ಐವರಿಗೆ ನೀಡಿ ಉಮರ್‌ ಖಾಲಿದ್‌, ಶಾರ್ಜಿಲ್‌ಗೆ ಸುಪ್ರೀಂ ಜಾಮೀನು ನೀಡದ್ದು ಯಾಕೆ?

3 Min Read

ನವದೆಹಲಿ: ಶಾರ್ಜೀಲ್ ಇಮಾಮ್‌(Sharjeel Imam) ಮತ್ತು ಉಮರ್ ಖಾಲಿದ್ (Umar Khalid) ಕ್ರಿಮಿನಲ್‌ ಪಿತೂರಿಯಲ್ಲಿ ಭಾಗಿಯಾಗಿರುವುದಕ್ಕೆ ಪ್ರಾಸಿಕ್ಯೂಷನ್‌ ನೀಡಿದ ಸಾಕ್ಷ್ಯಗಳು ತೃಪ್ತಿ ನೀಡಿದ್ದರಿಂದ ಸುಪ್ರೀಂ ಕೋರ್ಟ್‌ (Supreme Court) ಇಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ದೆಹಲಿ ಗಲಭೆ ಪ್ರಕರಣಕ್ಕೆ (2020 Delhi Communal Riots) ಸಂಬಂಧಿಸಿದಂತೆ  ದೆಹಲಿ ಹೈಕೋರ್ಟ್ ಜಾಮೀನು (Bail) ನಿರಾಕರಿಸಿದ್ದ ಸೆಪ್ಟೆಂಬರ್ 2ರ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾ.ಅರವಿಂದ್ ಕುಮಾರ್ ಮತ್ತು ನ್ಯಾ.ಎನ್.ವಿ. ಅಂಜಾರಿಯಾ ಅವರನ್ನೊಳಗೊಡ ಪೀಠ ಇಂದು ಆದೇಶ ಪ್ರಕಟಿಸಿತು.

ಏಳು ಆರೋಪಿಗಳ ಅಪರಾಧ ಸಮಾನ ನೆಲೆಯಲ್ಲಿಲ್ಲದ ಕಾರಣ ಪ್ರತಿಯೊಬ್ಬ ಆರೋಪಿಯ ಜಾಮೀನು ಅರ್ಜಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಯಿತು. ಇತರ ಆರೋಪಿಗಳಿಗೆ ಹೋಲಿಸಿದರೆ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಮೇಲೆ ಗಂಭೀರ ಆರೋಪವಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಮೊಹಮ್ಮದ್ ಸಮೀರ್ ಖಾನ್, ಶಾದಾಬ್ ಅಹ್ಮದ್ ಮತ್ತು ಶಿಫಾ ಉರ್ ರೆಹಮಾನ್ ಅವರಿಗೆ ಜಾಮೀನು ನೀಡುವಾಗ ಕೋರ್ಟ್‌, ಜಾಮೀನು ನೀಡಿದೆ ಎಂದ ಮಾತ್ರಕ್ಕೆ ಆರೋಪಗಳು ದುರ್ಬಲಾಗಿದೆ ಎಂದು ಅರ್ಥವಲ್ಲ ಎಂದು ಹೇಳಿದೆ.

12 ಷರತ್ತುಗಳಿಗೆ ಒಳಪಟ್ಟು ಐವರನ್ನು  ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಈ ಷರತ್ತುಗಳಲ್ಲಿ ಯಾವುದಾದರೂ ಉಲ್ಲಂಘನೆಯಾದರೆ ಜಾಮೀನನ್ನು ರದ್ದುಗೊಳಿಸಬಹುದು ಎಂದು ತಿಳಿಸಿದೆ.  ಇದನ್ನೂ ಓದಿ: ಪ್ರಾಸಿಕ್ಯೂಷನ್ ವಿರುದ್ಧವೇ ರೇಣುಕಾಸ್ವಾಮಿ ತಾಯಿ ಹೇಳಿಕೆ

ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಒಂದು ವರ್ಷದ ನಂತರ ಜಾಮೀನು ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ನೀಡಲಾಗಿದೆ. ಪ್ರಕರಣವನ್ನು ತ್ವರಿತವಾಗಿ ನಡೆಸುವಂತೆ ಪೊಲೀಸರು ಮತ್ತು ವಿಚಾರಣೆಗೆ ನ್ಯಾಯಾಲಯವು ನಿರ್ದೇಶನ ನೀಡಿದೆ ಮತ್ತು ಒಂದು ವರ್ಷದೊಳಗೆ ಎಲ್ಲಾ ಸಾಕ್ಷಿಗಳನ್ನು ವಿಚಾರಣೆ ನಡೆಸಬೇಕು ಎಂದು ಸೂಚಿಸಿದೆ.

ಯುಎಪಿಎ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಜಾಮೀನು ನೀಡುವುದಿಲ್ಲವಾದರೂ, ಜಾಮೀನನ್ನು ಪೂರ್ವನಿಯೋಜಿತವಾಗಿ ನಿರಾಕರಿಸಬೇಕು ಎಂದು ಕಾಯಿದೆ ಕಡ್ಡಾಯಗೊಳಿಸುವುದಿಲ್ಲ ಹಾಗೂ ಜಾಮೀನು ಮಂಜೂರು ಮಾಡುವ ನ್ಯಾಯಾಲಯದ ಅಧಿಕಾರವನ್ನು ಕೂಡ ಹೊರತುಪಡಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಪ್ರಸಕ್ತ ಪ್ರಕರಣದಲ್ಲಿ ಚರ್ಚೆಯನ್ನು ವಿಳಂಬ ಹಾಗೂ ದೀರ್ಘಾವಧಿಯ ಬಂಧನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಯುಎಪಿಎ ಅಡಿಯ ಅಪರಾಧಗಳು ಸಾಮಾನ್ಯವಾಗಿ ಪ್ರತ್ಯೇಕ ಕೃತ್ಯಗಳಿಗೆ ಸೀಮಿತವಾಗಿರುವುದಿಲ್ಲ. ಕಾನೂನಿನ ಸ್ವರೂಪವು ಈ ಅರ್ಥವನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಾಲಯವು ತೀರ್ಪಿನ ವೇಳೆ ವಿವರಿಸಿದೆ. ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಸ್ವಾತಂತ್ರ್ಯದ ಹಕ್ಕಿನ ಪ್ರಕಾರ, ವಿಚಾರಣೆ ಪೂರ್ವ ದೀರ್ಘಾವಧಿಯ ಬಂಧನನ್ನು ಸರ್ಕಾರ ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದು ಪೀಠ ಒತ್ತಿ ಹೇಳಿದೆ.

ಏನಿದು ಪ್ರಕರಣ?
ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ವಿರೋಧಿಸಿ ಭಾರೀ ಪ್ರತಿಭಟನೆ ನಡೆದಿತ್ತು. 2020ರ ಫೆಬ್ರವರಿ 23 ಮತ್ತು 27ರ ನಡುವೆ ಗಲಭೆ, ಹಿಂಸಾಚಾರದಲ್ಲಿ 53 ಜನರ ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದರು. ಗಲಭೆ ಬಳಿಕ 757 ಎಫ್‌ಐಆರ್‌ ಆರ್ ದಾಖಲಾಗಿ, 1,638ಕ್ಕೂ ಹೆಚ್ಚು ಮಂದಿ ಬಂಧನವಾಗಿತ್ತು

 

2020ರ ಆಗಸ್ಟ್‌ನಲ್ಲಿ ಶಾರ್ಜೀಲ್ ಬಂಧನವಾದರೆ 2020ರ ಸೆಪ್ಟೆಂಬರ್‌ನಲ್ಲಿ ಉಮರ್ ಖಾಲಿದ್ ಬಂಧನವಾಗಿತ್ತು. ತನಿಖೆ ನಡೆಸಿದ ದೆಹಲಿ ಪೊಲೀಸರು 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. 2022ರಲ್ಲಿ ದೆಹಲಿ ಕೋರ್ಟ್‌ ಎಲ್ಲ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿತ್ತು.

2025 ಸೆಪ್ಟೆಂಬರ್‌ 2 ರಂದು ದೆಹಲಿ ಹೈಕೋರ್ಟ್‌ ಜಾಮೀನು ವಜಾಗೊಳಿಸಿತ್ತು.ಬಳಿಕ ಜಾಮೀನಿಗಾಗಿ ಆರೋಪಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಪೊಲೀಸರು ಜಾಮೀನು ಯಾಕೆ ಕೊಡಬಾರದು ಎಂದು 389 ಪುಟಗಳ ಅಫಿಡವಿಟ್ ಸಲ್ಲಿಸಿದ್ದರು. ಡಿಸೆಂಬರ್ 10ರಂದು ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿತ್ತು.

ಆರೋಪಿಗಳು ಐದು ವರ್ಷಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿರುವ ಕಾರಣ ಜಾಮೀನು ಮಂಜೂರು ಮಾಡಬೇಕೆಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದರು.

ದೆಹಲಿ ಪೊಲೀಸರ ವಾದ ಏನು?
2020 ರ ಗಲಭೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 (ಯುಎಪಿಎ) ಭಯೋತ್ಪಾದನಾ ವಿರೋಧಿ ಕಾನೂನು ಮತ್ತು ಹಿಂದಿನ ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಗಲಭೆಗಳು ಸ್ವಯಂಪ್ರೇರಿತವಲ್ಲ, ಆದರೆ ಭಾರತದ ಸಾರ್ವಭೌಮತ್ವದ ಮೇಲೆ ಸಂಯೋಜಿತ, ಪೂರ್ವ ಯೋಜಿತ ದಾಳಿ ಎಂದು ದೆಹಲಿ ಪೊಲೀಸರು ಜಾಮೀನು ಅರ್ಜಿಯನ್ನು ವಿರೋಧಿಸಿದ್ದರು. ಗಲಭೆಗೆ ಸಂಬಂಧಿಸಿದಂತೆ 757 ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ ಮತ್ತು 273 ಪ್ರಕರಣಗಳಲ್ಲಿ ತನಿಖೆ ಬಾಕಿ ಇದೆ ಮತ್ತು 250 ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಇದೆ ಎಂದು ಅವರು ಹೈಕೋರ್ಟ್‌ಗೆ ತಿಳಿಸಿದ್ದರು.

ಇಮಾಮ್ ತನ್ನ ಭಾಷಣದಲ್ಲಿ ಸಿಲಿಗುರಿ ಕಾರಿಡಾರ್ ಅನ್ನು ಮುಚ್ಚಿ ಅಸ್ಸಾಂ ಅನ್ನು ಭಾರತದಿಂದ ಶಾಶ್ವತ ಸಂಪರ್ಕ ಕಡಿತಗೊಳಿಸಲು ಕರೆ ನೀಡಿದ್ದನ್ನು ದೆಹಲಿ ಪೊಲೀಸರ ಪರ ವಕೀಲರು ಕೋರ್ಟ್‌ ಗಮನಕ್ಕೆ ತಂದಿದ್ದರು.

Share This Article