ಕ್ರೀಡೆಗೆ ಸೌದಿ ಕೋಟಿ ಕೋಟಿ ಹೂಡಿಕೆ ಮಾಡುತ್ತಿರುವುದು ಯಾಕೆ?

By
8 Min Read

ಫ್ರಾನ್ಸ್‌ ಖ್ಯಾತ ಫುಟ್‌ಬಾಲ್‌ ಆಟಗಾರ ಕಿಲಿಯಾನ್‌ ಎಂಬಾಪೆಗೆ (Kylian Mbappe) ಇತ್ತೀಚೆಗೆ ಸೌದಿ ಅರೇಬಿಯಾದ (Saudi Arabia) ಫುಟ್‌ಬಾಲ್‌ ಕ್ಲಬ್‌ ಒಂದು 332 ಮಿಲಿಯನ್‌ ಡಾಲರ್‌ ಅಂದರೆ ಅಂದಾಜು 2,720 ಕೋಟಿ ರೂ. ಸಂಭಾವನೆ ನೀಡಲು ಮುಂದಾಗಿತ್ತು. ಇಷ್ಟೊಂದು ಮೊತ್ತ ಮೂರು, ನಾಲ್ಕು ವರ್ಷಕ್ಕೆ ಅಲ್ಲ. ಕೇವಲ ಒಂದು ಸೀಸನ್‌ಗೆ ಮಾತ್ರ. ಈ ದಾಖಲೆಯ ಡೀಲ್‌ ವಿಷಯ ವಿಶ್ವಾದ್ಯಂತ ಸುದ್ದಿಯಾಯಿತು. ಆದರೆ ಎಂಬಾಪೆ ಇಲ್ಲಿಯವರೆಗೆ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಮುಂದೆ ಸಹಿ ಹಾಕುತ್ತಾರೋ ಗೊತ್ತಿಲ್ಲ. ಡೀಲ್‌ಗಿಂತಲೂ ಮುಖ್ಯವಾಗಿ ಸೌದಿ ಇಷ್ಟೊಂದು ಹಣವನ್ನು ಎಂಬಾಪೆಗೆ ನೀಡಲು ಮುಂದಾಗಿದ್ದು ಯಾಕೆ ಎಂದು ಓದುಗರಾದ ನೀವು ಕೇಳಬಹುದು. ಈ ಪ್ರಶ್ನೆಗೆ ಉತ್ತರ ಸೇರಿದಂತೆ ಕ್ರೀಡೆಗೆ ಇಷ್ಟೊಂದು ಹಣವನ್ನು ಸೌದಿ ಹೂಡಿಕೆ ಮಾಡುತ್ತಿರುವುದು ಯಾಕೆ? ಯಾವ ರೀತಿ ಹೂಡಿಕೆ ಮಾಡುತ್ತಿದೆ? ಹೂಡಿಕೆ ಮಾಡಿದ್ದರಿಂದ ಸೌದಿಗೆ ಏನು ಲಾಭವಾಗಿದೆ? ಮತ್ತು ಭಾರತಕ್ಕೆ ಏನು ಸಂದೇಶ ಈ ವಿಷಯಗಳ ಬಗ್ಗೆ ಕಿರು ವಿವರ ಇಲ್ಲಿದೆ.

ಸೌದಿ ಶ್ರೀಮಂತ ದೇಶವಾಗಿದ್ದು ಹೇಗೆ?
ಕಚ್ಚಾ ತೈಲ ಉತ್ಪಾದನೆಯೇ ಸೌದಿಯ ಆರ್ಥಿಕ ಶಕ್ತಿ. ವಿಶ್ವದಲ್ಲೇ ಅತಿ ಹೆಚ್ಚು ತೈಲ (Crude Oil) ಉತ್ಪಾದನೆ ಮಾಡುವ ದೇಶಗಳ ಪೈಕಿ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ವಿಶ್ವದ ತೈಲ ನಿಕ್ಷೇಪಗಳು ಪೈಕಿ ವೆನೆಜುವೆಲಾ ಮೊದಲ ಸ್ಥಾನದಲ್ಲಿ ಇದ್ದರೆ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ಒಪೆಕ್‌ ರಾಷ್ಟ್ರಗಳು ಅಂದರೆ ತೈಲ ಉತ್ಪಾದನೆ ಮಾಡುವ ದೇಶಗಳ ಪೈಕಿ ಸೌದಿಯೇ ಲೀಡರ್‌. ಯಾಕೆಂದರೆ ಸೌದಿ ಅತಿ ಹೆಚ್ಚು ಪ್ರಮಾಣದಲ್ಲಿ ತೈಲ ಉತ್ಪಾದನೆ ಮಾಡುತ್ತಿದೆ. ಸೌದಿ ಅರೇಬಿಯಾದ ಒಟ್ಟು ಆಂತರಿಕ ಉತ್ಪನ್ನ ಅಂದರೆ ಜಿಡಿಪಿಯಲ್ಲಿ ಕಚ್ಚಾ ತೈಲದ ಪಾಲು 39%.

ತೈಲದ ಆದಾಯದಿಂದ ಶ್ರೀಮಂತ ದೇಶವಾಗಿ ಹೊರಹೊಮ್ಮಿದರೂ ಸೌದಿ ಅರೇಬಿಯಾ ಈಗ ಸಂಕಷ್ಟದಲ್ಲಿ ಸಿಲುಕಿದೆ. ಸಂಕಷ್ಟಕ್ಕೆ ಸಿಲುಕಲು ಮುಖ್ಯ ಕಾರಣ ಯಾವುದು ಎಂದರೆ ಅದು ತೈಲ ಬೆಲೆ. ಒಪೆಕ್‌ ರಾಷ್ಟ್ರಗಳು ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆಯನ್ನು 80-90 ಡಾಲರ್‌ ಬೆಲೆಯಲ್ಲೇ ಸ್ಥಿರವಾಗಿಸಲು ಪ್ರಯತ್ನಿಸುತ್ತಿವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ಹಿಂದೆ 2008ರಲ್ಲಿ ಆರ್ಥಿಕ ಹಿಂಜರಿತವಾದಾಗ ತೈಲ ಬೆಲೆ ಭಾರೀ ಏರಿಕೆಯಾಗಿತ್ತು. ಕೋವಿಡ್‌ ಸಮಯದಲ್ಲಿ ಭಾರೀ ಇಳಿಕೆಯಾಗಿತ್ತು. ನಂತರ ರಷ್ಯಾ ಉಕ್ರೇನ್‌ (Russia-Ukraine) ಯುದ್ಧದ ಸಮಯದಲ್ಲಿ ತೈಲ ಬೆಲೆ ಭಾರೀ ಏರಿಕೆಯಾಗಿತ್ತು. ಆದರೆ ಈಗ ತೈಲ ಬೆಲೆ ಕಡಿಮೆ ಆಗುತ್ತಿದೆ. ತೈಲ ಬೆಲೆ ಕಡಿಮೆಯಾದರೆ ತೈಲ ಆಮದು ಮಾಡುವ ಭಾರತಕ್ಕೆ ಲಾಭ. ಆದರೆ ಸೌದಿಗೆ ಸಮಸ್ಯೆ ಆಗುತ್ತದೆ. ಯಾಕೆಂದರೆ ಅವರ ಜಿಡಿಪಿಯಲ್ಲಿ ತೈಲದ ಪಾಲು 39%. ತೈಲದ ಪಾಲು 39% ಇದ್ದರೂ ಇದು ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಕಡಿಮೆ ಆಗುತ್ತಿದೆ. ಎಷ್ಟು ಕಡಿಮೆ ಆಗುತ್ತಿದೆ ಎಂದರೆ 2011 ರಲ್ಲಿ ಇದು 45.2% ಇದ್ದರೆ 2016ರಲ್ಲಿ ಇದು 43.7% ಇಳಿಕೆಯಾಗಿತ್ತು. 2021 ರಲ್ಲಿ ಇದು 38.8%ಗೆ ಇಳಿಕೆಯಾಗಿದೆ.

ತೈಲದ ಬೇಡಿಕೆ ಕಡಿಮೆ ಯಾಕೆ ಆಗುತ್ತಿದೆ ಎನ್ನುವುದಕ್ಕೂ ಕಾರಣವಿದೆ. ವಿಶ್ವದ ಹಲವು ದೇಶಗಳು ಈಗ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ಹಾಕಿಕೊಂಡಿದೆ. ಜರ್ಮನಿ 2045, ದಕ್ಷಿಣ ಕೊರಿಯಾ 2050, ಅಮೆರಿಕ 2050, ಚೀನಾ 2060, ಮುಖ್ಯವಾಗಿ ಭಾರತ 2070ಕ್ಕೆ ಗುರಿಯನ್ನು ಹಾಕಿಕೊಂಡಿದೆ. ವಿಶ್ವದಲ್ಲೇ ಅತಿ ಹೆಚ್ಚು ತೈಲ ಆಮದು ಮಾಡುವ ದೇಶಗಳಾದ ಭಾರತ, ಚೀನಾ, ಅಮೆರಿಕ ಈಗಾಗಲೇ ಈ ಗುರಿಯನ್ನು ತಲುಪಲು ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡುವ ಮೂಲಕ ಕೆಲಸ ಆರಂಭಿಸಿದೆ. ಇದು ತೈಲ ಉತ್ಪಾದನೆ ಮಾಡುವ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಈಗ ಸೌದಿ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.

ಇಲ್ಲಿಯವರೆಗೆ ಎಷ್ಟು ಹೂಡಿಕೆ ಮಾಡಿದೆ?
ಕಚ್ಚಾ ತೈಲವನ್ನು ನಂಬಿದರೆ ಭವಿಷ್ಯದಲ್ಲಿ ನಮಗೆ ಭವಿಷ್ಯವಿಲ್ಲ ಎಂಬುದನ್ನು ಈಗಲೇ ಅರಿತ ಸೌದಿ ಕ್ರೀಡೆಗೆ ಈಗ ಭಾರೀ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದೆ. ಮೊದಲಿನಿಂದಲೂ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದ ಸೌದಿ ಈಗ ಯಾರು ನಿರೀಕ್ಷೆ ಮಾಡದ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಅರಲ್ಲೂ 2018 ರಿಂದ ಬಹಳ ಆಕ್ರಮಣಕಾರಿಯಾಗಿ ಹೂಡಿಕೆ ಮಾಡಲು ಆರಂಭಿಸಿದೆ.

ಏಪ್ರಿಲ್‌ 2018 : ಸೌದಿ ಕ್ರೀಡಾ ಸಚಿವಾಲಯ ವರ್ಲ್ಡ್‌ ರೆಸ್ಲಿಂಗ್ ಎಂಟರ್‌ಟೈನ್ಮೆಂಟ್‌ (WWE) ಜೊತೆ ಸಹಿ ಹಾಕಿ ಟೂರ್ನಿಯನ್ನು ಸೌದಿಯಲ್ಲಿ ನಡೆಸಲು ಸಹಿ ಹಾಕಿತು. 10 ವರ್ಷಗಳ ಒಪ್ಪಂದ ಇದಾಗಿದ್ದು ಪ್ರತಿ ವರ್ಷ ಸೌದಿ 100 ಮಿಲಿಯನ್‌ ಡಾಲರ್‌ ಹಣವನ್ನು ಪಾವತಿ ಮಾಡಲಿದೆ.   ಇದನ್ನೂ ಓದಿ: ನೀಲಿ ಬಣ್ಣದ ಜೀನ್ಸ್‌ ಬ್ಯಾನ್‌, ಆತ್ಮಹತ್ಯೆಗೈದ್ರೆ ಕುಟುಂಬಕ್ಕೆ ಶಿಕ್ಷೆ – ಉತ್ತರ ಕೊರಿಯಾದಲ್ಲಿದೆ ವಿಚಿತ್ರ ಕಾನೂನುಗಳು

ಫೆಬ್ರವರಿ 2020: ಮೊದಲ ಬಾರಿಗೆ ರಿಯಾದ್‌ನಲ್ಲಿ ಸೌದಿ ಕಪ್‌ ಹೆಸರಿನಲ್ಲಿ ಕುದುರೆ ರೇಸ್ ಆರಂಭವಾಗಿದೆ. ವಿಜೇತರಿಗೆ ಸಿಗುವ ಬಹುಮಾನದ ಮೊತ್ತ ಬರೋಬ್ಬರಿ 20 ಮಿಲಿಯನ್‌ ಡಾಲರ್‌. ಇದು ಸಾರ್ವಕಾಲಿಕ ದಾಖಲೆಯ ಬಹುಮಾನ. ಅತಿ ಹೆಚ್ಚು ಸಂಭಾವನೆ ಪಡೆಯುವ ಕುದುರೆ ರೇಸ್ ಇದಾಗಿದೆ.

ಜನವರಿ 2021 : ಪ್ರವಾಸೋದ್ಯಮವೇ ಸೌದಿಯ ಮುಖ್ಯ ಆದಾಯಗಳಲ್ಲಿ ಒಂದು. ಈ ಕಾರಣಕ್ಕೆ 3 ವರ್ಷಗಳ ಕಾಲ ಸೌದಿ ಪ್ರವಾಸೋದ್ಯಮವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಲು ಅರ್ಜೆಂಟೀನಾದ ಖ್ಯಾತ ಫುಟ್‌ಬಾಲ್‌ ಆಟಗಾರ ಲಿಯೋನಲ್‌ ಮೆಸ್ಸಿ ಜೊತೆ 25 ಮಿಲಿಯನ್‌ ಡಾಲರ್‌ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಅಕ್ಟೋಬರ್‌ 2021 :  ಸೌದಿ ಅರೇಬಿಯಾದ ಪಬ್ಲಿಕ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ 400 ಮಿಲಿಯನ್‌ ಡಾಲರ್‌ಗೆ ಇಂಗ್ಲೆಂಡಿನ ಪ್ರಸಿದ್ಧ ನ್ಯೂ ಕಾಸಲ್‌ ಯುನೈಟೆಡ್‌ ಫುಟ್‌ಬಾಲ್‌ ತಂಡವನ್ನು ಖರೀದಿಸಿದೆ.

ಡಿಸೆಂಬರ್‌ 2021: ಸೌದಿ ಅರೇಬಿಯಾದ ಮೊದಲ ಫಾರ್ಮುಲಾ 1 ಕಾರ್‌ ರೇಸ್‌ ಜೆಡ್ಡಾದಲ್ಲಿ ನಡೆಯಿತು. ಸೌದಿ ಅರೇಬಿಯಾದ ರಾಷ್ಟ್ರೀಯ ತೈಲ ಕಂಪನಿ ಸೌದಿ ಅರಾಮ್ಕೋ ಇದರ ಮುಖ್ಯ ಪ್ರಾಯೋಜಕತ್ವ ವಹಿಸಿತ್ತು. ಈಗ ಇದು ಸೌದಿ ಗ್ರಾಂಡ್‌ ಪ್ರಿಕ್ಸ್‌ ಎಂದೇ ಪ್ರಸಿದ್ಧಿ ಪಡಿದಿದೆ.

ಜುಲೈ 2022: ಫಾರ್ಮುಲಾ 1 ಆಯೋಜನೆ ಮಾಡುತ್ತಿರುವ ಸೌದಿ ಒಂದು ಫ್ರಾಂಚೈಸಿಯನ್ನೇ ಖರೀದಿಸಿದೆ. ಫಾರ್ಮುಲಾ 1 ಫ್ರಾಂಚೈಸಿಯಾಗಿರುವ ಆಸ್ಟನ್ ಮಾರ್ಟಿನ್ ನಿಂದ 17% ಪಾಲನ್ನು ಸೌದಿಯ ಪಬ್ಲಿಕ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ ಖರೀದಿಸಿದೆ.

ಡಿಸೆಂಬರ್‌ 2022: ಜಾಗತಿಕ ಫುಟ್‌ಬಾಲ್‌ ಸೂಪರ್‌ಸ್ಟಾರ್‌, ಪೋರ್ಚುಗಲ್‌ನ ಕ್ರಿಸ್ಟಿಯನ್‌ ರೊನಾಲ್ಡೋ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದು ಸೌದಿಯ ಅಲ್-ನಾಸ್ರ್ ತಂಡವನ್ನು ಸೇರಿದ್ದಾರೆ. ಈ ಡೀಲ್‌ ಎಷ್ಟು ಗೊತ್ತೆ ಬರೋಬ್ಬರಿ 600 ಮಿಲಿಯನ್‌ ಡಾಲರ್‌. ರೂಪಾಯಿಯಲ್ಲಿ ಹೇಳುವುದಾದರೆ ಅಂದಾಜು 1,800 ಕೋಟಿ ರೂ. ಇದು ಕ್ರೀಡಾ ಇತಿಹಾಸದಲ್ಲಿ ದಾಖಲೆ ಬರೆದಿದ್ದು ಅತಿ ದೊಡ್ಡ ಡೀಲ್‌ ಎನಿಸಿಕೊಂಡಿದೆ. ಇದನ್ನೂ ಓದಿ: ಭೂಮಿಗೆ ಅಪ್ಪಳಿಸಿದ ‘ಫೈರ್‌ಬಾಲ್‌’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?

ಜೂನ್‌ 2023: ಅರ್ಜೆಂಟೀನಾ ಖ್ಯಾತ ಫುಟ್‌ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿಗೆ ಬರೋಬ್ಬರಿ 4,100 ಕೋಟಿ ರೂ. ನೀಡಲು ಸೌದಿಯ ಆಲ್‌-ಹಿಲಾಲ್‌ ಮುಂದೆ ಬಂದಿತ್ತು. ಆದರೆ ಮೆಸ್ಸಿಯೂ ಈ ಆಫರ್‌ ತಿರಸ್ಕರಿಸಿದ್ದರು.

ಏಪ್ರಿಲ್‌, 2023: WWE, ಕುದುರೆ ರೇಸ್‌, ಫಾರ್ಮುಲಾ 1, ಫುಟ್‌ಬಾಲ್‌ ಮೇಲೆ ಕೋಟಿಗಟ್ಟಲೇ ಹಣವನ್ನು ಸುರಿದಿರುವ ಸೌದಿ ಕ್ರಿಕೆಟ್‌ ಮೇಲೂ ಕಣ್ಣು ಹಾಕಿತ್ತು. ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಆರಂಭಿಸಲು ಮುಂದಾಗಿತ್ತು. ಈ ಸಂಬಂಧ ಭಾರತದ ಬಿಸಿಸಿಐ ಜೊತೆಯೂ ಮಾತುಕತೆ ನಡೆಸಿತ್ತು. ಭಾರತ ಮತ್ತು ಪಾಕಿಸ್ತಾನ ಆಟಗಾರರನ್ನು ಸೇರಿಸಿ ಲೀಗ್‌ ಮಾಡಿದರೆ ಸೂಪರ್‌ ಹಿಟ್‌ ಆಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿತ್ತು. ಆದರೆ ಬಿಸಿಸಿಐ ಭಾರತದ ಆಟಗಾರರನ್ನು ಈ ಲೀಗ್‌ಗೆ ಕಳುಹಿಸಲು ಅನುಮತಿ ನೀಡಲಿಲ್ಲ. ಈ ಕಾರಣಕ್ಕೆ ಸದ್ಯ ಸೌದಿಯ ಈ ಒಂದು ಕನಸು ಈಗಲೂ ಕನಸಾಗಿಯೇ ಉಳಿದಿದೆ.

ಕ್ರೀಡೆಯ ಮೇಲೆ ಹೂಡಿಕೆ ಹೇಗೆ?
ಸೌದಿಯ ಕ್ಲಬ್‌ಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಭಾರತದಲ್ಲಿ ನಡೆಯುವ ಐಪಿಎಲ್‌ ಬಗ್ಗೆ ತಿಳಿದುಕೊಳ್ಳೋಣ. ಐಪಿಎಲ್‌ ಫ್ರಾಂಚೈಸಿಯಲ್ಲಿ ಸರ್ಕಾರದ ಪಾಲು ಇರುವುದಿಲ್ಲ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ ಇಂಡಿಯನ್ಸ್‌ , ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿದಂತೆ ಎಲ್ಲಾ ತಂಡಗಳ ಮಾಲೀಕತ್ವ ಇರುವುದು ಖಾಸಗಿ ವ್ಯಕ್ತಿಗಳ ಕೈಗಳಲ್ಲಿ. ಆದರೆ ಸೌದಿಯಲ್ಲಿ ಹೀಗಿಲ್ಲ. ಉದಾಹರಣೆಗೆ ಎಂಬಾಪೆಗೆ 2,720 ಕೋಟಿ ರೂ ಡೀಲ್‌ಗೆ ಮುಂದಾಗಿದ್ದ ಅಲ್‌-ಹಿಲಾಲ್‌ ಕ್ಲಬ್‌ನಲ್ಲಿ ಪಬ್ಲಿಕ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ 75% ಷೇರನ್ನು ಹೊಂದಿದರೆ ಉಳಿದವರ ಪಾಲು 25% ಅಷ್ಟೇ.  ಇದನ್ನೂ ಓದಿ: 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?

ಈ ಫಂಡ್‌ ಅನ್ನು ಸ್ಥಾಪಿಸಿದವರು ಯಾರು ಅಂದರೆ ಸೌದಿಯ ಹಿಂದಿನ ರಾಜ ಫೈಸಲ್ ಬಿನ್ ಅಬ್ದುಲ್‌ ಅಜೀಜ್ ಅಲ್ ಸೌದ್. ಸೌದಿ ಅರೇಬಿಯಾ ಸರ್ಕಾರದ ಪರವಾಗಿ ಹಣವನ್ನು ಹೂಡಿಕೆ ಮಾಡುವ ಉದ್ದೇಶದಿಂದ 1971ರಲ್ಲಿ ಈ ಫಂಡ್‌ ಸ್ಥಾಪಿಸಲಾಗಿದೆ. ರಾಷ್ಟ್ರದ ಆರ್ಥಿಕತೆಗೆ ಪೂರಕವಾಗುವ ಯೋಜನೆಗಳಿಗೆ ಹಣಕಾಸಿನ ಬೆಂಬಲವನ್ನು ಈ ನಿಧಿ ಒದಗಿಸುತ್ತದೆ. ಸದ್ಯ ಒಟ್ಟು 700 ಶತಕೋಟಿ ಡಾಲರ್ ಅಂದಾಜು ಆಸ್ತಿಯನ್ನು ಹೊಂದುವ ಮೂಲಕ ವಿಶ್ವದ ಅತಿದೊಡ್ಡ ಸಾರ್ವಭೌಮ ಸಂಪತ್ತಿನ ನಿಧಿಗಳಲ್ಲಿ ಇದು ಒಂದಾಗಿದೆ. ಈಗ ನಿಧಿಯ ಸಂಪೂರ್ಣ ನಿಯಂತ್ರಣವನ್ನು ಸೌದಿ ರಾಜಮೊಹಮ್ಮದ್ ಬಿನ್ ಸಲ್ಮಾನ್ ಹೊಂದಿದ್ದಾರೆ.

ಸೌದಿಗೆ ಏನು ಲಾಭ?
ಎಲ್ಲರಿಗೂ ಸರ್ಕಾರಿ ಕೆಲಸ ನೀಡುವುದು ಸರ್ಕಾರದ ಕೆಲಸವಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶ ನೀಡುವುದು ಸರ್ಕಾರದ ಕೆಲಸ. ಈ ಕಾರಣಕ್ಕೆ ತೈಲವನ್ನು ಹೊರತು ಪಡಿಸಿ ದೇಶದ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಸರ್ಕಾರ ವಿಷನ್‌ 2030 ರೂಪಿಸಿದ್ದು ಇದರ ಭಾಗವಾಗಿ ಸೌದಿ ಕ್ರೀಡೆಯ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿದೆ. ಇದರಿಂದಾಗಿ ದೇಶದಲ್ಲಿ ಉದ್ಯೋಗ, ಪ್ರವಾಸೋದ್ಯಮವನ್ನು ಉತ್ತೇಜನ ಸಿಗುತ್ತದೆ. ಸೌದಿ ಅರೇಬಿಯಾದ ಒಟ್ಟು ಆಂತರಿಕ ಉತ್ಪನ್ನಕ್ಕೆ (GDP) ಕ್ರೀಡೆಗಳ ಕೊಡುಗೆಯು 2016 ಮತ್ತು 2019 ರ ನಡುವೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

ವರ್ಷಪೂರ್ತಿ ಒಂದೊಂದು ದೊಡ್ಡ ಕ್ರೀಡಾಕೂಟವನ್ನು ಆಯೋಜನೆ ಮಾಡಿದರೆ ಲಕ್ಷಾಂತರ ಮಂದಿ ವಿದೇಶಿ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಕೇವಲ ಒಂದು ದಿನಕ್ಕೆ ಮಾತ್ರ ವಿದೇಶಿಗರು ಬರುವುದಿಲ್ಲ. ಪ್ರವಾಸ ಮಾಡಲೆಂದೇ ಬರುತ್ತಾರೆ. ಇದರಿಂದಾಗಿ ವಿಮಾನ ಕ್ಷೇತ್ರಕ್ಕೆ ಮಾತ್ರವಲ್ಲದೇ ಟೂರಿಸಂ ಅಭಿವೃದ್ಧಿಯಾಗುತ್ತದೆ. ಹೋಟೆಲ್‌, ಟ್ಯಾಕ್ಸಿ, ಹೀಗೆ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುತ್ತದೆ. ಹಣದ ವ್ಯವಹಾರ ಹೆಚ್ಚಾದರೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಆದಾಯ ಬರುತ್ತದೆ.

 

ಭಾರತಕ್ಕೆ ಏನು ಸಂದೇಶ?
ಸೌದಿಯಂತೆ ಭಾರತವೂ ಕ್ರೀಡೆಯ ಮೇಲೆ ಹೂಡಿಕೆ ಮಾಡಬಹುದು. ಸದ್ಯ ಕ್ರಿಕೆಟ್‌ ಒಂದೇ ಭಾರತದಲ್ಲಿ ಫೇಮಸ್‌ ಆಗಿದೆ. ಆದರೆ ಕ್ರಿಕೆಟಿನಷ್ಟೇ ಫುಟ್‌ಬಾಲ್‌ ಮತ್ತು ಇತರ ಕ್ರೀಡೆಗಳಿಗೆ ಅಭಿಮಾನಿಗಳು ಇದ್ದಾರೆ. ಇತರ ಕ್ರೀಡೆಗಳಿಗೆ ಪ್ರೋತ್ಸಾಹದ ಕೊರತೆ ಕಾಣುತ್ತಿದೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಇತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ವಿದೇಶಿ ಆಟಗಾರರು ಭಾರತಕ್ಕೆ ಬರಬಹುದು. ಹೇಗೆ ಸೌದಿ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುವ ಟೂರಿಸಂ ಅಭಿವೃದ್ಧಿ ಮಾಡುತ್ತದೋ ಅದೇ ರೀತಿ ಭಾರತದಲ್ಲೂ ರಾಜ್ಯಗಳು ಉತ್ತೇಜನ ನೀಡಿದರೆ ವಿದೇಶಿ ಪ್ರವಾಸಿಗರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಯುರೋಪ್‌ ದೇಶಗಗಳು ಬಿಡಿ ನಮ್ಮ ಸಮೀಪದ ಶ್ರೀಲಂಕಾ, ಥಾಯ್ಲೆಂಡ್‌ಗೆ ಪ್ರವಾಸೋದ್ಯಮವೇ ಅವರ ಆದಾಯದ ಮೂಲ. ಕ್ರೀಡೆಯ ಜೊತೆ ಪ್ರವಾಸಿ ಸ್ಥಳಗಳನ್ನು ನಾವು ಅಭಿವೃದ್ಧೀ ಮಾಡಿದರೆ ಹೋಟೆಲ್‌, ಟ್ಯಾಕ್ಸಿ, ಮೆಟ್ರೋ, ಅಂಗಡಿಗಳಿಗೆ ಆದಾಯ ಬರುತ್ತದೆ. ಜನರಿಗೆ ಉದ್ಯೋಗ ಸಿಗುತ್ತದೆ. ಎಲ್ಲದರ ಪರಿಣಾಮ ಸರ್ಕಾರದ ಬೊಕ್ಕಸ ತುಂಬುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಷನ್‌ ಪ್ಲ್ಯಾನ್‌ ಮಾಡಿ ಕೆಲಸ ಮಾಡಬೇಕಿದೆ.

– ಅಶ್ವಥ್‌ ಸಂಪಾಜೆ‌


 

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್