ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್‍ಗೆ ವಾರಗಳ ಹಿಂದೆ ರಾಷ್ಟ್ರಪತಿ ರಿಟ್ರೀಟ್ ಕಟ್ಟಡಕ್ಕೆ ಪ್ರವೇಶ ನಿರಾಕರಿಸಿದ್ದು ಯಾಕೆ?

Public TV
1 Min Read

ನವದೆಹಲಿ: ಬಿಹಾರದ ರಾಜ್ಯಪಾಲರಾದ ರಾಮ್‍ನಾಥ್ ಕೋವಿಂದ್ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿಯೆಂದು ಬಿಜೆಪಿ ಈಗಾಗಲೇ ಘೋಷಿಸಿದೆ. ಆದ್ರೆ ರಾಮ್‍ನಾಥ್ ಕೋವಿಂದ್ ಅವರಿಗೆ ಸುಮಾರು ಮೂರು ವಾರಗಳ ಹಿಂದೆ ರಾಷ್ಟ್ರಪತಿಗಳ ರಿಟ್ರೀಟ್ ಕಟ್ಟಡಕ್ಕೆ ಪ್ರವೇಶ ನೀಡಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದೀಗ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ.

ಕೋವಿಂದ್ ಅವರು ಹಿಮಾಚಲ ಪ್ರದೇಶದಲ್ಲಿ ಕುಟುಂಬದವರ ಜೊತೆ ಪ್ರವಾಸಕ್ಕೆಂದು ಬಂದಾಗ ಶಿಮ್ಲಾದಿಂದ ಸುಮಾರು 15 ಕಿ.ಮೀ ದೂರದ ಮಶ್ರೋಬಾದಲ್ಲಿರುವ ರಾಷ್ಟ್ರಪತಿಗಳ ರಿಟ್ರೀಟ್ ಕಟ್ಟಡದೊಳಗೆ ಅನುಮತಿ ನಿರಾಕರಿಸಲಾಗಿತ್ತು.

71 ವರ್ಷದ ಕೋವಿಂದ್, ಮೇ 28ರಂದು ಶಿಮ್ಲಾದ ಸುತ್ತಮುತ್ತ ಹಲವು ಜಾಗಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಶೋಬ್ರಾ ಹಿಲ್ಸ್ ನಲ್ಲಿರುವ ಭಾರೀ ಭದ್ರತೆಯುಳ್ಳ ರಾಷ್ಟ್ರಪತಿ ರಿಟ್ರೀಟ್ ಕಟ್ಟಡಕ್ಕೆ ಹೋಗಿದ್ರು. ಆದ್ರೆ ಅಗತ್ಯ ಅನುಮತಿ ಇಲ್ಲದ ಕಾರಣ ಅವರಿಗೆ ಕಟ್ಟಡದ ಪ್ರವೇಶವನ್ನು ನಿರಕರಿಸಲಾಗಿತ್ತು.

ಇದನ್ನೂ ಓದಿ:  ರಾಮನಾಥ್ ಕೋವಿಂದ್‍ಗೆ ಇದೆ ಕಲಬುರಗಿಯ ನಂಟು: ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಮೋದಿ ಹೊಡೆದಿದ್ದು ಹೇಗೆ..?

ಈ ವೇಳೆ ಕೋವಿಂದ್ ಅವರು ಅನುಮತಿಗಾಗಿ ಯಾರಿಗೂ ಕರೆ ಮಾಡದೆ ಶಿಮ್ಲಾದ ಬಾರ್ನೆಸ್ ಕೋರ್ಟ್‍ನ ರಾಜ್ಯಪಾಲರ ಗೃಹಕ್ಕೆ ತೆರಳಿದ್ದರು. ಅವರು ರಾಜ್ ಭವನ್‍ಗೆ ಹಿಂದಿರುಗಿದ ನಂತರವಷ್ಟೆ ರಿಟ್ರೀಟ್ ಕಟ್ಟಡಕ್ಕೆ ಪ್ರವೇಶ ನಿರಾಕರಿಸಲಾದ ಬಗ್ಗೆ ತಿಳಿಸಿದ್ರು ಎಂದು ರಾಜ್ಯಪಾಲ ಆಚಾರ್ಯ ದೇವ ವ್ರತ್ ಅವರ ಸಲಹೆಗಾರ ಶಶಿಕಾಂತ್ ಶರ್ಮಾ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.

ರಿಟ್ರೀಟ್ ಕಟ್ಟಡವನ್ನು ಭಾರತದ ರಾಷ್ಟ್ರಪತಿಗಳ ಕಚೇರಿ ನಿರ್ವಹಿಸುತ್ತದೆ. ಹಿಮಾಚಲ ಪ್ರದೇಶದ ಪೊಲೀಸರು ಕಟ್ಟಡಕ್ಕೆ ಭದ್ರತೆ ಒದಗಿಸುತ್ತಾರೆ. ವರ್ಷಕ್ಕೆ ಒಂದು ಬಾರಿ ದೇಶದ ರಾಷ್ಟ್ರಪತಿಗಳು ಕೆಲಸದಿಂದ ವಿರಾಮ ಪಡೆದು ಇಲ್ಲಿ ಬಂದು ಕೆಲ ದಿನಗಳನ್ನು ಕಳೆಯುವ ಸಂಪ್ರದಾಯವಿದೆ.

ಕೋವಿಂದ್ ಅವರು ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಬಿಜೆಪಿಯು ದೇಶದ ಹಿಂದುಳಿದ ವರ್ಗವನ್ನ ಗಮನದಲ್ಲಿಟ್ಟುಕೊಂಡೇ ದಲಿತರಾದ ಕೋವಿಂದ್ ಅವರನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ಚಾಲೆಂಜ್ ಎಸೆದು ಗೆದ್ದ ಅಮಿತ್ ಶಾ

Share This Article
Leave a Comment

Leave a Reply

Your email address will not be published. Required fields are marked *