ನಾಯಿ ದಾಳಿಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ವೆ. ರಸ್ತೆಯಲ್ಲಿ ಓಡಾಡುವವರ ಮೇಲೆ, ಶಾಲಾ ಮಕ್ಕಳ ಮೇಲೆ ಅದ್ರಲ್ಲೂ ಬೆಳಗ್ಗಿನ ಜಾವ, ಮಟ ಮಟ ಮಧ್ಯಾಹ್ನ, ತಡರಾತ್ರಿಗಳಲ್ಲಿ ಒಬ್ಬಂಟಿಗರು ಸಿಕ್ಕಿಬಿಟ್ರೆ ಕಥೆ ಮುಗಿಯಿತು. ಐದಾರು ನಾಯಿಗಳು (Stray Dogs) ಒಟ್ಟಿಗೆ ಮೈಮೇಲೆ ಎರಗಿಬಿಡುತ್ತವೆ. ಇದಕ್ಕೆ ಗ್ರಾಮೀಣ ಪ್ರದೇಶಗಳೂ ಹೊರತಾಗಿಲ್ಲ. ಬೆಂಗಳೂರಿನ ಮಹಾನಗರಗಳಲ್ಲಂತೂ ಕೇಳಂಗೇ ಇಲ್ಲ. ಇದೆಲ್ಲ ಕ್ವಾಟ್ಲೆಗಳಿಗೆ ಕಡಿವಾಣ ಹಾಕಬೇಕು ಅಂತಾನೇ ಸುಪ್ರೀಂ ಕೋರ್ಟ್ (Supreme Court) ಹೊಸ ನೀತಿಯೊಂದನ್ನ ರೂಪಿಸಿದೆ.
ಹಾವಳಿ ತಡೆಗೆ ನಿರ್ದಿಷ್ಟ ನೀತಿ ರೂಪಿಸಿ ರಾಜಧಾನಿ ದೆಹಲಿ ಮತ್ತು NCR (ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶ) ವಲಯದ ಎಲ್ಲ ಪ್ರದೇಶದಿಂದ ಬೀದಿ ನಾಯಿಗಳನ್ನು ಹಿಡಿದು ಶೆಡ್‌ಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಪ್ರಾಣಿಗಳ ಕ್ರೌರ್ಯ ತಡೆ ಕಾಯ್ದೆ-1960 ಹಾಗೂ ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು-2023 (ABC) ರೀತಿಯ ಕಾನೂನುಗಳು, ಪ್ರಾಣಿಗಳು ಮತ್ತು ಸಾಕು ಪ್ರಾಣಿಗಳನ್ನು ನಾವು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಕಾನೂನು ಮನುಷ್ಯರ ಹಿತರಕ್ಷಣೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಸಾಧಿಸುವುದು ಹೇಗೆ ಎನ್ನುವ ಬಗ್ಗೆಯೂ ತಿಳಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ನ್ಯಾ. ಜೆ.ಬಿ ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಬೀದಿನಾಯಿಗಳ ನಿಯಂತ್ರಣಕ್ಕೆ ಈ ಆದೇಶ ಕೊಟ್ಟಿದೆ.
ಇನ್ನೂ ಕರ್ನಾಟಕದ ಬೆಂಗಳೂರಿನಲ್ಲಿ (Bengaluru) ಬೀದಿ ನಾಯಿಗಳ ಸಂಖ್ಯೆ ಶೇ.10ರಷ್ಟು ತಗ್ಗಿದ್ದರೂ, ಕಡಿತ ಪ್ರಕರಣಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇವೆ. 2023ರ ಗಣತಿ ಪ್ರಕಾರ, ನಗರದಲ್ಲಿ ಶೇ 71.85ರಷ್ಟು ಬೀದಿ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ, ಪ್ರಸಕ್ತ ವರ್ಷ ಜನವರಿಯಿಂದ ಜೂನ್‌ವರೆಗೆ 13,000ಕ್ಕೂ ಹೆಚ್ಚು ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗಿರುವುದು ಆಘಾತಕಾರಿಯಾಗಿದೆ. ಕಳೆದ 60 ವರ್ಷಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಜನನ ನಿಯಂತ್ರಣ ವೈಫಲ್ಯಕ್ಕೆ ಕಾರಣವೇನು? ಎಂಬುದನ್ನ ತಿಳಿಯಬೇಕಿದ್ರೆ ಮುಂದೆ ಓದಿ…
ಸಂತಾನಹರಣ ಚಿಕಿತ್ಸೆ ಕಾರ್ಯಕ್ರಮ ಶುರುವಾಗಿದ್ದು ಹೇಗೆ?
1966ರಲ್ಲಿ ಚೆನ್ನೈನಲ್ಲಿ ಪ್ರಾಣಿಗಳಿಗೆ ಮೊದಲ ಉಚಿತ ಸಂತಾನಹರಣ ಚಿಕಿತ್ಸಾಲಯ ತೆರೆಯಲಾಯಿತು. ಅದಾದ 30 ವರ್ಷಗಳ ನಂತ್ರ ಬ್ಲೂ ಕ್ರಾಸ್ ಎಂಬ ಪ್ರಾಣಿ ಕಲ್ಯಾಣ ದತ್ತಿ ಸಂಸ್ಥೆಯು ಚೆನ್ನೈ ನಗರ ಪಾಲಿಕೆಗೆ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮ ಆರಂಭಿಸುವಂತೆ ಮನವೊಲಿಸಿತು. ಈ ಕಾರ್ಯಕ್ರಮ ಯಶಸ್ವಿಯಾದ ನಂತರ 2001ರಲ್ಲಿ ಇದನ್ನ ರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪಿಸಲಾಯಿತು. ಆದಗ್ಯೂ ಬೀದಿನಾಯಿಗಳ ಸಂಖ್ಯೆ ಬೆಳೆಯುತ್ತಾ ಹೋಯ್ತು.. ಅದರಂತೆ ಕಡಿತದ ಪ್ರಕರಣಗಳು ಹೆಚ್ಚಾಗುತ್ತಲೇ ಹೋಯ್ತು.
ಜನನ ನಿಯಂತ್ರಣ ವಿಫಲವಾಗಿದ್ದೇಕೆ?
WHO ನ ಮಾಜಿ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಹೇಳುವಂತೆ, ಈ ಕಾರ್ಯಕ್ರಮ ಯಾರನ್ನೂ ನಿರ್ದಿಷ್ಟ ಹೊಣೆಗಾರರನ್ನಾಗಿ ಮಾಡೋದಿಲ್ಲ. ಏಕೆಂದರೆ, ಈ ಕೆಲಸಕ್ಕೆ ಪಶುವೈದ್ಯರು, ಮೌಲ ಸೌಕರ್ಯ, ಹಣಕಾಸು ಹಾಗೂ ಮಾನವಶಕ್ತಿಯ ಕೊರತೆಯಿದೆ. ಲಸಿಕೆಗಳ ಸಂಖ್ಯೆ, ಶಸ್ತ್ರಚಿಕಿತ್ಸೆಗಳ ಸಂಖ್ಯೆ. ಅದರ ಪರಿಣಾಮದ ಬಗ್ಗೆ ಯಾವುದೇ ರಾಷ್ಟ್ರೀಯ ದತ್ತಾಂಶಗಳಿಲ್ಲ. ಹಣವನ್ನ ವಿವೇಚನೆಯಿಂದ ಬಳಸಲಾಗಿದೆಯೇ ಎಂಬುದನ್ನ ತೋರಿಸಲು ಫಲಿತಾಂಶ, ಅಧ್ಯಯನಗಳಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಸೆಂಟ್ರಲ್ ಡ್ರಗ್ಸ್ ಕಂಟ್ರೋಲ್ ಲ್ಯಾಬೊರೇಟರಿಯ ಮಾಜಿ ಮುಖ್ಯಸ್ಥ ಸುರಿಂದರ್ ಸಿಂಗ್ ಮಾತನಾಡ್ತಾ, ಈ ಕೆಲಸ ಶುರುವಾದಾಗ ಚೆನ್ನಾಗಿತ್ತು. ಕನಿಷ್ಠ 1 ದಶಕದ ಕಾಲ ಬೀದಿ ನಾಯಿಗಳಿಗೆ ನಿರಂತರ ಸಂತಾನಹರಣ ಚಿಕಿತ್ಸೆ ಮಾಡಿದ್ದಿದ್ದರೆ ಭಾರತವು ರೇಬಿಸ್‌ನಂತಹ ಕಾಯಿಲೆಯನ್ನು ತೊಡೆದುಹಾಕಬಹುದಿತ್ತು. ಆದ್ರೆ ಮೊದಲ 2 ವರ್ಷಗಳ ನಂತ್ರ ಅವುಗಳನ್ನು ಮೂಲ ಸೌಕರ್ಯವನ್ನು ಕೊಳ್ಳಲು ಹಣಕಾಸಿನ ಸಮಸ್ಯೆ ಎದುರಾಯ್ತು. ಆ ಬಳಿಕ ಕೆಲಸದ ವೇಗವು ಕುಂಟಿತಗೊಂಡದ್ದರಿಂದ ಜನನ ನಿಯಂತ್ರಣ ಕ್ರಮವು ವಿಫಲವಾಯ್ತು ಎಂದಿದ್ದಾರೆ.
ದೇಶದಲ್ಲೇ ಅತಿಹೆಚ್ಚು ಬೀದಿ ನಾಯಿಗಳಿರುವ ಟಾಪ್-10 ಜಿಲ್ಲೆಗಳಾವುವು?
ದೇಶದಲ್ಲೇ ಅತಿಹೆಚ್ಚು ನಾಯಿಗಳಿರುವ 10 ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರು ನಗರ ಹಾಗೂ ಮೈಸೂರು ಸ್ಥಾನ ಪಡೆದುಕೊಂಡಿವೆ. ಒಡಿಶಾದ ಕಲಾಹಂಡಿಯಲ್ಲಿ 10.6 ಲಕ್ಷ ನಾಯಿಗಳಿದ್ದರೆ ಮಹಾರಾಷ್ಟ್ರದಲ್ಲಿ 2.1 ಲಕ್ಷ ನಾಯಿಗಳಿವೆ. ಇನ್ನೂ 3ನೇ ಸ್ಥಾನದಲ್ಲಿ ಬೆಂಗಳೂರು ನಗರ ಇದ್ದು, 1.4 ಲಕ್ಷ ಬೀದಿನಾಯಿ ಹೊಂದೆ. ಇನ್ನುಳಿದಂತೆ ಪ.ಬಂಗಾಳದ ಮುರ್ಷಿದಾಬಾದ್ 1.1 ಲಕ್ಷ, ಪಶ್ಚಿಮ ಮಿಡ್ನಾಪುರ್, ಪಶ್ಚಿಮ ಬುರ್ದ್ವಾನ್, ಪೂರ್ವ ಬುರ್ದ್ವಾನ್‌ನಲ್ಲಿ ತಲಾ 1 ಲಕ್ಷ, ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ 90 ಸಾವಿರ, ಪ.ಬಂಗಳದ ಉತ್ತರ 24 ಪರಗಣಗಳಲ್ಲಿ 90 ಸಾವಿರ ಮತ್ತು ಜಮ್ಮುವಿನಲ್ಲಿ 90 ಸಾವಿರ ಬೀದಿ ನಾಯಿಗಳಿವೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲೇ ನಾಯಿ ಕಡಿತ ಕೇಸ್ ಹೆಚ್ಚು
ದೇಶದ ಹಲವು ರಾಜ್ಯಗಳಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. 2024ರಲ್ಲಿ ಮಹಾರಾಷ್ಟ್ರದಲ್ಲಿ 4.85 ಲಕ್ಷ, ತಮಿಳುನಾಡಿನಲ್ಲಿ 4.80 ಲಕ್ಷ, ಗುಜರಾತ್‌ನಲ್ಲಿ 3.92 ಲಕ್ಷ, ಕರ್ನಾಟಕದಲ್ಲಿ 3.61 ಲಕ್ಷ, ಬಿಹಾರದಲ್ಲಿ 2.63 ಲಕ್ಷ, ಆಂಧ್ರಪ್ರದೇಶದಲ್ಲಿ 2.45 ಲಕ್ಷ, ಅಸ್ಸಾಂನಲ್ಲಿ 1.66 ಲಕ್ಷ, ಉತ್ತರ ಪ್ರದೇಶದಲ್ಲಿ 1.64 ಲಕ್ಷ, ರಾಜಸ್ಥಾನದಲ್ಲಿ 1.40 ಲಕ್ಷ, ಬಿಹಾರದಲ್ಲಿ ಪ್ರಕರಣಗಳು ವರದಿಯಾಗಿವೆ.
2025ರ ಅಂಕಿಅಂಶ ಗಮನಿಸುವುದಾದ್ರೆ, ಕಳೆದ 6 ತಿಂಗಳಲ್ಲಿ ಕರ್ನಾಟಕದಲ್ಲಿ 2.3 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಮತ್ತು 19 ರೇಬಿಸ್ ಸಾವುಗಳು ದಾಖಲಾಗಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೀವ್ರ ಹೆಚ್ಚಳವನ್ನು ಸೂಚಿಸುತ್ತದೆ. 2024 ರಲ್ಲಿ, ರಾಜ್ಯದಲ್ಲಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ಮತ್ತು 42 ರೇಬಿಸ್ ಸಾವುಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP) ಮಾಹಿತಿಯ ಪ್ರಕಾರ, ಈ ವರ್ಷ ಜನವರಿ 1 ರಿಂದ ಜೂನ್ 30 ರವರೆಗೆ ಕರ್ನಾಟಕದಲ್ಲಿ 2,31,091 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರ ಪೈಕಿ 19 ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,69,672 ನಾಯಿ ಕಡಿತ ಪ್ರಕರಣಗಳು ಮತ್ತು 18 ರೇಬಿಸ್ ಸಾವುಗಳು ವರದಿಯಾಗಿದ್ದವು.
ಜನನ ನಿಯಂತ್ರಣಕ್ಕೆ ಏನು ಮಾಡಬೇಕು?
ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮಕ್ಕೆ ಸೂಕ್ತ ಹಣಕಾಸು ಒದಗಿಸದೇ ಇರುವುದೇ ಕಳವಳಕ್ಕೆ ಕಾರಣವಾಗಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಪ್ರತಿ ನಾಯಿಗೆ 1,650 ರೂ.ಗಳ ವರೆಗೆ ಶಿಫಾರಸು ಮಾಡಿದೆ. ಇದರಲ್ಲಿ ನಾಯಿ ಹಿಡಿಯುವವರಿಗೆ, ಸಂತಾನಹರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆ ನಂತರದ ನಿರ್ವಹಣೆ ಮತ್ತು ಲಸಿಕೆಗಾಗಿ ಪ್ರತಿ ನಾಯಿಗೆ ನಿಗದಿಪಡಿಸಿರುವ 200 ರೂ. ಇದರಲ್ಲೇ ಬರುತ್ತದೆ. ಅಂದಾಜಿನ ಪ್ರಕಾರ ದೇಶಾದ್ಯಂತ 6 ಕೋಟಿ ಬೀದಿ ನಾಯಿಗಳಿದ್ದು, ಮಂಡಳಿ ನಿಗದಿ ಮಾಡಿದ ಹಣದಿಂದ ಜನನ ನಿಯಂತ್ರಣಕ್ಕೆ ಕಡಿವಾಣ ಹಾಕುವುದು ಕಷ್ಟಕರ ಹೀಗಾಗಿ ಸ್ಮಾರ್ಟ್ ನವೀನ ವಿದಾನಗಳನ್ನು ಹುಡುಕಬೇಕಿದೆ ಎನ್ನುತ್ತಾರೆ ತಜ್ಞರು.
ಜನನ ನಿಯಂತ್ರಣಕ್ಕೆ ತಜ್ಞರ ಸಲಹೆಗಳೇನು?
* ಹೆಣ್ಣು ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಜೊತೆಗೆ ಜನರು ಮತ್ತು ಸಂಘಸಂಸ್ಥೆಗಳು ನಾಯಿಗಳನ್ನು ದತ್ತು ತೆಗೆದುಕೊಳ್ಳಬೇಕು. ಅವುಗಳ ಜವಾಬ್ದಾರಿ ನಿರ್ವಹಿಸುವಂತೆ ಸರ್ಕಾರ ಮಾಡಬೇಕು.
* ಬಹಳ ಜನಕ್ಕೆ ತಮ್ಮ ಸ್ಥಳೀಯ ನಾಯಿಗಳ ಮೌಲ್ಯ ತಿಳಿದಿರುವುದಿಲ್ಲ. ಸ್ವಲ್ಪ ಮಟ್ಟಿಗೆ ಅವುಗಳ ಮೌಲ್ಯ ಕಂಡುಕೊಂಡ್ರೆ ಭದ್ರತೆ ಅಥವಾ ಬಾಂಬ್ ಸ್ಕ್ವಾಡ್‌ಗಳಿಗೆ ಬಳಸಬಹುದಲ್ಲವೇ?
* ದೆಹಲಿ, ಚೆನ್ನೈ ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಂತಾನಹರಣಗೊಂಡ ಪ್ರಾಣಿಗಳನ್ನು ಟ್ರ್ಯಾಕಿಂಗ್ ಮೂಲಕ ಖಚಿಪಡಿಸಿಕೊಳ್ಳಬೇಕು. ಅದಕ್ಕಾಗಿ ಮೈಕ್ರೋಚಿಪ್‌ಗಳಂತಹ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. RFID ಸಾಧನವಾದ ಮೈಕ್ರೋಚಿಪ್ ಶಾಶ್ವತ ID ಯಾಗಿ ಕಾರ್ಯನಿರ್ವಹಿಸುತ್ತದೆ. ನಾಯಿಯ ಚರ್ಮದ ಅಡಿಯಲ್ಲಿ ಈ ಚಿಪ್ ಅಳವಡಿಸಬಹುದಾಗಿದೆ.
* ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್ (HSI) ನಂತಹ ಸಂಸ್ಥೆಗಳು ಸಂಪೂರ್ಣ ABC ಪ್ರಕ್ರಿಯೆ ಸುಗಮಗೊಳಿಸಲು ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕಿದೆ ಅನ್ನೋದು ತಜ್ಞರ ಸಲಹೆ. ಇದರೊಂದಿಗೆ ಸಂತಾನೋತ್ಪತ್ತಿ ಪ್ರಕ್ರಿಯೆ ತಡೆಯುವ ಪ್ರತಿಕಾಯಗಳನ್ನು ಉತ್ಪಾದಿಸುವ ಇಮ್ಯುನೊಕಾಂಟ್ರಾಸೆಪ್ಷನ್ ಸೇರಿದಂತೆ ಶಸ್ತ್ರಚಿಕಿತ್ಸೆಯಲ್ಲದ ಗರ್ಭನಿರೋಧಕಗಳ ಪತ್ತೆ ಕಾರ್ಯದಲ್ಲಿ ಹೆಚ್‌ಎಸ್‌ಐ ತೊಡಗಿದೆ.