ಕೇವಲ ಮುಸ್ಲಿಮರನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದೀರಾ – ಬಿಜೆಪಿಗೆ ಸಿದ್ದು ಪ್ರಶ್ನೆ

Public TV
3 Min Read

ಮೈಸೂರು: ಕೇವಲ ಮುಸ್ಲಿಮರನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಾ. ಒಂದು ಧರ್ಮ, ಒಂದು ಜಾತಿಯನ್ನು ಟಾರ್ಗೆಟ್ ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಸ್ಲಿಮರ ಮಟನ್ ಸ್ಟಾಲ್, ಕಸಾಯಿಖಾನೆ ಮುಚ್ಚಲು ನೋಟಿಸ್ ಕೊಟ್ಟಿರುವ ವಿಚಾರವಾಗಿ ಮೈಸೂರಿನ ಟಿ. ನರಸೀಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇವಲ ಮುಸ್ಲಿಮರನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಾ. ಒಂದು ಧರ್ಮ, ಒಂದು ಜಾತಿ ಟಾರ್ಗೆಟ್ ಮಾಡಬೇಡಿ. ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತಿದ್ದರೆ ಮಾಡಿ. ಕಾನೂನು ಎಲ್ಲರಿಗೂ ಒಂದೇ. ರಾಜಕೀಯ ಲಾಭಕ್ಕಾಗಿ ಒಂದು ಧರ್ಮವನ್ನ ಟಾರ್ಗೆಟ್ ಮಾಡಬೇಡಿ. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳಿ. ಒಂದು ವರ್ಗವನ್ನು ಟಾರ್ಗೆಟ್ ಮಾಡಿದರೆ ಮತ ಧ್ರುವೀಕರಣ ಆಗುತ್ತದೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಅದು ಅಸಾಧ್ಯ. ಈಗಾಗಲೇ ಅವರಿಗೆ ತಿರುಗುಬಾಣ ಆಗಿದೆ ಎಂದು ಹೇಳಿದರು.

ಬಿಜೆಪಿಯಿಂದ ಒಲೈಕೆ: ಸಂವಿಧಾನ 15 ಭಾಷೆಗಳಿಗೆ ಅಧಿಕೃತ ಭಾಷೆ ಎಂಬ ಮಾನ್ಯತೆ ನೀಡಿದೆ. ಹಿಂದಿ ಕೂಡ ಒಂದು ಭಾಷೆ. ಹಿಂದಿ ರಾಷ್ಟ್ರ ಭಾಷೆ ಅಂತ ಎಲ್ಲಿಯೂ ಹೇಳಿಲ್ಲ. ಅಮಿತ್ ಶಾ ಅವರು ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಬಳಸಬೇಕು ಅಂದಿರುವ ಕಾರಣಕ್ಕಾಗಿ ಬಿಜೆಪಿಯವರು ಓಲೈಕೆ ಮಾಡುತ್ತಿದ್ದಾರೆ ಎಂದರು.

Amith

ಸಿದ್ದರಾಮಯ್ಯ ಸೋನಿಯಾ ಗಾಂಧಿ ಗುಲಾಮ ಎಂಬ ಸಿ.ಟಿ. ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾರು ಯಾರಿಗೂ ಗುಲಾಮರಲ್ಲ. ಅಮಿತ್ ಶಾ ಓಲೈಸಿ ಮಾತನಾಡಿದ್ದಕ್ಕೆ ಸಿಟಿ.ರವಿಯನ್ನು ಗುಲಾಮ ಎಂದಿದ್ದು. ಸೋನಿಯಾ ಗಾಂಧಿ ಹಿಂದಿ ರಾಷ್ಟ್ರೀಯ ಭಾಷೆ ಅಂದಿದ್ದಾರಾ? ರಾಹುಲ್ ಗಾಂಧಿ ಆ ರೀತಿ ಮಾತನಾಡಿದ್ದಾರಾ? ಪ್ರಜಾಪ್ರಭುತ್ವದಲ್ಲಿ ಯಾರಿಗೆ ಯಾರೂ ಗುಲಾಮರಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಡ ಮುಸ್ಲಿಮರ ಮೇಲೆ ಬಿಜೆಪಿ ಸಮರ ಸಾರಿದೆ: ಓವೈಸಿ ಕಿಡಿ

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆ ಇಲ್ಲ ಎಂಬ ಸಚಿವ ಆರ್. ಅಶೋಕ್ ಹೇಳಿಕೆ ವಿಚಾರವಾಗಿ ಟೀಕಿಸಿದ ಅವರು, ನಮ್ಮ ಸರ್ಕಾರ ಇದ್ದಾಗ ಅಶೋಕ್ ಏನು ಮಾಡುತ್ತಿದ್ದರು. ಆಗ ಬಿಜೆಪಿ ಪ್ರತಿಪಕ್ಷದಲ್ಲಿತ್ತು. ಆಗ ಯಾಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ. ಆಗ ಅಶೋಕ ತಮ್ನ ಬಾಯಿಗೆ ಕಡುಬು ಹಾಕಿಕೊಂಡಿದ್ದರಾ ಎಂದು ಪ್ರಶ್ನಿಸಿದರು.

ಸುಮ್ಮನೇ ಏನೇನೋ ಮಾತನಾಡುವುದಲ್ಲ. ನಮ್ಮ ಕಾಲದಲ್ಲೂ ಪಿಎಸ್‍ಐ ನೇಮಕಾತಿ ಆಯಿತು. ಬೇರೆ, ಬೇರೆ ನೇಮಕಾತಿಗಳಾದವು. ಆಗೆಲ್ಲ ಇಂತಹ ಭ್ರಷ್ಟಾಚಾರ ನಡೆದಿತ್ತಾ? ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಅಕ್ರಮಗಳು ಹೆಚ್ಚಾಗಿವೆ. ಪಿಎಸ್‍ಐ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಇದೆ. ಪರೀಕ್ಷೆಯಲ್ಲಿ ಯಾರು ಅಕ್ರಮ ಮಾಡಿದ್ದಾರೆ, ಯಾರು ಸರಿಯಾಗಿ ಬರೆದಿದ್ದಾರೆ ಗೊತ್ತಾಗಲ್ಲ. ತನಿಖೆ ಮುಂದುವರಿದು 20 ಜನರ ಬಂಧನ ಆಗಿದೆ. ಹೀಗಾಗಿ ಮರು ಪರೀಕ್ಷೆ ಮಾಡುವುದು ಸರಿ ಇದೆ. ಆದರೆ ಈಗ ಪರೀಕ್ಷೆ ಬರೆದಿರುವ ಯಾರ ಬಳಿಯೂ ಪರಿಕ್ಷಾ ಶುಲ್ಕ ಪಡೆಯಬಾರದು. ಬಿಜೆಪಿ ದುರಾಡಳಿತದಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಗೃಹ ಸಚಿವ ಆರಗ ಜ್ಞಾನೇಂದ್ರ ಒಂದು ಕ್ಷಣವೂ ಪದವಿಯಲ್ಲಿ ಮುಂದುವರಿಯಬಾರದು. ಮುಖ್ಯಮಂತ್ರಿ ಇದರ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

ದಿವ್ಯಾ ಬಂಧನವಾದ ಕೂಡಲೇ ಎಕ್ಸಾಂ ರದ್ದು: ಬಂಧಿತೆ ದಿವ್ಯಾ ಸತ್ಯ ಹೇಳಲೇಬೇಕಲ್ಲವೇ. ಬೇರೆ ಯಾರ್ಯಾರು ಅಕ್ರಮದ ಹಿಂದೆ ಇದ್ದಾರೆ, ಯಾರಿಂದ ಪ್ರಶ್ನೆ ಪತ್ರಿಕೆ ಲೀಕ್ ಆಯಿತು ಎಲ್ಲಾ ಗೊತ್ತಾಗಬೇಕಲ್ಲವೇ? ಅದಕ್ಕೆ ತನಿಖೆ ಆಗಲೇಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಈ ಸರ್ಕಾರಕ್ಕೆ ಹಿಂಸಾಚಾರ ಬೇಕಾಗಿದೆ: ಅಸಾದುದ್ದೀನ್‌ ಓವೈಸಿ

ಪ್ರಿಯಾಂಕ ಖರ್ಗೆಗೆ ನೋಟೀಸ್ ನೀಡುವ ಅಗತ್ಯವಿರಲಿಲ್ಲ. ನಿಮ್ಮ ಬಳಿ ಏನ್ ದಾಖಲೆ ಇದೆ ಅದನ್ನು ಕೊಡಿ ಅಂತ ಕೇಳಬಹುದಿತ್ತು. ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಸಾಕ್ಷ್ಯ ಸಂಗ್ರಹಿಸಬೇಕು. ಅದನ್ನು ಬಿಟ್ಟು ನೋಟೀಸ್ ಯಾಕೆ ಕೊಡಬೇಕು ಆಕ್ರೋಶ ಹೊರಹಾಕಿದರು.

ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು: ಪಶ್ಚಿಮ ಬಂಗಾಳದ ಮೇಲೂ ಇದೇ ರೀತಿ ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ಏನಾಯಿತು? ಇಲ್ಲೂ ಅದೇ ರೀತಿ ಆಗಲಿದೆ. ನನಗೆ ಕ್ಷೇತ್ರ ಇಲ್ಲ ಅಂತಲ್ಲ. ಬಾದಾಮಿ ಇಲ್ವಾ? ಅಲ್ಲಿಂದಲೇ ಮತ್ತೆ ಸ್ಪರ್ಧಿಸಿದರೂ ಸ್ಪರ್ಧಿಸಬಹುದು. ಸುಮಾರು 20 ಕ್ಷೇತ್ರಗಳಲ್ಲಿ ಜನ ಕರೆಯುತ್ತಿದ್ದಾರೆ. ವರುಣ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಕೋಲಾರ ಎಲ್ಲ ಕಡೆ ಕರೆಯುತ್ತಿದ್ದಾರೆ. ಚುನಾವಣೆಗೆ ತುಂಬಾ ದಿನ ಇದೆ. ಹತ್ತಿರ ಬಂದಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *