ಭಾರತದ 100ನೇ ಉಪಗ್ರಹ ಉಡಾಯಿಸಿದ ಬೆನ್ನಲ್ಲೇ ನರ್ವಸ್ ಆಯ್ತು ಪಾಕಿಸ್ತಾನ

Public TV
3 Min Read

ನವದೆಹಲಿ: ಉಗ್ರಗಾಮಿಗಳಿಗೆ ಆರ್ಥಿಕ ಸಹಾಯ ನೀಡಿ ಭಾರತದಲ್ಲಿ ಅಶಾಂತಿ ನೆಲೆಸಲು ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತ 100ನೇ ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದು ತಲೆನೋವಾಗಿ ಪರಿಣಮಿಸಿದೆ.

ಹೌದು, ಇಸ್ರೋ ಸಂಸ್ಥೆ ಇಂದು ಬೆಳಗ್ಗೆ ಭಾರತದ 100 ನೇ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಆದರೆ ಭಾರತದ ಉಪಗ್ರಹ ಉಡಾವಣೆ ಯಶಸ್ವಿಯಾದ ಕೂಡಲೇ ಪಾಕಿಸ್ತಾನ ಈ ಕುರಿತು ಅಪಸ್ವರ ಎತ್ತಿದ್ದು, ಭಾರತದ ಈ ಉಪಗ್ರಹ ಯೋಜನೆಯಿಂದ ಪ್ರಾದೇಶಿಕ ವ್ಯೂಹಾತ್ಮಕ ಸ್ಥಿರತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಆರೋಪಿಸಿದೆ.

ಈ ಆರೋಪದ ಜೊತೆ ಭಾರತದ ಈ ಉಪಗ್ರಹ ತಂತ್ರಜ್ಞಾನವನ್ನು ತನ್ನ ಮಿಲಿಟರಿ ರಕ್ಷಣಾ ವ್ಯವಸ್ಥೆಗೆ ಬಳಸಿಕೊಂಡರೆ ದಕ್ಷಿಣ ಏಷ್ಯಾ ಖಂಡದಲ್ಲಿ ಶಾಂತಿಗೆ ದಕ್ಕೆ ಉಂಟಾಗಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿದೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್, ಭಾರತ ಉಡಾವಣೆ ಮಾಡಿರುವ ಉಪಗ್ರಹಗಳು ಮಿಲಿಟರಿ ಹಾಗೂ ನಾಗರಿಕ ಉದ್ದೇಶ ಎರಡಕ್ಕೂ ಬಳಕೆ ಮಾಡಿಕೊಳ್ಳಲು ಸಾಧ್ಯವಿದ್ದು, ಒಂದು ವೇಳೆ ಭಾರತ ಇದನ್ನೂ ಮಿಲಿಟರಿ ವ್ಯವಸ್ಥೆಯಲ್ಲಿ ಬಳಕೆ ಮಾಡಿಕೊಂಡರೆ ಅದು ಮಿಲಿಟರಿ ವ್ಯವಸ್ಥೆಯ ಅಸ್ಥಿರತೆಗೆ ಕಾರಣವಾಗಲಿದೆ. ಅಲ್ಲದೇ ಪ್ರಾದೇಶಿಕ ಸಂಬಂಧಗಳ ಆಸ್ಥಿರತೆಗೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇಸ್ರೋ ತನ್ನ 100ನೇ ಉಪಗ್ರಹವನ್ನು ಆಂಧ್ರದ ಶ್ರೀಹರಿಕೋಟಾದಲ್ಲಿರುವ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಕಳುಹಿಸಿತ್ತು. ಕಾರ್ಟೋಸ್ಯಾಟ್-2 ಸಿರೀಸ್‍ನ ಒಂದು, ಒಂದು ನ್ಯಾನೋ ಮತ್ತು ಮೈಕ್ರೋ ಸ್ಯಾಟಲೈಟ್‍ಗಳನ್ನು ಹೊತ್ತು ಪಿಎಸ್‍ಎಲ್‍ವಿ ಸಿ-40 ಉಡಾವಣಾ ನೌಕೆ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಭಾರತದ ಉಪಗ್ರಹದ ಜೊತೆಗೆ ಜೊತೆಗೆ ಅಮೆರಿಕ, ಕೆನಡಾ, ಇಂಗ್ಲೆಂಡ್, ಕೊರಿಯಾ, ಫಿನ್‍ಲ್ಯಾಂಡ್ ಹಾಗೂ ಫ್ರಾನ್ಸ್ ಗೆ ಸೇರಿದ 28 ವಿದೇಶಿ ಉಪಗ್ರಹಗಳು ಕಕ್ಷೆ ಸೇರಿದ್ದವು. ಕಾರ್ಟೋಸ್ಯಾಟ್-2 ಸ್ಯಾಟ್‍ಲೈಟ್ 710 ಕೆಜಿ ಭಾರ ಹೊಂದಿತ್ತು. ಆದರೆ ಕಳೆದ ವರ್ಷದ ಆಗಸ್ಟ್ ನಲ್ಲಿ ಉಷ್ಣ ಕವಚ ಪ್ರತ್ಯೇಕೀಕರಣದಲ್ಲಿ ತೊಂದರೆ ಉಂಟಾಗಿ ಐಆರ್ ಎನ್‍ಎಸ್‍ಎಸ್-1ಎಚ್ ಉಪಗ್ರಹ ಉಡಾವಣೆ ವಿಫಲವಾಗಿತ್ತು.

ಸಾರ್ಕ್ ಉಪಗ್ರಹಕ್ಕೆ ಸಹಕರಿಸಲಿಲ್ಲ:
2014ರ ಮೇನಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ, ಮಿತ್ರರಾಷ್ಟ್ರಗಳಿಗೆ ಭಾರತದ ಉಡುಗೊರೆಯಾಗಿ ಸಾರ್ಕ್ ಸ್ಯಾಟಲೈಟ್ ಅಭಿವೃದ್ಧಿಪಡಿಸಲು ಇಸ್ರೋ ವಿಜ್ಞಾನಿಗಳಿಗೆ 2014ರ ಜೂನ್ ನಲ್ಲಿ ಕೇಳಿದ್ದರು. ಮೋದಿ ಆಶಯದಂತೆ ದಕ್ಷಿಣ ಏಷ್ಯಾ ಬಾಂಧವ್ಯದ ಪ್ರತೀಕ `ಸೌತ್ ಏಷ್ಯಾ ಕಮ್ಯುನಿಕೇಷನ್ ಸ್ಯಾಟಲೈಟ್’ ಆದ ಜಿಸ್ಯಾಟ್-9(ಜಿಯೋಸ್ಟೇಷನರಿ ಕಮ್ಯುನಿಕೇಷನ್ ಸ್ಯಾಟಲೈಟ್) ಇಸ್ರೋ ತಯಾರಿಸಿ 2017ರ ಮೇ ತಿಂಗಳಿನಲ್ಲಿ ಕಕ್ಷೆಗೆ ಸೇರಿಸಿತ್ತು.

ಈ ಮಹತ್ವದ ಯೋಜನೆಗೆ ಪಾಕಿಸ್ತಾನ ಸಹಕಾರ ನೀಡಿರಲಿಲ್ಲ. ಸಾರ್ಕ್ ರಾಷ್ಟ್ರಗಳಾದ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಈ ಯೋಜನೆಯ ಭಾಗವಾಗಿತ್ತು. ದೂರಸಂಪರ್ಕ, ದೂರಸಂವಹನ, ಡಿಟಿಎಚ್, ವಿಸ್ಯಾಟ್, ದೂರಶಿಕ್ಷಣ ಮತ್ತು ಟೆಲಿ ಮೆಡಿಸಿನ್ ಕ್ಷೇತ್ರದಲ್ಲಿ ಈ ಉಪಗ್ರಹ ನೆರವಿಗೆ ಬರಲಿದೆ. ಅಷ್ಟೇ ಅಲ್ಲ, ಭೂಕಂಪ, ಪ್ರವಾಹ, ಚಂಡಮಾರುತ, ಸುನಾಮಿಗಳು ಹೀಗೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಹಾಟ್‍ಲೈನ್ ಸಂಪರ್ಕದ ಮೂಲಕ ಪರಿಹಾರ ಕಾರ್ಯಾಚರಣೆಗೆ ನೆರವಾಗಲಿದೆ.

ಭಾರತಕ್ಕಿಂತಲೂ ಮೊದಲು ಅಂದರೆ 1961 ರಲ್ಲೇ ಪಾಕಿಸ್ತಾನ ಬಾಹ್ಯಾಕಾಶ ಕೇಂದ್ರವನ್ನು ಆರಂಭಿಸಿ ಸಂಶೋಧನೆಯಲ್ಲಿ ತೊಡಗಿತ್ತು. ನಂತರದಲ್ಲಿ 8 ವರ್ಷಗಳ ಬಳಿಕ ಭಾರತ ತನ್ನ ಬಾಹ್ಯಾಕಾಶ ಕೇಂದ್ರ ಇಸ್ರೋ ವನ್ನು ಸ್ಥಾಪಿಸಿತು. ಇಸ್ರೋ ತನ್ನ ಆಧುನಿಕ ಸಂಶೋಧನೆಗಳ ಮೂಲಕ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೀರ್ತಿ ಪಡೆದಿದೆ. ಅಲ್ಲದೇ ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಗೆ ಪೈಪೋಟಿ ನೀಡುವ ಹಂತವನ್ನು ತಲುಪಿದೆ. ಇಸ್ರೋ ಕೇವಲ ಭಾರತದ ಉಪಗ್ರಹಗಳನ್ನು ಮಾತ್ರ ಉಡಾವಣೆ ಮಾಡದೇ ಈಗ ವಿದೇಶಿ ಉಪಗ್ರಹಗಳನ್ನು ಸಹ ಕಡಿಮೆ ವೆಚ್ಚದಲ್ಲಿ ಉಡಾವಣೆ ಮಾಡುಕೊಡುತ್ತಿದೆ.

ತಿರುಗೇಟು ಕೊಟ್ಟ ಜನ:
ಇಸ್ರೋ ಉಪಗ್ರಹ ಅಪಸ್ವರ ಎತ್ತಿದ ಪಾಕ್ ನಡೆಯಲ್ಲಿ ಖಂಡಿಸಿದ ಭಾರತೀಯರು, ನೀವು ಕ್ಷಿಪಣಿ, ಬಾಂಬ್ ತಯಾರಿಸುವುದರ ಜೊತೆಗೆ ಉಗ್ರರಿಗೆ ಆರ್ಥಿಕ ಸಹಾಯ ನೀಡುವುದು ಹೇಗೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಿ. ನಮ್ಮ ದೇಶದ ಸಾಧನೆ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *