ಕಾಲಿಟ್ಟಲ್ಲೆಲ್ಲಾ ಮರಳಿದ್ದರೂ ಸೌದಿ ಅರೇಬಿಯಾ ಮರಳು ಆಮದು ಮಾಡಿಕೊಳ್ಳುವುದು ಏಕೆ?

Public TV
3 Min Read

ವಿಶಾಲವಾದ ಮರುಭೂಮಿ ಹೊಂದಿರುವ ದೇಶ ಸೌದಿ ಅರೇಬಿಯಾ. ಇಲ್ಲಿ ಕಣ್ಣು ಹಾಯಿಸಿದಷ್ಟು ದೂರ ಬರೀ ಮರಳೇ ಕಾಣಸಿಗುತ್ತದೆ. ಕಾಲಿಟ್ಟಲ್ಲೆಲ್ಲಾ ಮರಳು ಸಿಗುವ ದೇಶವಾದ ಸೌದಿ ಅರೇಬಿಯಾ (Saudi Arabia) ದುಬಾರಿ ಹಣ ಕೊಟ್ಟು ಮರಳನ್ನು ಆಮದು (Sand Import) ಮಾಡಿಕೊಳ್ಳುತ್ತದೆ. ಅರೇ ತನ್ನಲ್ಲೇ ಅಷ್ಟೊಂದು ಮರಳನ್ನು ಇಟ್ಟುಕೊಂಡು ಹಣಕೊಟ್ಟು ಆಮದು ಮಾಡಿಕೊಳ್ಳುವುದು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲಿ ಮೂಡುತ್ತದೆ. ಆಶ್ಚರ್ಯ ಎನಿಸಿದರೂ ಇದು ಸತ್ಯ. ಹಾಗಿದ್ರೆ ಸುತ್ತಲೂ ಮರಳು ಹೊಂದಿದ್ದರೂ ಬೇರೆಡೆಯಿಂದ ಮರಳು ಆಮದು ಮಾಡಿಕೊಳ್ಳುತ್ತಿರುವುದು ಏಕೆ? ಅಲ್ಲಿರುವ ಮರಳನ್ನು ಯಾಕೆ ಬಳಕೆ ಮಾಡುತ್ತಿಲ್ಲ‌ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಮರಳು ಭೂಮಿಗೆ ಹೆಸರುವಾಸಿಯಾಗಿರುವ ಸೌದಿ ಅರೇಬಿಯಾದಲ್ಲಿ ಮರಳಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ಬೇರೆ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುತ್ತಿದೆ. ಸೌದಿ ಅರೇಬಿಯಾ ಆಸ್ಟ್ರೇಲಿಯಾ, ಚೀನಾ ಮತ್ತು ಬೆಲ್ಜಿಯಂನಂತಹ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುತ್ತದೆ. ಇದರ ಹಿಂದೆ ಒಂದು ಬಲವಾದ ಕಾರಣವಿದೆ. ಸೌದಿಯಲ್ಲಿ ಲಭ್ಯವಿರುವ ಮರಳು ಬಳಕೆಗೆ ಮತ್ತು ನಿರ್ಮಾಣ ಕಾರ್ಯಗಳಿಗೆ ಸೂಕ್ತವಲ್ಲ. ಅಲ್ಲದೇ ಸೌದಿಯಲ್ಲಿ ಮರಳು ಬೇಡಿಕೆ ಕೂಡ ಹೆಚ್ಚಿದೆ. ಆದ್ದರಿಂದ ಸೌದಿ ಅರೇಬಿಯಾ ದುಬಾರಿ ಹಣ ನೀಡಿ ಬೇರೆಬೇರೆ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುತ್ತಿದೆ.

ಸೌದಿಯಲ್ಲಿನ ಮರಳು ಬಳಕೆಗೆ ಯೋಗ್ಯವಲ್ಲ:
ಸೌದಿ ಅರೇಬಿಯಾದಲ್ಲಿ ದೊರಕುವ ಮರಳು ಬಳಕೆಗೆ ಯೋಗ್ಯವಲ್ಲ. ಕೇವಲ ಕೆಲವು ಪ್ರದೇಶಗಳ ಮರಳು ಮಾತ್ರವೇ ಬಳಕೆಗೆ ಯೋಗ್ಯವಾಗಿದೆ. ಇದರಿಂದಾಗಿ ಸೌದಿ ಅರೇಬಿಯಾ ಬೇರೆಡೆಯಿಂದ ಮರಳನ್ನು ಆಮದು ಮಾಡಿಕೊಳ್ಳುತ್ತದೆ. ವಿಷನ್‌ 2030 ಯೋಜನೆ ಘೋಷಣೆಯಾದ ಬಳಿಕ ಸೌದಿಯಲ್ಲಿ ಮರಳಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ದೊಡ್ಡ ಮಟ್ಟದ ನಿರ್ಮಾಣ ಕಾರ್ಯಗಳಿಗೆ ಮರಳಿನ ಅವಶ್ಯಕತೆಯಿದೆ. ಹೀಗಾಗಿ ಸೌದಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. 

ಸೌದಿಯಲ್ಲಿ ಸಿಗುವ ಮರಳನ್ನು ಬಳಸದಿರಲು ಕಾರಣವೇನು?
ಸೌದಿಯಲ್ಲಿ ಸಿಗುವ ಮರಳು ಗಾಳಿಯ ತೀವ್ರತೆಗೆ ಸವೆದು ಹೋಗಿರುತ್ತದೆ .ಮರುಭೂಮಿಯ ಮರಳು ಸಾಮಾನ್ಯವಾಗಿ ನಯವಾಗಿರುತ್ತದೆ ಮತ್ತು ದುಂಡಾಗಿರುತ್ತದೆ. ಏಕೆಂದರೆ ಗಾಳಿಯಿಂದ ಉಂಟಾಗುವ ಸವೆತದಿಂದಾಗಿ ಇದು ಸಿಮೆಂಟ್‌ನೊಂದಿಗೆ ಬಳಸಲು ಸೂಕ್ತವಲ್ಲ.ನಿರ್ಮಾಣದ ವೇಳೆ ನೀರು ಮತ್ತು ಸಿಮೆಂಟ್‌ನೊಂದಿಗೆ ಚೆನ್ನಾಗಿ ಬೆರೆಯುವಂತಹ ಒರಟಾದ ಮರಳನ್ನು ಬಳಸಲಾಗುತ್ತದೆ. ಈ ರೀತಿಯ ಮರಳು ಸಾಮಾನ್ಯವಾಗಿ ನದಿಪಾತ್ರಗಳು, ಸರೋವರಗಳು ಮತ್ತು ಸಮುದ್ರತಳಗಳಲ್ಲಿ ಕಂಡುಬರುತ್ತದೆ. 

ಆದರೆ ಸೌದಿಯಲ್ಲಿ ದೊರಕುವ ಮರಳು ನಯವಾಗಿದ್ದು, ಸಿಮೆಂಟ್‌ನೊಂದಿಗೆ ಹೊಂದಿಕೊಳ್ಳುವುದಿಲ್ಲ. ಅಲ್ಲದೇ ಈ ಮರಳಿನಿಂದ ಕಟ್ಟಡ ನಿರ್ಮಿಸಿದರೆ ಗಟ್ಟಿಯಾಗಿ ಉಳಿಯುವುದಿಲ್ಲ.  ಸೌದಿ ಅರೇಬಿಯಾ ಜೊತೆಗೆ, ಯುಎಇ ಮತ್ತು ಕತಾರ್ ಕೂಡ ಇದೇ ಕಾರಣಕ್ಕಾಗಿ ಮರಳನ್ನು ಆಮದು ಮಾಡಿಕೊಳ್ಳುತ್ತವೆ. 

ದುಬೈ ಮತ್ತು ಅಬುಧಾಬಿಯಂತಹ ನಗರಗಳು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿವೆ ಮತ್ತು ಅಲ್ಲಿ ನಿರ್ಮಿಸುವ ಎತ್ತರದ ಕಟ್ಟಡಗಳು ಮತ್ತು ಆಧುನಿಕ ಮೂಲಸೌಕರ್ಯಗಳಿಗೆ ಉತ್ತಮ ಗುಣಮಟ್ಟದ ಮರಳಿನ ಅಗತ್ಯವಿದೆ. ಗಲ್ಫ್ ರಾಷ್ಟ್ರಗಳ ತ್ವರಿತ ಬೆಳವಣಿಗೆಯು ಜಾಗತಿಕವಾಗಿ ಮರಳಿಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗುತ್ತಿದೆ ಎಂದು 2024ರಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ವರದಿ ತಿಳಿಸಿದೆ.

ಸದ್ಯ ಸೌದಿ ಅರೇಬಿಯಾ ದುಬಾರಿ ಬೆಲೆ ನೀಡಿ ಮರಳನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗೆ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಆಸ್ಟ್ರೇಲಿಯಾ ಮರಳು ರಫ್ತು ಮಾಡುತ್ತಿದೆ. ದೇಶವು 2023ರಲ್ಲಿ ಒಟ್ಟು 273 ಮಿಲಿಯನ್ ಡಾಲರ್ ಮೌಲ್ಯದ ಮರಳನ್ನು ರಫ್ತು ಮಾಡಿದೆ. ಇದು ಜಾಗತಿಕವಾಗಿ ಎರಡನೇ ಅತಿದೊಡ್ಡ ಮರಳಿನ ರಫ್ತುದಾರ ರಾಷ್ಟ್ರವಾಗಿದೆ. ‌

ಹಾಗೆ ಸೌದಿ ಅರೇಬಿಯಾ ಆಸ್ಟ್ರೇಲಿಯಾದಿಂದ ಮಾತ್ರವೇ ಬರೋಬ್ಬರಿ 140,000 ಡಾಲರ್‌ ಮೌಲ್ಯದ ಮರಳನ್ನ ಒಂದೇ ವರ್ಷದಲ್ಲಿ ಆಮದು ಮಾಡಿಕೊಂಡಿದೆ.

ನೈಸರ್ಗಿಕ ಮರಳಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಸೌದಿ ಅರೇಬಿಯಾ ಸೇರಿದಂತೆ ಕೆಲವು ದೇಶಗಳು M-ಸ್ಯಾಂಡ್‌ನಂತಹ ಪರ್ಯಾಯಗಳನ್ನು ಅನ್ವೇಷಿಸುತ್ತಿವೆ. ಇದನ್ನು ನಿರ್ಮಾಣದಲ್ಲಿ ಬಳಸಲು ಸೂಕ್ತವಾಗಿಸಲು ಬಂಡೆಗಳನ್ನು ಪುಡಿಮಾಡಿ ತಯಾರಿಸಲಾಗುತ್ತದೆ. 

ಇನ್ನು ಸೌದಿಯಲ್ಲಿ ಮರಳು ಮಾತ್ರವಲ್ಲದೇ ಒಂಟೆಗಳನ್ನು ಸಹ ಆಮದು ಮಾಡಿಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾದಿಂದ ಸೌದಿ ಅರೇಬಿಯಾ ಭಾರೀ ಪ್ರಮಾಣದ ಒಂಟೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಆಸ್ಟ್ರೇಲಿಯಾದಲ್ಲಿ ಕಾಡು ಒಂಟೆಗಳ ದೊಡ್ಡ ಹಿಂಡುಗಳಿವೆ. ಅದು ಬಹಳ ತಳಿಗಳನ್ನು ಹೊಂದಿದೆ ಮತ್ತು ಸೌದಿ ಅರೇಬಿಯಾದಲ್ಲಿನ ಒಂಟೆಗಳಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಒಂಟೆಗಳು ಹೆಚ್ಚು ಆರೋಗ್ಯಕರವಾಗಿದ್ದು, ರೋಗ ನಿರೋಧಕಗಳನ್ನು ಹೊಂದಿದೆ. 

ಸೌದಿ ಅರೇಬಿಯಾದಲ್ಲಿ ಒಂಟೆಗಳನ್ನು ಸಾಗಾಣಿಕೆ, ಆಹಾರ, ಮತ್ತು ಸೌಂದರ್ಯದ ಸಂಕೇತವಾಗಿ ಬಳಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿ ವಿಶೇಷ ಉತ್ಸವಗಳನ್ನು ನಡೆಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಪ್ರತಿ ವರ್ಷ ಕಿಂಗ್ ಅಬ್ದುಲಜೀಜ್ ಒಂಟೆ ಉತ್ಸವವನ್ನು ನಡೆಸಲಾಗುತ್ತದೆ. ಇದರಲ್ಲಿ ಒಂಟೆಗಳ ಸೌಂದರ್ಯ ಮತ್ತು ಓಟ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಒಂಟೆ ಮಾಂಸ ಮತ್ತು ಹಾಲು ಸೌದಿ ಅರೇಬಿಯಾದಲ್ಲಿ ಜನಪ್ರಿಯ ಆಹಾರವಾಗಿದೆ. ಹೀಗಾಗಿ ಸೌದಿ ಒಂಟೆಗಳನ್ನು ಕೂಡ ಆಮದು ಮಾಡಿಕೊಳ್ಳುತ್ತದೆ.  

 

Share This Article