ಬಹುಭಾಷಾ ನಟ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಪ್ರಕಾಶ್ ರೈಗೆ ಕುಟುಕಿದ ಎಂಬಿ ಪಾಟೀಲ್‌

Public TV
3 Min Read

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಹೋರಾಟದ ಹಕ್ಕಿದೆ. ನಾನೂ ಹೋರಾಟ ಮಾಡಿಕೊಂಡೇ ಬಂದಿರುವವನು. ಈ ವಿಷಯ ಬಹುಭಾಷಾ ನಟ ಪ್ರಕಾಶ್ ರೈಗೆ (Prakash Rai) ಗೊತ್ತಿರಲಿಕ್ಕಿಲ್ಲ. ಬರಪೀಡಿತ ವಿಜಯಪುರ ಜಿಲ್ಲೆಯನ್ನು ನಾನು ಹೋರಾಡಿಯೇ ನೀರಾವರಿ ಭೂಮಿಯನ್ನಾಗಿ ಮಾಡಿದ್ದೇನೆ. ಪ್ರಕಾಶ್ ರೈ ಅವರು ನಮಗಿಂತ ಆಂಧ್ರದಲ್ಲಿ ಹೆಚ್ಚು ಪ್ರಭಾವಿಗಳು ಮತ್ತು ಜನಪ್ರಿಯರು. ಆದ್ದರಿಂದ ಅವರು ಬೇರೆಬೇರೆ ರಾಜ್ಯಗಳಲ್ಲೂ ರೈತರ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದರೆ ಒಳ್ಳೆಯದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ (MB Patil) ಕುಟುಕಿದ್ದಾರೆ.

ಮಂಗಳವಾರ ಇಲ್ಲಿನ‌ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ನಮ್ಮಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕಿಗಾಗಿ ಕೇವಲ 1,282 ಎಕರೆ ಮಾತ್ರ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಪಕ್ಕದ ಆಂಧ್ರ ಪ್ರದೇಶದಲ್ಲಿ (Andhra Pradesh) ಇದೇ ಉದ್ದೇಶಕ್ಕಾಗಿ ನಮ್ಮ ಗಡಿಗೇ ಅಂಟಿಕೊಂಡಿರುವ ಮಡಕಶಿರಾದಿಂದ ಪೆನುಗೊಂಡದವರೆಗೆ 10 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡು, ಉಚಿತವಾಗಿ ಕೊಡುವುದಾಗಿ ಹೇಳಲಾಗುತ್ತಿದೆ. ಅಲ್ಲದ, ಆಂಧ್ರದಲ್ಲಿ ಬೇರೆಬೇರೆ ಕೈಗಾರಿಕಾ ಉದ್ದೇಶಗಳಿಗೆ 45 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ಫೋಸಿಸ್, ಕಾಗ್ನಿಜೆಂಟ್, ಟಿಸಿಎಸ್ ಮುಂತಾದ 100 ಕಂಪನಿಗಳಿಗೆ ವಿಶಾಖಪಟ್ಟಣದಲ್ಲಿ ಎಕರೆಗೆ ಬರೀ 99 ಪೈಸೆಯಂತೆ ಭೂಮಿ ಕೊಡಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಪ್ರಕಾಶ್ ರೈಗೆ ಇವೆಲ್ಲ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿ ಕಿಡಿಕಾರಿದರು. ಇದನ್ನೂ ಓದಿ: ಡಿಫೆನ್ಸ್ ಕಾರಿಡಾರ್ ಬಗ್ಗೆ ಚರ್ಚಿಸಲು ನಾಳೆ ಸಿಎಂ ಜೊತೆ ರಾಜನಾಥ್ ಸಿಂಗ್ ಭೇಟಿ: ಎಂ.ಬಿ.ಪಾಟೀಲ್

ಇತ್ತ ತಮಿಳುನಾಡಿನ (Tamil Nadu) ಹೊಸೂರು ನಮ್ಮಿಂದ ಕೇವಲ 50 ಕಿ.ಮೀ. ದೂರದಲ್ಲಿದೆ. ಅಲ್ಲಿನ ಸರ್ಕಾರ ಈಗ ಆ ಪ್ರದೇಶವನ್ನು ಕೇಂದ್ರೀಕರಿಸಿ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸುತ್ತಿದೆ. ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ನಿರ್ಮಿಸಲು ಮುಂದಾಗಿದೆ. ಇದಕ್ಕೆಲ್ಲ ಅದೂ ಸಹ ಅಗ್ಗದ ದರದಲ್ಲಿ ಭೂಮಿ ಕೊಡುತ್ತಿದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಉದ್ಯಮ ನಡೆಸುತ್ತಿರುವವರಿಗೆ ಬೆಂಗಳೂರು ಬರೀ ಆಶ್ರಯತಾಣವಾಗಿ ಕಾಣುತ್ತಿದೆ. ಆಂಧ್ರದ ಯೋಜನೆ ಗೆದ್ದರೆ, ನಮ್ಮ ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಗಳು ಅಲ್ಲಿಗೆ ಹೋಗಬಹುದು. ಇದರಿಂದ ರಾಜ್ಯಕ್ಕೆ ಆಗುವ ನಷ್ಟವನ್ನು ಅಂದಾಜು ಮಾಡಲೂ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕವು (Karnataka) ದೇಶದ ರಕ್ಷಣೆ ಮತ್ತು ವೈಮಾಂತರಿಕ್ಷ ವಹಿವಾಟಿನಲ್ಲಿ ಶೇಕಡ 65ರಷ್ಟು ಪಾಲು ಹೊಂದಿದ್ದು, ಈ ವಲಯದಲ್ಲಿನ ನಮ್ಮ ಕಾರ್ಯ ಪರಿಸರವು ಜಾಗತಿಕವಾಗಿ ತೃತೀಯ ಸ್ಥಾನದಲ್ಲಿದೆ. ನಮ್ಮಲ್ಲಿ ಈ ವಲಯದ ಎಚ್ಎಎಲ್, ಸ್ಯಾಫ್ರಾನ್, ಬೋಯಿಂಗ್, ಏರ್ ಬಸ್, ಕಾಲಿನ್ಸ್, ಲಾಕ್ ಹೀಡ್ ಮಾರ್ಟಿನ್ ಮುಂತಾದ ದೈತ್ಯ ಕಂಪನಿಗಳಿವೆ. ದೇವನಹಳ್ಳಿಯಲ್ಲಿರುವ ವಿಮಾನ ನಿಲ್ದಾಣದ ಪಕ್ಕದಲ್ಲೇ ಏರೋಸ್ಪೇಸ್ ಪಾರ್ಕ್ ಇದೆ. ಇದಕ್ಕೆ ಮತ್ತಷ್ಟು ಬಲ ತುಂಬಲೆಂದೇ ಈಗ ಅದರ ಸನಿಹದಲ್ಲೇ ಉದ್ದೇಶಿತ ಪಾರ್ಕ್ ಸ್ಥಾಪಿಸುವ ಚಿಂತನೆ ಇದೆ. ಸಂತ್ರಸ್ತ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರವೇ ನ್ಯಾಯಯುತ ಪರಿಹಾರ ಕೊಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಕಾಶ್ ರೈ ಬಗ್ಗೆ ವೈಯಕ್ತಿಕವಾಗಿ ಯಾವ ಸಿಟ್ಟೂ ಇಲ್ಲ. ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗಲೂ ಒಳ್ಳೆಯ ಕೆಲಸಗಳನ್ನೇ ಮಾಡಿದ್ದೇನೆ. ರೈತ ಮುಖಂಡ ಬಯ್ಯಾರೆಡ್ಡಿ ಅವರೇ ಇದನ್ನು ಮೆಚ್ಚಿಕೊಂಡು ಮಾತನಾಡಿದ್ದರು. ದುರದೃಷ್ಟವಶಾತ್ ಇವತ್ತು ಅವರು ನಮ್ಮೊಂದಿಗಿಲ್ಲ. ಅವರು ನಿಜವಾದ ರೈತ ನಾಯಕರಾಗಿದ್ದರು. ಈಗ ನಮ್ಮ ವಿರುದ್ಧ ಮಾತನಾಡುತ್ತಿರುವವರು ಇದನ್ನೆಲ್ಲ ಅರಿಯಬೇಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

 

ಇಬ್ಬರ ಮಧ್ಯೆ ವಾಕ್ಸಮರ ಯಾಕೆ?
ದೇವನಹಳ್ಳಿ ಕೃಷಿ ಭೂಮಿ ಸ್ವಾಧೀನಕ್ಕೆ ಪ್ರಕಾಶ್ ರಾಜ್ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಎಂಬಿ ಪಾಟೀಲ್‌ ಆಕ್ಷೇಪ ವ್ಯಕ್ತಪಡಿಸಿ ಪ್ರಕಾಶ್‌ ರಾಜ್ ಬಹುಭಾಷಾ ನಟರಲ್ವಾ? ಕರ್ನಾಟಕದಲ್ಲಿ (Karnataka) ಮಾತ್ರವಲ್ಲ, ಗುಜರಾತ್‌ನಲ್ಲೂ (Gujarat) ಹೋರಾಟ ಮಾಡಲಿ ಎಂದು ಸವಾಲ್‌ ಎಸೆದಿದ್ದರು.

ಎಂಬಿಪಿ ಸವಾಲಿಗೆ ತಿರುಗೇಟು ನೀಡಿದ್ದ ಪ್ರಕಾಶ್‌ ರಾಜ್‌, ಇದು ದೇವನಹಳ್ಳಿ ರೈತರ ಸಮಸ್ಯೆ, ಎಲ್ಲೆಲ್ಲೋ ಮಾಡಲು ಸಾಧ್ಯವಿಲ್ಲ. ನಾವು ದೇಶದ ಹಲವು ಕಡೆ ಹೋರಾಟ ಮಾಡಿದ್ದೇವೆ. ತಮಿಳುನಾಡಿನ ರೈತರ ಪರ ದೆಹಲಿಯಲ್ಲಿ ಕುಳಿತವನು ನಾನೇ. ಪಂಜಾಬ್​ ರೈತರು ಹೋರಾಟ ಮಾಡ್ದಾಗಲು‌‌ ನಿಂತವನು‌ ನಾನೇ, ನಾವು ಎಲ್ಲಾ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ಮೋದಿಯನ್ನು ನಿಮಗಿಂತ ಜಾಸ್ತಿ ನಾನು ಪ್ರಶ್ನೆ ಮಾಡಿದ್ದೇನೆ ಎಂದು ಪ್ರಕಾಶ್ ರಾಜ್​ ತಿರುಗೇಟು ನೀಡಿದ್ದರು.

 

Share This Article