ಬೆಂಗಳೂರು: ಗುಜರಾತ್ ಚುನಾವಣಾ ಪ್ರಚಾರಕ್ಕೆ ಕರೆದ ಹೈಕಮಾಂಡ್ ನಾಯಕರಿಗೆ ಸಚಿವ ಡಿ.ಕೆ.ಶಿವಕುಮಾರ್ ಶಾಕ್ ನೀಡಿದ್ದಾರೆ.
ಸೋನಿಯಾಗಾಂಧಿ ಅವರ ರಾಜಕೀಯ ಸಲಹೆಗಾರರಾದ ಅಹ್ಮದ್ ಪಟೇಲ್ ಅವರನ್ನ ರಾಜ್ಯಸಭೆಯಲ್ಲಿ ಗೆಲ್ಲಿಸಿದ ಕೀರ್ತಿ ರಾಜ್ಯದ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರದ್ದು. ಗುಜರಾತ್ ಶಾಸಕರನ್ನು ರಾಜ್ಯಕ್ಕೆ ಕರೆತಂದಿದ್ದ ಸಚಿವ ಡಿ.ಕೆ.ಶಿವಕುಮಾರ್, ಐಟಿ ದಾಳಿಯನ್ನ ಎದುರಿಸಬೇಕಾಯ್ತು. ಎಲ್ಲವನ್ನು ಸಮರ್ಥವಾಗಿ ಎದುರಿಸಿ ಶಾಸಕರನ್ನು ಗುಜರಾತ್ ತಲುಪಿಸಿ ಅಹ್ಮದ್ ಪಟೇಲ್‍ರನ್ನು ರಾಜ್ಯಸಭೆಯ ಮೆಟ್ಟಿಲು ಹತ್ತಿಸಿದ್ರು. ಇದೇ ಜೋಶ್‍ನಲ್ಲಿ ಗುಜರಾತ್ ಚುನಾವಣಾ ಪ್ರಚಾರಕ್ಕೆ ಡಿಕೆಶಿಯನ್ನು ಕರೆದ ಹೈಕಮಾಂಡ್‍ಗೆ ಸಚಿವ ಡಿಕೆಶಿ ಶಾಕ್ ನೀಡಿದ್ದಾರೆ.
ಐ ಆ್ಯಮ್ ಸಾರಿ, ಈಗ ನಾನು ಪ್ರಚಾರಕ್ಕೆ ಬರೋಕೆ ಆಗಲ್ಲ ಎಂದು ನೇರವಾಗಿ ಹೇಳಿದ್ದಾರೆ ಎನ್ನಲಾಗಿದೆ. ಶಾಸಕರನ್ನು ಕರೆತಂದ ನಂತರ ಐಟಿ ದಾಳಿ ನಡೆದು ಇನ್ನೂ ಸಂಕಷ್ಟದಲ್ಲೆ ಇದ್ದಾರೆ ಸಚಿವ ಡಿಕೆಶಿ. ಮೋದಿ-ಶಾ ಜೋಡಿಯನ್ನು ಎದುರು ಹಾಕಿಕೊಂಡು ಗುಜರಾತ್ ಗೆ ಹೋಗಿ ತೊಡೆ ತಟ್ಟಿದ್ರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬಹುದು ಎಂಬ ಆತಂಕ ಡಿಕೆ ಶಿವಕುಮಾರ್ ಅವರದ್ದು ಎಂದು ಹೇಳಲಾಗ್ತಿದೆ.
ಗುಜರಾತ್ ಶಾಸಕರಿಂದ ಪ್ರಚಾರಕ್ಕೆ ಆಹ್ವಾನ ಬಂದರೂ ಗುಜರಾತ್ ಗೆ ಹೋಗಲು ಡಿಕೆಶಿ ಹಿಂದೇಟು ಹಾಕ್ತಿದ್ದಾರೆ. ದೇಶದ ಬೇರೆ ಬೇರೆ ರಾಜ್ಯದ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಡಿಕೆಶಿ ತಮ್ಮದೇ ನೆರವು ಪಡೆದ ಗುಜರಾತ್ ಶಾಸಕರು ಕರೆದರೂ ಪ್ರಚಾರಕ್ಕೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಐಟಿ ದಾಳಿ ನಡೆದ ನಂತರವು ಏನು ಆಗಿಲ್ಲ ಎಂಬಂತೆ ನಡೆದುಕೊಂಡಿದ್ದ ಡಿಕೆಶಿಗೆ ಒಳಗೊಳಗೆ ಮೋದಿ-ಶಾ ಭಯ ಕಾಡುತ್ತಿದೆ. ರಿಸ್ಕ್ ಯಾಕೆ ಅಂತ ಗುಜರಾತ್ ಕಡೆಗೆ ತಲೆ ಹಾಕದೆ ಸೈಲೆಂಟಾಗಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.