ಆಶ್ಲೇಷ ಬಲಿ ಯಾಕೆ ಮಾಡುತ್ತಾರೆ? ಸುಬ್ರಹ್ಮಣ್ಯನಿಗೂ ನಾಗನಿಗೂ ಏನು ಸಂಬಂಧ?

Public TV
2 Min Read

ಹಿಂದೂ ಧರ್ಮದಲ್ಲಿ ದೇವರಂತೆ ನಾಗದೇವರನ್ನೂ ಪೂಜಿಸಲಾಗುತ್ತದೆ. ಜಾತಕದಲ್ಲಿ ನಾಗದೋಷ, ಕುಟುಂಬದಲ್ಲಿ ಸಮಸ್ಯೆ, ನಾಗರ ಹಾವನ್ನು ಹತ್ಯೆ.. ಇತ್ಯಾದಿ ಕಾರಣಕ್ಕೆ ಆಶ್ಲೇಷ ಬಲಿ ಸೇವೆಯನ್ನು ಭಕ್ತರು ಮಾಡುತ್ತಾರೆ. ಸಾಧಾರಣವಾಗಿ ಕುಕ್ಕೆ ಸುಬ್ರಹ್ಮಣ್ಯ (Kukke Subramanya) ಕ್ಷೇತ್ರದಲ್ಲಿ ಹೆಚ್ಚಾಗಿ ಆಶ್ಲೇಷ ಬಲಿ (Ashlesha Bali ಸೇವೆಯನ್ನು ಮಾಡುತ್ತಾರೆ. ಒಂದು ವೇಳೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲು ಸಾಧ್ಯವಾಗದೇ ಇದ್ದವರು ಸಮೀಪದ ಸುಬ್ರಹ್ಮಣ್ಯ ದೇವಸ್ಥಾನ ಅಥವಾ ನಾಗನ ಕಟ್ಟೆಗಳಲ್ಲೂ ಆಶ್ಲೇಷ ಬಲಿ ಸೇವೆ ಮಾಡುತ್ತಾರೆ. 

 

ಸುಬ್ರಹ್ಮಣ್ಯನಿಗೂ ನಾಗನಿಗೂ ಏನು ಸಂಬಂಧ?
ಸುಬ್ರಹ್ಮಣ್ಯನಿಗೂ ನಾಗನಿಗೂ ಏನು ಸಂಬಂಧ ಎಂದು ತಿಳಿಯಬೇಕಾದರೆ ಪುರಾಣ ಕಥೆಗೆ ಹೋಗಬೇಕಾಗುತ್ತದೆ. ಕದ್ರು ಮತ್ತು ವಿನತೆ ಇಬ್ಬರೂ ಕಶ್ಯಪ ಮಹರ್ಷಿಗಳ ಪತ್ನಿಯರು. ಅವರು ಮಕ್ಕಳನ್ನು ಪಡೆಯಲು ಬಯಸಿದಾಗ, ಕದ್ರು ಸಾವಿರ ನಾಗಗಳಿಗೆ ಜನ್ಮ ನೀಡಿದರೆ, ವಿನತೆ ಇಬ್ಬರು ಮಕ್ಕಳಾದ ಅರುಣ ಮತ್ತು ಗರುಡನಿಗೆ ಜನ್ಮ ನೀಡುತ್ತಾಳೆ.

ಒಂದು ದಿನ ಉಚ್ಚೈಶ್ರವಸ್ ಎಂಬ ಕುದುರೆಯ ಬಾಲದ ಬಣ್ಣದ ಬಗ್ಗೆ ಕದ್ರು ಮತ್ತು ವಿನತೆಯರ ನಡುವೆ ಪಣ ಏರ್ಪಡುತ್ತದೆ. ಕದ್ರು ಬಾಲ ಕಪ್ಪು ಎಂದು ವಾದಿಸಿದರೆ, ವಿನತೆ ಬಾಲ ಬಿಳಿ ಎಂದು ಹೇಳುತ್ತಾಳೆ. ಕದ್ರು ತನ್ನ ನಾಗಪುತ್ರರನ್ನು ಕುದುರೆಯ ಬಾಲಕ್ಕೆ ಅಂಟಿಕೊಂಡು ಕಪ್ಪಾಗಿ ಕಾಣುವಂತೆ ಮಾಡುತ್ತಾಳೆ, ಇದರಿಂದ ವಿನತೆ ಸೋತು ಗುಲಾಮಳಾಗುತ್ತಾಳೆ. ಕದ್ರು ವಿನತೆಯನ್ನು ತನ್ನ ಗುಲಾಮೆಯನ್ನಾಗಿ ನಡೆಸಿಕೊಳ್ಳುತ್ತಾಳೆ. ತಾಯಿಯನ್ನು ಗುಲಾಮೆಯನ್ನಾಗಿ ನಡೆಸಿದ್ದಕ್ಕೆ ಸಿಟ್ಟಾದ ಗರುಡ ನಾಗಪುತ್ರರನ್ನು ತಿನ್ನಲು ಮುಂದಾಗುತ್ತಾನೆ. ಈ ಸಂದರ್ಭದಲ್ಲಿ ಗರುಡನಿಂದ ಪಾರಾಗಲು ನಾಗಗಳು ಸುಬ್ರಹ್ಮಣ್ಯನ ಮೊರೆ ಹೋಗುತ್ತವೆ. ಸುಬ್ರಹ್ಮಣ್ಯ ನಾಗಗಳನ್ನು ರಕ್ಷಿಸುತ್ತಾನೆ. ಇದನ್ನೂ ಓದಿ: ನಾಗರ ಪಂಚಮಿಯಂದು ಹೀಗೆ ಮಾಡಿ – ಕಾಳ ಸರ್ಪದೋಷಕ್ಕೆ ಸಿಗುತ್ತೆ ಪರಿಹಾರ

kukke subramanya

 

ಸ್ಕಂದ ಪುರಾಣದ ಪ್ರಕಾರ ಒಮ್ಮೆ ಸುಬ್ರಹ್ಮಣ್ಯ ಬ್ರಹ್ಮನ ಮುಂದೆ ನಿನಗಿಂತ ನನಗೆ ಹೆಚ್ಚು ಜ್ಞಾನವಿದೆ ಎಂದು ಹೇಳಿ ಅಪಹಾಸ್ಯ ಮಾಡಿದ್ದ. ಈ ವಿಚಾರ ತಂದೆಯಾದ ಶಿವನಿಗೆ ತಿಳಿಯುತ್ತದೆ. ಸುಬ್ರಹ್ಮಣ್ಯನನ್ನು ಕರೆದು, ಸೃಷ್ಟಿಕರ್ತನನ್ನು ಅವಮಾನ ಮಾಡಿದ್ದಕ್ಕೆ ನಿನಗೆ ನೀನೇ ಶಿಕ್ಷಿ ವಿಧಿಸಬೇಕೆಂದು ಸೂಚಿಸುತ್ತಾನೆ. ತಂದೆಯ ಮಾತಿನಂತೆ ಸುಬ್ರಹ್ಮಣ್ಯ ಸರ್ಪದ ರೂಪವನ್ನು ತಾಳಿ ಹಲವು ವರ್ಷ ಬದುಕಿದ್ದ ಎಂಬ ಕಥೆಯೂ ಇದೆ.

ಆಶ್ಲೇಷ ಬಲಿ ಯಾಕೆ ಮಾಡುತ್ತಾರೆ?
ವ್ಯಕ್ತಿಯ ಜಾತಕದಲ್ಲಿ ಕಾಳಸರ್ಪದೋಷ ಇರುವವರು ಮಾಡುತ್ತಾರೆ. ಹಿಂದೆ ತಿಳಿದೋ ಅಥವಾ ತಿಳಿಯದೆಯೋ ಸರ್ಪಗಳಿಗೆ ಹಾನಿ ಮಾಡಿದ್ದರೆ, ಅಂತಹ ದೋಷಗಳನ್ನು ಪರಿಹರಿಸಲು ಆಶ್ಲೇಷಾ ಪೂಜೆ ಮಾಡಲಾಗುತ್ತದೆ.

ಅಷ್ಟೇ ಅಲ್ಲದೇ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆ, ವಿವಾಹ, ಭೂ, ಜಲ, ಬೆಳೆ ಅಭಿವೃದ್ಧಿಗಾಗಿ ಈ ಸೇವೆಯನ್ನು ಮಾಡಿದರೆ ಶುಭವಾಗುತ್ತದೆ ಎಂಬ ನಂಬಿಕೆಯಿದೆ. ಮನೆಯಲ್ಲಿ ಶಾಂತಿ ನೆಲೆಸಲು, ವಿವಾಹ ಸಮಸ್ಯೆಗಳು ನಿವಾರಣೆಯಾಗಲು ಮತ್ತು ಸಂತಾನ ಭಾಗ್ಯಕ್ಕಾಗಿ ಈ ಪೂಜೆ ಮಾಡಲಾಗುತ್ತದೆ.  ವಿಶೇಷವಾಗಿ ಆಶ್ಲೇಷ ನಕ್ಷತ್ರದಂದು ಈ ಪೂಜೆಯನ್ನು ಮಾಡುವುದರಿಂದ ಸರ್ಪ ದೋಷಗಳು ನಿವಾರಣೆಯಾಗುತ್ತವೆ ಮತ್ತು ಜೀವನದಲ್ಲಿ ಸುಖ-ಸಮೃದ್ಧಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ.

Share This Article