, ಇರ್ತಿಯೋ ಇಲ್ಲವೋ? ಯಾರು ನೀನು? ಬಿಜೆಪಿಯವನಾ?” ಎಂದು ಪ್ರಶ್ನಿಸಿದರು. ಬಳಿಕ ಪೊಲೀಸರು ಆತನನ್ನು ಹೊರಕಳುಹಿಸಲು ಮುಂದಾದಾಗ, “ಏ ಪೊಲೀಸ್ ಬಿಡಪ್ಪ ಹೋಗ್ಲಿ” ಎಂದರು.
ಬಾದಾಮಿ ಕ್ಷೇತ್ರದ ಬೀರನೂರ್ ಕ್ರಾಸ್ ಬಳಿ ಸಿದ್ದರಾಮಯ್ಯನವರ ಕಾರು ಬರುತ್ತಿದ್ದಂತೆ ಜನರು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಕಾರು ತಡೆದು ಗ್ರಾಮಸ್ಥರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.