ಎಟಿಎಂ ಸ್ಥಗಿತ, ಫೋನ್ ಪೇ ಇಲ್ಲ, ವಿಥ್ ಡ್ರಾಗೆ ಮಿತಿ: ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದು ಯಾಕೆ?

Public TV
4 Min Read

ಬೆಂಗಳೂರು/ಮುಂಬೈ: ಖಾಸಗಿ ರಂಗದ 5ನೇ ಅತಿ ದೊಡ್ಡ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್‌ಬಿಐ ಸೂಪರ್ ಸೀಡ್ ಮಾಡಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.

ಇದೆ ವೇಳೆ ಮುಂದಿನ ಆದೇಶದವರೆಗೂ ಬ್ಯಾಂಕ್ ಗ್ರಾಹಕರು ಗರಿಷ್ಠ 50 ಸಾವಿರ ರೂ.ವರೆಗೆ ನಗದು ಹಣವನ್ನು ಡ್ರಾ ಮಾಡಲು ಅವಕಾಶವನ್ನು ನೀಡಿದೆ. ಈ ವಿಚಾರವನ್ನು ತಿಳಿದು ಗ್ರಾಹಕರು ಬ್ಯಾಂಕ್ ಕಚೇರಿಗೆ ದೌಡಾಯಿಸುತ್ತಿದ್ದು ಎಟಿಎಂ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

ಕೆಲವೊಂದು ಎಟಿಎಂಗಳು ಸಹ ಕಾರ್ಯನಿರ್ವಹಿಸದ ಪರಿಣಾಮ ಗ್ರಾಹಕರು ಶಾಪ ಹಾಕುತ್ತಿದ್ದಾರೆ. ಎಟಿಎಂ ಮುಂದೆ ಆರ್‌ಬಿಐ ನೋಟಿಸ್ ಅಂಟಿಸಲಾಗಿದ್ದು ಸಹಕರಿಸುವಂತೆ ಬ್ಯಾಂಕ್ ಕೇಳಿಕೊಂಡಿದೆ. ಭಾರೀ ಸಂಖ್ಯೆಯಲ್ಲಿ ಗ್ರಾಕರು ಇಂಟರ್ ನೆಟ್ ವ್ಯವಹಾರ ನಡೆಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗಿದೆ. ಶೀಘ್ರವೇ ಮರಳುತ್ತೇವೆ ಎಂದು ಯೆಸ್ ಬ್ಯಾಂಕ್ ಹೇಳಿದೆ.

ಆರ್‌ಬಿಐ ಆದೇಶದಲ್ಲಿ ಏನಿದೆ?
ಯೆಸ್ ಬ್ಯಾಂಕ್‍ನ ಎಲ್ಲಾ ಹಣಕಾಸು ಕಾರ್ಯ ಚಟುವಟಿಕೆಗಳ ಮೇಲೆ ತಡೆ ವಿಧಿಸಲಾಗಿದೆ. ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಲಾಗಿದ್ದು, ಗ್ರಾಹಕರು ಗರಿಷ್ಟ 50 ಸಾವಿರ ರೂ. ಹಣವನ್ನು ಡ್ರಾ ಮಾಡಬಹುದು ಎಂದು ತಿಳಿಸಿದೆ. ಮುಂದಿನ 30 ದಿನಗಳವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬ್ಯಾಂಕಿನ ಹಣಕಾಸು ಪರಿಸ್ಥಿತಿ ಮತ್ತು ಗ್ರಾಹಕರ ಹಿತ ಕಾಪಾಡುತ್ತೇವೆ ಎಂದು ಆರ್‌ಬಿಐ ಹೇಳಿದೆ. ಎಸ್‍ಬಿಐನ ಮಾಜಿ ಸಿಎಫ್‍ಒ ಪ್ರಶಾಂತ್ ಕುಮಾರ್ ಅವರನ್ನು ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿದೆ.

ಫೋನ್ ಪೇ ಅಲಭ್ಯ: ಯೆಸ್ ಬ್ಯಾಂಕ್ ಜೊತೆ ಫೋನ್ ಪೇ ಹಣಕಾಸು ವ್ಯವಹಾರ ನಡೆಸುತಿತ್ತು. ಈಗ ವ್ಯವಹಾರಕ್ಕೆ ನಿರ್ಬಂಧ ಹೇರಿದ್ದರಿಂದ ಪೋನ್ ಪೇ ಸೇವೆ ಸಹ ಅಲಭ್ಯವಾಗಿದೆ. ಶೀಘ್ರವೇ ನಾವು ಸೇವೆ ನೀಡುತ್ತೇವೆ ಎಂದು ಫೋನ್ ಪೇ ಸಿಇಒ ಸಮೀರ್ ನಿಗಮ್ ತಿಳಿಸಿದ್ದಾರೆ.

ಸಂಕಷ್ಟಕ್ಕೆ ಗುರಿಯಾಗಿದ್ದು ಯಾಕೆ?
ವಸೂಲಾಗದ ಸಾಲದ ಪ್ರಮಾಣದಲ್ಲಿನ ಭಾರಿ ಹೆಚ್ಚಳದಿಂದಾಗಿ ಬ್ಯಾಂಕ್ ಹಣಕಾಸು ಬಿಕ್ಕಟ್ಟಿಗೆ ಗುರಿಯಾಗಿದೆ. 2003-04 ರಲ್ಲಿ ಆರಂಭಗೊಂಡ ಈ ಬ್ಯಾಂಕ್ 10 ವರ್ಷಗಳಲ್ಲಿ ದೇಶದ ಟಾಪ್ 5 ಖಾಸಗಿ ಬ್ಯಾಂಕ್ ಆಗಿ ಹೊರಹೊಮ್ಮಿತ್ತು. ರಾಣಾ ಕಪೂರ್ ಮಾಲೀಕತ್ವದ ಈ ಬ್ಯಾಂಕ್ ನಲ್ಲಿ ರಾಬೋ ಬ್ಯಾಂಕ್ ಸಹ ಪಾಲು ಹೊಂದಿತ್ತು. ರಾಣಾ ಕಪೂರ್ ಶೇ.26 ರಷ್ಟು ಷೇರು ಹೊಂದಿದ್ದರೆ, ರಾಬೋ ಬ್ಯಾಂಕ್ ಇಂಟರ್ನ್ಯಾಷನಲ್  ಶೇ.20 ರಷ್ಟು ಷೇರುಗಳನ್ನು ಹೊಂದಿತ್ತು.

ವಿಜಯ್ ಮಲ್ಯ, ನೀರವ್ ಮೋದಿಯಂತಹ ವ್ಯಕ್ತಿಗಳು ಕೋಟ್ಯಂತರ ರೂ. ಸಾಲ ಮಾಡಿ ವಿದೇಶಕ್ಕೆ ಪರಾರಿಯಾದ ಬಳಿಕ ಕೇಂದ್ರ ಸರ್ಕಾರ ಭಾರೀ ಟೀಕೆಗೆ ಗುರಿಯಾಯಿತು. ಬಡವರ ಸಾಲ ಮನ್ನಾ ಮಾಡಲು ಹಿಂದೆ ಮುಂದೆ ನೋಡುವ ಸರ್ಕಾರಗಳು ಉದ್ಯಮಿಗಳ ಸಾಲ ಮನ್ನಾ ಮಾಡುವುದು ಸರಿಯೇ ಎನ್ನುವ ಪ್ರಶ್ನೆ ಎದ್ದಿತ್ತು. ಈ ಟೀಕೆಯ ನಂತರ ಎಚ್ಚೆತ್ತ ಆರ್‌ಬಿಐ ಸಾಲ ಮಾಡಿ ವಿದೇಶಕ್ಕೆ ಉದ್ಯಮಿಗಳು ಪರಾರಿ ಆಗದೇ ಇರಲು ಎಲ್ಲ ಬ್ಯಾಂಕ್ ಗಳು ಸಾಲದ ವಿವರಗಳನ್ನು ಕಡ್ಡಾಯವಾಗಿ ತನಗೆ ಸಲ್ಲಿಸಬೇಕು ಎಂದು ಸೂಚಿಸಿತ್ತು. ಅಷ್ಟೇ ಅಲ್ಲದೇ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿ ಅದನ್ನು ಮರಳಿ ಪಾವತಿಸದೆ ಇರುವವರನ್ನು ಆಯಾ ಬ್ಯಾಂಕುಗಳೇ ದಿವಾಳಿ ನ್ಯಾಯಾಲಯಕ್ಕೆ ಎಳೆಯಬೇಕು. ಈ ವಿಚಾರದಲ್ಲಿ ಬ್ಯಾಂಕ್ ಗಳು ಉದ್ಯಮಿಗಳ ಜೊತೆ ಸೇರಿ ಸಾಲವನ್ನು ಮುಚ್ಚಿಟ್ಟು ದಿವಾಳಿ ಪ್ರಕ್ರಿಯೆ ನಡೆಸದೇ ಇದ್ದರೆ ಬ್ಯಾಂಕ್ ಗಳ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

ಆರ್‌ಬಿಐ ಈ ಕಠಿಣ ನಿಯಮ ಯೆಸ್ ಬ್ಯಾಂಕಿಗೆ ಭಾರೀ ಹೊಡೆತ ನೀಡಿತ್ತು. ಕಠಿಣ ನಿಯಮ ಜಾರಿಯಾದ ನಂತರ ಯೆಸ್ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ನಲ್ಲಿ ವಸೂಲಾಗದ ಸಾಲದ ವಿಚಾರದಲ್ಲಿ ವ್ಯತ್ಯಾಸ ಇರುವುದು ಆರ್‌ಬಿಐ ಗಮನಕ್ಕೆ ಬಂದಿತ್ತು. 2019ರ ಸೆಪ್ಟೆಂಬರ್ ವೇಳೆ ವಸೂಲಾಗದ ಸಾಲದ ಪ್ರಮಾಣ ಶೇ.7.4ಕ್ಕೆ ಏರಿಕೆಯಾಗಿತ್ತು. ಈ ಸಮಸ್ಯೆಯ ಸುಳಿಯಿಂದ ಹೊರಬರಬೇಕಾದರೆ ಯೆಸ್ ಬ್ಯಾಂಕಿಗೆ 10 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಅವಶ್ಯಕತೆಯಿತ್ತು.

ವಿವಿಧ ಮೂಲಗಳನ್ನು ಹುಡುಕುತ್ತಿದ್ದಾಗ ಯೆಸ್ ಬ್ಯಾಂಕ್ ಕಳೆದ ನವೆಂಬರ್ ತಿಂಗಳಿನಲ್ಲಿ 2 ಶತಕೋಟಿ ಡಾಲರ್ ಹಣವನ್ನು ಷೇರುಗಳ ಮೂಲಕ ಸಂಗ್ರಹಿಸುವುದಾಗಿ ಘೋಷಣೆ ಮಾಡಿತ್ತು. ಘೋಷಣೆ ಮಾತ್ರ ಆಯ್ತ, ಆದರೆ ಮುಂದೆ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ.

ಆರ್‌ಬಿಐನಿಂದ ಪ್ರಕ್ರಿಯೆ ತಡವಾಯ್ತೆ?
ಕಳೆದ ವರ್ಷ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ(ಪಿಎಂಸಿ) ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್‌ಬಿಐ ಸೂಪರ್ ಸೀಡ್ ಮಾಡಿತ್ತು. ಈ ಪ್ರಕರಣ ನಡೆದ 6 ತಿಂಗಳ ಬಳಿಕ ಖಾಸಗಿ ರಂಗದ ದೊಡ್ಡ ಬ್ಯಾಂಕ್ ಆಗಿದ್ದ ಯೆಸ್ ಬ್ಯಾಂಕನ್ನು ಆರ್‌ಬಿಐ ಸೂಪರ್ ಸೀಡ್ ಮಾಡಿದೆ. ಹಾಗೆ ನೋಡಿದರೆ ಯೆಸ್ ಬ್ಯಾಂಕ್ ಸಂಕಷ್ಟದಲ್ಲಿ ಅಕ್ರಮ ನಡೆದಿರುವ ವಿಚಾರ ಆರ್‌ಬಿಐಗೆ 2018ರಲ್ಲೇ ಗೊತ್ತಾಗಿತ್ತು. ಸೆಬಿ ಸೂಚನೆಯ ಹಿನ್ನೆಲೆಯಲ್ಲಿ ಬ್ಯಾಂಕಿನ ಮುಖ್ಯಸ್ಥ ರಾಣಾ ಕಪೂರ್ 2019ರ ಜ.31ರಂದು ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ವೇಳೆ ತಮ್ಮ ಬಳಿಯಿದ್ದ ಅಷ್ಟು ಷೇರುಗಳನ್ನು ಮಾರಾಟ ಮಾಡಿದ್ದರು. ಸದ್ಯ ಈಗ ಶೇ.48ರಷ್ಟು ಷೇರು ಚಿಲ್ಲರೆ ಹೂಡಿಕೆದಾರರ ಬಳಿ ಇದೆ. 2019 ಹಣಕಾಸು ವರ್ಷದ ನಾಲ್ಕನೇಯ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ 1,507 ಕೋಟಿ ರೂ. ನಷ್ಟ ಅನುಭವಿಸಿತ್ತು.

ಯಾರಿಗೆ ಸಾಲ ನೀಡಿದೆ?
ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ಜೆಟ್ ಏರ್ ವೇಸ್, ಐಎಲ್ ಆಂಡ್ ಎಫ್‍ಎಸ್, ದಿವಾನ್ ಹೌಸಿಂಗ್, ಕಾಕ್ಸ್ ಆಂಡ್ ಕಿಂಗ್ಸ್, ಸಿಜಿ ಪವರ್, ಅಲ್ಟಿಕೋ ಕಂಪನಿಗಳಿಗೆ ಸಾಲ ನೀಡಿದೆ.

ಬೇಕಾಬಿಟ್ಟಿ ಸಾಲ?
ಸಾರ್ವಜನಿಕ ರಂಗದ ಬ್ಯಾಂಕ್ ಗಳಲ್ಲಿ ಸಾಲ ತೆಗೆದುಕೊಳ್ಳಬೇಕಾದರೆ ಹಲವು ಮಾನದಂಡಗಳು ಇರತ್ತದೆ ಮತ್ತು ಅಷ್ಟು ಸುಲಭವಾಗಿ ಸಾಲ ಸಿಗುವುದಿಲ್ಲ. ಆದರೆ ಖಾಸಗಿ ಬ್ಯಾಂಕ್ ಗಳು ಉದ್ಯಮಿಗಳಿಗೆ ಕಠಿಣ ನಿಯಮವನ್ನು ವಿಧಿಸುವುದಿಲ್ಲ. ಹೀಗಾಗಿ ಉದ್ಯಮಿಗಳು ಬಡ್ಡಿ ಜಾಸ್ತಿ ಇದ್ದರೂ ಖಾಸಗಿ ಬ್ಯಾಂಕುಗಳಿಂದ ಸಾಲವನ್ನು ಸುಲಭವಾಗಿ ಪಡೆಯುತ್ತಾರೆ. ಸರಿಯಾದ ಮಾನದಂಡಗಳನ್ನು ಅನುಸರಿಸದೇ ಸಾಲ ನೀಡಿರುವುದು ಮತ್ತು ಸಾಲ ಮರುಪಾವತಿ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿದ್ದರೂ ಕಠಿಣ ಕ್ರಮಗಳನ್ನು ಕೈಗೊಳ್ಳದ ಕಾರಣ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿ ಹೆಚ್ಚಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *