ಭಾರತದ ಮೇಲೆ ಪಾಕ್‌ ಹಾರಿಸಿದ್ದ ಅತ್ಯಾಧುನಿಕ AMRAAM ಮಿಸೈಲ್‌ ಟರ್ಕಿಗೆ ಪೂರೈಸಲು ಅಮೆರಿಕ ಡೀಲ್‌!

Public TV
4 Min Read

– ಸುಮಾರು 19,000 ಕೋಟಿ ಮೌಲ್ಯದ ಒಪ್ಪಂದಕ್ಕೆ ದೊಡ್ಡಣ್ಣ ಅಸ್ತು

ಇತ್ತೀಚೆಗೆ ಭಾರತ ನಡೆಸಿದ ʻಆಪರೇಷನ್‌ ಸಿಂಧೂರʼ ಸಂದರ್ಭದಲ್ಲಿ ಪಾಕಿಸ್ತಾನದ ಬೆನ್ನಿಗೆ ನಿಂತ ಟರ್ಕಿಗೆ ಬಹಿಷ್ಕಾರ ಹೇರುವ ಮೂಲಕ ಭಾರತ ಬಿಸಿ ಮುಟ್ಟಿಸಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡಿದ ನಂತರ ಟರ್ಕಿಯಿಂದ ಆಮದಾಗುತ್ತಿದ್ದ ಅಮೃತ ಶಿಲೆಗಳು, ತಾಜಾ ಸೇಬು, ಚಿನ್ನ, ತರಕಾರಿ, ಸುಣ್ಣ, ಸಿಮೆಂಟ್‌, ಖನಿಜ ತೈಲ ಇತರ ಎಲ್ಲಾ ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿದೆ. ಅಲ್ಲದೇ ಟರ್ಕಿ ಪ್ರವಾಸೋದ್ಯಮ, ಟರ್ಕಿಯಲ್ಲಿ ಸಿನಿಮಾ ಚಿತ್ರೀಕರಣವನ್ನೂ ನಿಷೇಧಿಸಿ ದೊಡ್ಡ ಆರ್ಥಿಕ ಹೊಡೆತ ನೀಡಿದೆ.

ಆದ್ರೆ ಇತ್ತ ನನ್ನಿಂದಲೇ ಭಾರತ-ಪಾಕ್‌ ನಡುವಿನ ಕದನ ವಿರಾಮ ಏರ್ಪಟ್ಟಿದ್ದು ಅಂತ ಬೊಬ್ಬೆ ಹೊಡೆದುಕೊಳ್ಳುತ್ತಿರೋ ಟ್ರಂಪ್‌ ಸರ್ಕಾರ ಹಿಂಬಾಗಿಲಿನಿಂದ ಟರ್ಕಿಗೆ ಮಿಲಿಟರಿ ಸಹಾಯ ನೀಡಲು ಮುಂದಾಗಿದೆ. ಹೌದು. ಟರ್ಕಿಗೆ AIM-120C-8 ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಮಿಸೈಲ್‌ (AMRAAMs) ಪೂರೈಸುವ 225 ಮಿಲಿಯನ್‌ ಡಾಲರ್‌ (ಸುಮಾರು 19 ಸಾವಿರ ಕೋಟಿ) ಒಪ್ಪಂದಕ್ಕೆ ಅಮೆರಿಕ ಅನುಮೋದನೆ ನೀಡಿದೆ. ಇದು ಭಾರತದ ಕಳವಳ ಹೆಚ್ಚಿಸಿದೆ.

ಏನಿದು AMRAAN ಮಿಸೈಲ್‌ ಒಪ್ಪಂದ?
ವರದಿಗಳ ಪ್ರಕಾರ, ಟರ್ಕಿಯು 53 AIM-120C-8 AMRAAM ಕ್ಷಿಪಣಿ ಮತ್ತು 6 AIM-120C-8 AMRAAM ಗೈಡೆನ್ಸ್‌ ವಿಭಾಗಗಳ ಬೆಂಬಲ ಕೇಳಿದೆ. ಇದರ ವೆಚ್ಚ 225 ಮಿಲಿಯನ್‌ ಡಾಲರ್‌ ಆಗಲಿದೆ. ಜೊತೆಗೆ ಒಟ್ಟು 79.1 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ 60 AIM-9X ಸೈಡ್‌ವೈಂಡರ್ ಬ್ಲಾಕ್-II ಆಲ್ ಅಪ್ ರೌಂಡ್ ಮಿಸೈಲ್‌ ಮತ್ತು 11 AIM-9X ಬ್ಲಾಕ್-II ಟ್ಯಾಕ್ಟಿಕಲ್ ಗೈಡೆನ್ಸ್‌ ಯೂನಿಟ್‌ಗಳನ್ನ ಪಡೆಯಲು ಒಪ್ಪಂದ ಮಾಡಿಕೊಂಡಿದೆ.

ಅಮೆರಿಕದ ಬಳಿಕ NATO ಮೈತ್ರಿಕೂಟದಲ್ಲಿ 2ನೇ ಅತಿದೊಡ್ಡ ಸಶಸ್ತ್ರ ಪಡೆಗಳನ್ನು ಹೊಂದಿರುವ ಟರ್ಕಿ ಇದೀಗ ಅತ್ಯಾಧುನಿಕ AIM-120C-8 AMRAAM ಗಳು ಮತ್ತು AIM-9X ಸೈಡ್‌ವೈಂಡರ್‌ಗಳನ್ನ ಉಡಾಯಿಸಬಲ್ಲ ಎಫ್‌-16 ವಿಮಾನಗಳ ಸಮೂಹವನ್ನೂ ಹೊಂದಿದೆ. AIM-120C-8 ಕ್ಷಿಪಣಿಯು ತನ್ನ ವ್ಯಾಪ್ತಿಗೂ ಮೀರಿದ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಒಟ್ಟಾರೆಯಾಗಿ ಈ ಶಸ್ತ್ರಾಸ್ತ್ರ ಒಪ್ಪಂದವು ಟರ್ಕಿಯ ವಾಯು ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ.

ನಿರಂತರ ಅಭಿವೃದ್ಧಿ
ಟರ್ಕಿಯ ರಾಜಧಾನಿ ಅಂಕಾರ ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಕಾಲಕಾಲಕ್ಕೆ ಮೇಲ್ದರ್ಜೆಗೆ ಏರಿಸುತ್ತಿದೆ. ಈ ನಡುವೆ ಅಮೆರಿಕ ಜೊತೆಗಿನ ಈ ಮಹತ್ವದ ಒಪ್ಪಂದ ನಡೆದಿದೆ. ಅಮೆರಿಕ ಸರಬರಾಜು ಮಾಡಲಿರುವ ಈ ಕ್ಷಿಪಣಿಗಳು ಅಂಕಾರಾದ ವಾಯುಪ್ರದೇಶವನ್ನ ಸುರಕ್ಷಿತಗೊಳಿಸುವ ಮತ್ತು ತನ್ನ ನೆಲದಲ್ಲಿ ನೆಲೆಸಿರುವ ಯುಎಸ್ ಸಿಬ್ಬಂದಿಯನ್ನ ರಕ್ಷಿಸುವುದಕ್ಕೂ ಸದುಪಯೋಗವಾದಂತಾಗಿದೆ.

2019ರಲ್ಲಿ ಟರ್ಕಿಯು ರಷ್ಯಾ ನಿರ್ಮಿತ ಎಸ್‌-400 ಡಿಫೆನ್ಸ್‌ ಸಿಸ್ಟಮ್‌ ಅನ್ನು ಖರೀದಿ ಮಾಡಿತ್ತು. ಇದರಿಂದ ಕೆರಳಿದ್ದ ಅಮೆರಿಕ ಕಾಟ್ಸಾ (CAATSA) ಕಾಯ್ದೆ ಅಡಿಯಲ್ಲಿ ಟರ್ಕಿಗೆ ನಿರ್ಬಂಧ ಹೇರಿತ್ತು. ಇದರಿಂದ ಟರ್ಕಿಯು ಅಮೆರಿಕದ F-35 ಫೈಟರ್ ಜೆಟ್ ಕಾರ್ಯಕ್ರಮದಿಂದ ಹೊರಗುಳಿಯಬೇಕಾಗಿತ್ತು. ಇದೀಗ ಭಾರತ-ಪಾಕ್‌ ಉದ್ವಿಗ್ನತೆ ನಡುವೆ ಮತ್ತೆ ಟರ್ಕಿಗೆ ಶಸ್ತ್ರಾಸ್ತ್ರ ಕಳಿಸಿಕೊಡಲು ಅಮೆರಿಕ ಮುಂದಾಗಿರುವುದು ಕಳವಳಕಾರಿಯಾಗಿದೆ.

ಟರ್ಕಿಗೆ ನೀಡಲು ಮುಂದಾಗಿರುವ AMRAAM ಏರ್‌-ಟು-ಏರ್‌ ಮಿಸೈಲ್‌ ವಿಶ್ವದ ಅತ್ಯಂತ ಅತ್ಯಾಧುನಿಕ ವಾಯು ರಕ್ಷಣಾ ಪ್ರಾಬಲ್ಯ ಆಯುಧ ಎಂದು ಬಣ್ಣಿಸಲಾಗಿದೆ. ಇದನ್ನ 4,900ಕ್ಕೂ ಹೆಚ್ಚು ಲೈವ್-ಫೈರ್ ಸನ್ನಿವೇಶಗಳಲ್ಲಿ ಪರೀಕ್ಷಿಸಲಾಗಿದೆ. ಈ ಕ್ಷಿಪಣಿಯನ್ನು F-15, F-16, F/A-18, F-22 ರಾಪ್ಟರ್, ಯೂರೋಫೈಟರ್ ಟೈಫೂನ್, ಗ್ರಿಪೆನ್, ಟೊರ್ನಾಡೊ, ಹ್ಯಾರಿಯರ್ ಮತ್ತು F-35ನ ಎಲ್ಲಾ ರೂಪಾಂತರಗಳು ಸೇರಿದಂತೆ ಬಹು ಯುದ್ಧ ವಿಮಾನಗಳ ಮೂಲಕ ಹಾರಿಸಬಹುದಾಗಿದೆ.

ಭಾರತದ ಮೇಲೆ ಪಾಕ್‌ ಬಳಸಿದ್ದ ಮಿಸೈಲ್‌ ಈಗ ಟರ್ಕಿಗೆ
2019ರ ಫೆಬ್ರವರಿ 19ರಂದು ನಡೆದ ಪುಲ್ವಾಮಾ ದಾಳಿಯ ಬಳಿಕ ಭಾರತ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿತ್ತು. ಈ ಸಂದರ್ಭದಲ್ಲಿ ಎಫ್‌-16 ಫೈಟರ್‌ ಜೆಟ್‌ ಮೂಲಕ ಪಾಕಿಸ್ತಾನ ಈಗ ಟರ್ಕಿಗೆ ನೀಡಲು ಮುಂದಾಗಿರುವ AMRAAM ಕ್ಷಿಪಣಿಗಳನ್ನ ಹಾರಿಸಿತ್ತು. ಪಾಕ್‌ ಈ ಕ್ಷಿಪಣಿ ಬಳಸಿತ್ತು ಎಂಬುದಕ್ಕೆ ಭಾರತ ಅಮೆರಿಕಕ್ಕೆ ಸಾಕ್ಷ್ಯವನ್ನೂ ನೀಡಿತ್ತು. ಇದೀಗ ಅದೇ ಮಿಸೈಲ್‌ ಅನ್ನು ಟರ್ಕಿಗೆ ಕೊಡಲು ಅಮೆರಿಕ ಒಪ್ಪಂದ ಮಾಡಿಕೊಂಡಿದೆ.

ಅಮೆರಿಕ – ಟರ್ಕಿ ಸಂಬಂಧ ಹೇಗಿದೆ?
ಅಮೆರಿಕ ಮತ್ತು ಟರ್ಕಿ ನಡುವಿನ ಮಿಲಿಟರಿ ಸಹಕಾರ ಈಗಲೂ ಮುಂದುವರೆದಿದೆ. ಏಕೆಂದರೆ ದಶಕಗಳಿಂದ, ಟರ್ಕಿಯು ಅಮೆರಿಕದ ರಕ್ಷಣಾ ರಫ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ಹಳೆಯ ಎಫ್ -4 ಫ್ಯಾಂಟಮ್‌ಗಳು ಮತ್ತು ಬ್ಲ್ಯಾಕ್ ಹಾಕ್ ಮತ್ತು ಚಿನೂಕ್‌ನಂತಹ ಅಮೆರಿಕನ್‌ ಚಾಪರ್‌ಗಳ ಜೊತೆಗೆ ಎಫ್-16 ಜೆಟ್‌ಗಳಂತಹ ದೊಡ್ಡ ಯುದ್ಧ ವಿಮಾನಗಳನ್ನೂ ಪಡೆದುಕೊಂಡಿದೆ. ಭೂಮಿ ಮತ್ತು ಸಮುದ್ರದಲ್ಲಿ, M60 ಪ್ಯಾಟನ್ ಯುದ್ಧ ಟ್ಯಾಂಕರ್‌ಗಳು, M113 ಶಸ್ತ್ರಸಜ್ಜಿತ ವಾಹನಗಳು ಸೇರಿದಂತೆ ಯುಎಸ್‌ ನಿರ್ಮಿತ ಉಪಕರಣಗಳನ್ನ ಟರ್ಕಿ ತನ್ನ ಸೇನೆಗೆ ನಿಯೋಜಿಸಿದೆ. ಸೈಡ್‌ವಿಂಡರ್ ಮತ್ತು ಮಾವೆರಿಕ್‌ನಂತಹ ಕ್ಷಿಪಣಿಗಳನ್ನ ವಾಯುಪಡೆಗೆ ನಿಯೋಜಿಸಿದೆ.

ಅಮೆರಿಕವು ಟರ್ಕಿಗೆ C-130 ಹರ್ಕ್ಯುಲಸ್ ಸಾರಿಗೆ ವಿಮಾನ ಮತ್ತು KC-135 ಇಂಧನ ತುಂಬುವ ಟ್ಯಾಂಕರ್‌ಗಳನ್ನ ಸಹ ಪೂರೈಸಿದೆ. ಟರ್ಕಿಯು ಡ್ರೋನ್ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿದ್ದರೂ, ಅದು ಮೊದಲು ಅಮೆರಿಕ ನಿರ್ಮಿತ ಕಣ್ಗಾವಲು UAV ಗಳನ್ನು (Unmanned Aerial Vehicle) ಅವಲಂಬಿಸಿದೆ. ಮುಂದಿನ ದಿನಗಳಲ್ಲಿ ವಿಮಾನ ಖರೀದಿಗಾಗಿ ಬೋಯಿಂಗ್‌ ಜೊತೆಗೆ ಮಾತುಕತೆ ನಡೆಸುತ್ತಿದೆ.

ಒಟ್ಟಾರೆಯಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕ ಇದೀಗ ಟರ್ಕಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸಲು ಒಪ್ಪಂದ ಮಾಡಿಕೊಂಡಿರುವುದು ಟ್ರಂಪ್‌ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ.

Share This Article