ಮಹಾ ಸಿಎಂ ಆಗಿ ಉದ್ಧವ್ ಪ್ರಮಾಣವಚನ – ಶಿವಾಜಿ ಪಾರ್ಕಿನಲ್ಲೇ ಕಾರ್ಯಕ್ರಮ ನಡೆದಿದ್ದು ಯಾಕೆ?

Public TV
2 Min Read

ಮುಂಬೈ: ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಗೆ ತೆರೆಬಿದ್ದಿದ್ದು, ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮಹಾರಾಷ್ಟ್ರದಲ್ಲಿಂದು ಉದ್ಧವ್ ಠಾಕ್ರೆ ನೇತೃತ್ವದ `ಮಹಾವಿಕಾಸ್ ಅಘಡಿ’ ಸರ್ಕಾರ ರಚನೆಯಾಗಿದೆ. ಮುಂಬೈನ ಶಿವಾಜಿ ಪಾರ್ಕಿನಲ್ಲಿ ಸಂಜೆ 6.30ಕ್ಕೆ ಅದ್ಧೂರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಶಿವಾಜಿ ಸಾಕ್ಷಿಯಾಗಿ, ಸಾವಿರಾರು ಶಿವಸೈನಿಕರ ಸಮ್ಮುಖದಲ್ಲಿ ಮಹಾರಾಷ್ಟ್ರದ 19ನೇ ಸಿಎಂ ಆಗಿ ಉದ್ಧವ್ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಸುಮಾರು 40 ವರ್ಷಗಳ ಶಿವಸೇನೆಯ ರಾಜಕೀಯ ಇತಿಹಾಸದಲ್ಲಿ ಠಾಕ್ರೆ ಕುಟುಂಬದ ಮೊದಲ ಕುಡಿಯಾಗಿ ಉದ್ಧವ್ ಮುಖ್ಯಮಂತ್ರಿ ಸ್ಥಾನವನ್ನು ಏರಿದರು.

ಶಿವಾಜಿ ಪಾರ್ಕಿನಲ್ಲೇ ಯಾಕೆ?
ಶಿವಾಜಿ ಪಾರ್ಕ್ ಹಾಗೂ ಶಿವಸೇನೆಗೂ ಭಾರೀ ಅವಿನಾಭಾವ ಸಂಬಂಧವಿದೆ. ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರು ಶಿವಾಜಿ ಪಾರ್ಕ್ ನಲ್ಲಿ ತಮ್ಮ ಮೊದಲ ಸಾರ್ವಜನಿಕ ಭಾಷಣವನ್ನು 1966ರಲ್ಲಿ ಮಾಡಿದ್ದರು. ಅಷ್ಟೇ ಅಲ್ಲದೆ ಕಳೆದ ಐದು ದಶಕಗಳಿಂದ ಶಿವಸೇನೆಯು ದಸರಾ ಹಬ್ಬವನ್ನು ಶಿವಾಜಿ ಪಾರ್ಕ್ ನಲ್ಲಿ ಆಚರಿಸುತ್ತಾ ಬಂದಿದೆ. ಜೊತೆಗೆ 2012ರಲ್ಲಿ ನಿಧನರಾದ ಬಾಳಾ ಠಾಕ್ರೆ ಅವರ ಅಂತ್ಯಸಂಸ್ಕಾರವನ್ನು ಇಲ್ಲಿಯೇ ಮಾಡಲಾಗಿದೆ. ಹೀಗಾಗಿ ಉದ್ಧವ್ ಠಾಕ್ರೆ ಅವರ ಪ್ರಮಾಣವಚನ ಕಾರ್ಯಕ್ರಮವನ್ನು ಶಿವಾಜಿ ಪಾರ್ಕಿನಲ್ಲೇ ನಡೆಸಲಾಗಿದೆ.

ಉದ್ಧವ್ ಠಾಕ್ರೆ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದಾಗ ಶಿವಸೇನೆ ಕಾರ್ಯಕರ್ತರು, ಅಭಿಮಾನಿಗಳ ಕರತಾಡನದ ಮೆಕ್ಸಿಕನ್ ಅಲೆಯಂತೆ ಅರಬ್ಬೀಸಮುದ್ರದಲ್ಲಿ ತೇಲಿ ಹೋಯಿತು. ಉದ್ಧವ್ ಠಾಕ್ರೆ ಅವರೊಂದಿಗೆ ಮೂರು ಪಕ್ಷಗಳ ಹಿರಿಯ, ಅನುಭವಸ್ಥರಾದ ಶಿವಸೇನೆಯ ಏಕನಾಥ್ ಶಿಂಧೆ, ಸುಭಾಶ್ ದೇಸಾಯಿ, ಎನ್‍ಸಿಪಿಯ ಜಯಂತ್ ಪಾಟೀಲ್, ಛಗನ್ ಭುಜ್ಬಲ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಬಾಳಾ ಸಾಹೇಬ್ ಥೋರಟ್, ದಲಿತ ನಾಯಕ ನಿತಿನ್ ರಾವತ್ ಪ್ರಮಾಣ ವಚನ ಸ್ವೀಕರಿಸಿದರು.

ಉಪಮುಖ್ಯಮಂತ್ರಿಯಾಗಿ ಯಾರೊಬ್ಬರೂ ಪ್ರಮಾಣ ವಚನ ಸ್ವೀಕರಿಸಲಿಲ್ಲ. ನಾನಿವತ್ತು ಪ್ರಮಾಣ ವಚನ ಪಡೆಯಲ್ಲ ಅಂತ ಎನ್‍ಸಿಪಿಯ ಅಜಿತ್ ಪವಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ 3ರಂದು ಬಹುಮತ ಸಾಬೀತು ನಡೆಯಲಿದ್ದು, ನಂತರ ಸಂಪುಟ ವಿಸ್ತರಣೆಯಾಗಲಿದೆ. ಈ ಮಧ್ಯೆ, ಕಾಂಗ್ರೆಸ್‍ನಲ್ಲಿ ಸಣ್ಣಗೆ ಅಪಸ್ವರ ಎದ್ದಿದೆ. ಕಾಂಗ್ರೆಸ್ ಲಿಸ್ಟ್‍ನಲ್ಲಿ ಮೊದಲು ಮಾಜಿ ಸಿಎಂ ಅಶೋಕ್ ಚವಾಣ್ ಹೆಸರಿತ್ತು ನಂತರ ಕೈಬಿಡಲಾಯಿತು. ಅದಕ್ಕೆ ಅವರು ಅಸಮಾಧಾನಗೊಂಡಿದ್ದಾರೆ ಅಂತ ಕೇಳಿ ಬಂದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಸಮಾರಂಭಕ್ಕೆ ಬರಲಿಲ್ಲ. ಎಂಎನ್‍ಎಸ್‍ನ ರಾಜಠಾಕ್ರೆ, ಮಧ್ಯಪ್ರದೇಶದ ಸಿಎಂ ಕಮಲನಾಥ್, ಉತ್ತರ ಪ್ರದೇಶ ಎಸ್‍ಪಿಯ ಅಖಿಲೇಶ್ ಯಾದವ್, ಮುಖೇಶ್-ನೀತಾ ಅಂಬಾನಿ ದಂಪತಿ ಭಾಗಿಯಾಗಿದ್ರು. ಈ ಮಧ್ಯೆ ಉದ್ಧವ್‍ಗೆ ಪ್ರಧಾನಿ ಮೋದಿ ಶುಭಕೋರಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಯೋಜನೆಗಳಲ್ಲಿ ರೈತರು, ಉದ್ಯೋಗ, ಮಹಿಳೆಯರ ಸುರಕ್ಷತೆ ಆದ್ಯತೆ ನೀಡಲಾಗುವುದು. ರೈತರ ಸಾಲಮನ್ನಾ, ಬೆಳೆ ವಿಮೆ ಭರವಸೆ, ಮರಾಠಿಗರಿಗೆ ಶೇ. 80 ಉದ್ಯೋಗ ಮೀಸಲು ಹಾಗೂ ಆರ್ಥಿಕವಾಗಿ ಹಿಂದುಳಿದ ಹೆಣ್ಮಕ್ಕಳಿಗೆ ಉಚಿತ ಶಿಕ್ಷಣ ಭರವಸೆಯನ್ನು ಉದ್ಧವ್ ಠಾಕ್ರೆ ನೀಡಿದ್ದಾರೆ.

 

 

 

 

 

Share This Article
Leave a Comment

Leave a Reply

Your email address will not be published. Required fields are marked *