ಹೆಣ್ಣು ಮಕ್ಕಳು ಆಕಾರ ಕಳೆದುಕೊಂಡ ದೇಹ, ಹೊಟ್ಟೆಯ ಬಗ್ಗೆ ಕಾಳಜಿವಹಿಸುವಂತೆಯೇ, ಜೋತುಬಿದ್ದ ಸ್ತನಗಳ ಬಗ್ಗೆಯೂ ಗಮನವಹಿಸುವುದು ಮುಖ್ಯವಾಗುತ್ತದೆ. ಅದರಲ್ಲೂ ಸ್ತನಗಳ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಪರಿಶ್ರಮಪಡಲೇಬೇಕು, ಸೌಂದರ್ಯದ ಬಗ್ಗೆ ಕಾಳಜಿ ಮಾಡಲೇಬೇಕು.
ಏಕೆಂದ್ರೆ ಸ್ತನ (Breast) ಅಂದ್ರೆ ಹೆಣ್ತನ ಅಂತಾರೆ. ಈ ಅಂಗವೇ ಇಲ್ಲ ಅಂದ್ರೆ ಮಹಿಳೆಯ ಮಾನಸಿಕ ಕ್ಷಮತೆ ಕುಗ್ಗದೇ ಇರೋದಿಲ್ಲ. ಸ್ತನ ಕ್ಯಾನ್ಸರ್‌ಗೆ ಬಲಿಯಾದ ಮಹಿಳೆಯರಂತೂ ಸ್ತನವನ್ನೇ ಸರ್ಜರಿ ಮಾಡಿಸಿಕೊಳ್ಳಬೇಕಾದ ಪ್ರಮೇಯವೇ ಬರುತ್ತದೆ. ಇಂತಹ ಸಂದರ್ಭದಲ್ಲಿ ಖಾಲಿ ಖಾಲಿ ಎದೆಯನ್ನು ಹೊತ್ತ ಮಹಿಳೆಗೆ ಹೊರಗೆ ಹೋಗಲು ಮುಜುಗರ, ದೈಹಿಕ ಯಾತನೆ, ಜೊತೆಗೆ ಮಾನಸಿಕ ತುಮುಲ. ಈ ಕೊರತೆ ನಿವಾರಿಸಲು ಕೃತಕ ಸ್ತನ ಅನ್ನೋದು ವರದಾನವಾಗಿದೆ.
ಆದ್ರೆ ಇತ್ತೀಚಿನ ದಿನಗಳಲ್ಲಿ ಆಕಾರ, ಗಾತ್ರ ಕಡಿಮೆ ಇರುವ ಮಹಿಳೆಯರು ಸ್ತನ ಕಸಿ ಮಾಡಿಸಿಕೊಳ್ಳುವುದನ್ನೇ ಒಂದು ಟ್ರೆಂಡ್ ಆಗಿ ಮಾಡಿಕೊಂಡಿದ್ದಾರೆ. ಅಡಿಯಿಂದ ಮುಡಿಯವರೆಗೂ ದೇಹದ ಎಲ್ಲಾ ಭಾಗಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡೇ ಫೇಮಸ್ ಆಗ್ತಿರೋ ಒಂದಿಷ್ಟು ನಟಿಯರು ಇದ್ದಾರೆ. ಅದ್ರಲ್ಲೂ ಬಾಲಿವುಡ್ನಲ್ಲಿ (Bollywood) ಬ್ಯೂಟಿಗಳು ಎಂದುಕರೆಸಿಕೊಳ್ಳುತ್ತಿರುವ ಬಹುತೇಕ ನಟಿಮಣಿಗಳದ್ದೂ ಇದೇ ಸ್ಥಿತಿ. ದೇಹದ ಒಂದಲ್ಲೊಂದು ಭಾಗಗಳಿಗೆ ಇವರು ಕತ್ತರಿ ಹಾಕಿಸಿಕೊಂಡವರೇ.
ನಟಿ ಶ್ರೀದೇವಿಯ ಮೂಗಿನ ಸರ್ಜರಿಯಿಂದ ಹಿಡಿದು ನಟಿ ಶೆರ್ಲಿನ್ ಚೋಪ್ರಾ (Sherlyn Chopra), ರಾಖಿ ಸಾವಂತ್ ರಂಥ ನಟಿಯರು ದೇಹದ ಭಾಗಕ್ಕೇ ಕತ್ತರಿ ಹಾಕಿಸಿಕೊಂಡವರೇ. ಇತ್ತೀಚೆಗೆ ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್, ಎರಡು ತಿಂಗಳ ಒಳಗೆ ನನಗೆ ದೊಡ್ಡ ಸ್ತನಗಳು ಬೇಕು ಅಂತ ಡಾಕ್ಟರ್ ಮುಂದೆ ಸಿಲಿಕಾನ್ ಸ್ತನ ಹಿಡಿದುಕೊಂಡು ಕುಳಿತಿದ್ದ ಪ್ರಸಂಗವೂ ಕಣ್ಣಮುಂದಿದೆ. ಈ ನಡುವೆ ಬಾಲಿವುಡ್ ಬ್ಯೂಟಿಯರಲ್ಲಿ ಒಬ್ಬರಾದ ನಟಿ ಶೆರ್ಲಿನ್ ಚೋಪ್ರಾ ಕಸಿ ಮಾಡಿಸಿದ್ದ ಭಾರೀ ಗಾತ್ರದ ಸಿಲಿಕಾನ್ ಸ್ತನವನ್ನ ದೇಹದಿಂದ ತೆಗೆಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದಕ್ಕೂ ಮುನ್ನ ಸ್ತನ ಕಸಿ ಅಂದ್ರೆ ಏನು? ಯಾಕಾಗಿ ಮಹಿಳೆಯರು ಈ ಚಿಕಿತ್ಸೆಗೆ ಒಳಗಾಗುತ್ತಾರೆ? ಇದರಿಂದ ದೇಹದ ಆರೋಗ್ಯದ ಮೇಲಾಗುವ ಪರಿಣಾಮಗಳೇನು? ಎಂಬುದನ್ನು ತಿಳಿಯೋಣ…
ಸ್ತನ ಕಸಿ ಅಥವಾ ಬ್ರೆಸ್ಟ್ ಇಂಪ್ಲಾಂಟ್ಸ್ ಅಂದ್ರೆ ಏನು?
ಸ್ತನ ಕಸಿ ಅಂದ್ರೆ ಸ್ತನದ ಗಾತ್ರ ಮತ್ತು ಆಕಾರ ಹೆಚ್ಚಿಸೋದಕ್ಕೆ ಸ್ತನದ ಒಳಗೆ ಸಿಲಿಕಾನ್ ಅಥವಾ ಲವಣಯುಕ್ತ ದ್ರವದಿಂದ ತುಂಬಿದ ಕೃತಕ ಕಸಿಯನ್ನು (Breast implants) ಸೇರಿಸುವ ಶಸ್ತ್ರಚಿಕಿತ್ಸೆ. ಸೌಂದರ್ಯವರ್ಧಕ ಉದ್ದೇಶಗಳಿಗಾಗಿ, ಸ್ತನಗಳ ಗಾತ್ರ ಮತ್ತು ಆಕಾರವನ್ನ ಹೆಚ್ಚಿಸಲು ಈ ಶಸ್ತ್ರಚಿಕಿತ್ಸೆಯನ್ನ ಮಾಡಿಸಿಕೊಳ್ಳುತ್ತಾರೆ. ಬಾಲಿವುಡ್ ಸಂಸ್ಕೃತಿಯಲ್ಲಿ ಇದು ಹೆಚ್ಚಾಗಿಯೇ ಇದೆ.
ಸ್ತನ ಕಸಿಯಲ್ಲಿ 2 ವಿಧಾನಗಳನ್ನ ಅನುಸರಿಸಲಾಗುತ್ತದೆ. ಒಂದು ಸಿಲಿಕಾನ್ ಇಂಪ್ಲಾಂಟ್, ಮತ್ತೊಂದು ಸಲೈನ್ (ಉಪ್ಪುನೀರು) ನೀರಿನ ವಸ್ತುಗಳು. ಸಿಲಿಕಾನ್ ಮೃದುವಾಗಿದ್ದರೆ, ಸಲೈನ್ ಗಟ್ಟಿಯಾಗಿರುತ್ತದೆ. ಜೊತೆಗೆ ಸೋರಿಕೆ ಕಂಡುಬಂದ್ರೆ ಹೀರಿಕೊಳ್ಳುತ್ತದೆ. ಆದ್ರೆ ಸಲೈನ್‌ಗಿಂತಲೂ ಸಿಲಿಕಾನ್ ಇಂಪ್ಲಾಂಟ್ಸ್ ಸ್ವಲ್ಪ ಸುರಕ್ಷಿತ ಎಂದು ಹೇಳುತ್ತಾರೆ ವೈದ್ಯರು. ಶೆರ್ಲಿನ್ ಚೋಪ್ರಾ ಮಾಡಿಸಿದ್ದು ಕೂಡ ಸಿಲಿಕಾನ್ ಇಂಪ್ಲ್ಯಾಂಟ್ಸ್.
ಶೆರ್ಲಿನ್ ಕಸಿ ಮಾಡಿಸಿದ್ದ ಸ್ತನ ತೆಗೆಸಲು ಕಾರಣ ಏನು?
ಶೆರ್ಲಿನ್ ಚೋಪ್ರಾ ಕಳೆದ ಕೆಲ ದಿನಗಳಿಂದ ನಿರಂತರ ಬೆನ್ನು ನೋವು, ಎದೆ ನೋವು, ಭುಜದ ನೋವು ಮತ್ತು ಎದೆಯ ಭಾರದ ಸಮಸ್ಯೆಗಳಿಂದ ಬಳಲುತ್ತಿದ್ದರು. ವೈದ್ಯಕೀಯ ತಪಾಸಣೆ ಬಳಿಕ ಇದು ಬ್ರೆಸ್ಟ್ ಇಂಪ್ಲಾಂಟ್ಸ್ ಅಥವಾ ಸ್ತನ ಕಸಿಯಿಂದಾಗಿರುವ ಪರಿಣಾಮ ಎಂಬುದು ಗೊತ್ತಾಯಿತು. ಹೀಗಾಗಿ ಕಸಿ ಮಾಡಿಸಿದ್ದ 825 ಗ್ರಾಂ ಸಿಲಿಕಾನ್ ಸ್ತನದ ಭಾಗವನ್ನ ತೆಗೆಸಿದರು.
ಸಿಲಿಕಾನ್ ಇಂಪ್ಲಾಂಟ್ಸ್ ತೆಗೆಸಿದ ನಂತ್ರ ಮುಂದೇನು?
ಸ್ತನ ಇಂಪ್ಲಾಂಟ್ಸ್ ಶಸ್ತ್ರಚಿಕಿತ್ಸೆಯ ನಂತರ ಮೊದಲ 48 ರಿಂದ 72 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲಿ ಸ್ವಲ್ಪ ಊತ ಹಾಗೂ ನೋವು ಇರುತ್ತದೆ. ಆದ್ದರಿಂದ ಕನಿಷ್ಠ 2 ವಾರಗಳ ಕಾಲ ವಿಶ್ರಾಂತಿಯಲ್ಲಿರಬೇಕು. ಬಳಿಕ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿಕೊಳ್ಳಬಹುದು. ಭಾರ ಎತ್ತುವುದು, ವ್ಯಾಯಾಮ ಅಥವಾ ತೀವ್ರ ಚಟುವಟಿಕೆಗಳಿಗೆ ಕನಿಷ್ಠ 4 ರಿಂದ 6 ವಾರಗಳು ಚೇತರಿಸಿಕೊಳ್ಳಬೇಕು ಅನ್ನೋದು ವೈದ್ಯರ ಅಭಿಪ್ರಾಯ.
ಸ್ತನ ಕಸಿತೆಗೆಸಿದ ಬಳಿಕ ಸಂಭಾವ್ಯ ಅಪಾಯಗಳೇನು?
* ಶಸ್ತ್ರಚಿಕಿತ್ಸೆ ಬಳಿಕ ರಕ್ತಸ್ರಾವ ಹೆಚ್ಚಾಗಬಹುದು. ಅಲ್ಲದೇ ಬ್ಯಾಕ್ಟೀರಿಯಾ, ಸೋಂಕು ಮತ್ತು ಆ ಸಮಯದಲ್ಲಿ ಬಳಸುವ ಅರಿವಳಿಕೆಯಿಂದ ಅಡ್ಡಪರಿಣಾಮ ಬೀರಬಹುದು.
* ಶಸ್ತ್ರಚಿಕಿತ್ಸೆ ಬಳಿಕ ಸೂಕ್ತ ಆರೈಕೆ ಸಿಗದಿದ್ದರೆ ರಕ್ತ ಹೆಪ್ಪುಗಟ್ಟಬಹುದು.
* ಒಂದು ವೇಳೆ ಸ್ತನ ಇಂಪ್ಲಾಂಟ್ ದೇಹದಲ್ಲಿದ್ದಾಗಲೇ ಒಡೆದುಹೋದ್ರೆ, ಅದನ್ನು ಸರಿಪಡಿಸಲು ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ.
* ಸಲೈನ್ ಇಂಪ್ಲಾಂಟ್ಸ್ ಒಡೆದರೆ ತಕ್ಷಣವೇ ಗಾತ್ರ ಕಳೆದುಕೊಳ್ಳುತ್ತವೆ.
* ಸಿಲಿಕಾನ್ ಇಂಪ್ಲಾಂಟ್ಸ್ ಒಡೆದರೆ ಅದನ್ನ MRI ಅಥವಾ ಅಲ್ಟ್ರಾಸೌಂಡ್‌ನಿಂದ ಮಾತ್ರ ಪತ್ತೆಹಚ್ಚಬಹುದು. ಹೀಗಾಗಿ ಸ್ತನ ಇಂಪ್ಲಾಂಟ್ಸ್ ಮಾಡಿಸುವ ಮುನ್ನ ಅಥವಾ ಮಾಡಿಸಿದ್ದರೆ ತೆಗೆಸುವ ಮುನ್ನ ದೇಹದ ಆರೋಗ್ಯ ಅಗತ್ಯತೆಗಳನ್ನ ನೋಡಿಕೊಳ್ಳಬೇಕು ಅನ್ನೋದು ತಜ್ಞರ ಸಲಹೆ.





