ಮುದುಕನಿಗೆ ಮತ್ತೊಂದು ಮದುವೆ ಯಾಕಯ್ಯ: ಸಿದ್ದರಾಮಯ್ಯ ಹಾಸ್ಯ ಚಟಾಕಿ

Public TV
2 Min Read

ಮೈಸೂರು: ಆತ್ಮಾವಲೋಕನ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ 71ನೇ ವಯಸ್ಸಿನಲ್ಲಿ ಈ ಮುದಕನಿಗೆ ಮತ್ತೊಂದು ಮದುವೆ ಯಾಕಯ್ಯ ಅಂತಾ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಹೃದಯವಂತಿಕೆಯಲ್ಲಿ ಸದಾ ಯುವಕರು ಎಂಬ ಮಾತಿಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಇತ್ತೀಚೆಗೆ ಒಂದು ಆತ್ಮಾವಲೋಕನ ಸಭೆಗೆ ಹೋಗಿದ್ದೆ, ಅಲ್ಲಿ ಯಾರೋ ಹೇಳ್ತಾ ಇದ್ರು, ನಿಮಗೆ 71 ಅಲ್ಲ ಸರ್ 21. ನಿಮಗೆ ಮತ್ತೊಂದು ಮದುವೆ ಮಾಡುವ ಉತ್ಸಾಹದಲ್ಲಿದ್ದೇವೆ ಅಂತ ಹೇಳಿದ್ರು. ಅದಕ್ಕೆ ನಾನು ಹೇಳಿದೆ, ಈ ಮಾತನ್ನ ಯಾರಾದ್ರೂ ಹುಡುಗಿಯರು ಕೇಳಿಸಿಕೊಂಡ್ರೆ ತಪ್ಪು ತಿಳಿದುಕೊಳ್ಳುತ್ತಾರೆ. ನನಗೆ 71 ವರ್ಷ ಆಗಿದೆ. ಮುದುಕನಿಗೆ ಯಾಕಪ್ಪ ಮತ್ತೊಂದು ಮದುವೆ ಅಂದೆ. ಹೌದೌದು, ಹೃದಯವಂತಿಕೆಯಲ್ಲಿ ನಾನು ಯಂಗ್ ಅಂತಾ ಅಂದ್ರು.

ಮೈಸೂರಿನ ವಿಜೇತ, ಪರಾಜಿತ ಅಭ್ಯರ್ಥಿಗಳ ಸಭೆಗೂ ಮುನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಮಾಜಿ ಸಿಎಂ, ಒಂದು ವೇಳೆ ನಾನು ರಾಜಕೀಯಕ್ಕೆ ಬಂದಿಲ್ಲ ಅಂದಿದ್ರೆ ಪ್ರಖ್ಯಾತ ಪ್ರಾಧ್ಯಾಪಕ ಆಗುತ್ತಿದ್ದೆ. ಈಗ ವಯಸ್ಸಾಗಿದ್ದು, ಪಾಠ ಮಾಡೋಕೆ ಆಗಲ್ಲ. ಅಂದು ವಿದ್ಯಾರ್ಥಿಗಳ ಜೊತೆ ನನ್ನ ಒಡನಾಟ ಚೆನ್ನಾಗಿತ್ತು. ಒಂದು ಗಂಟೆಗಳ ಕಾಲ ಪಾಠ ಮಾಡುವುದು ನನಗೆ ಅತ್ಯಂತ ಖುಷಿ ನೀಡುತ್ತಿತ್ತು. ರಾಜಕೀಯಕ್ಕಿಂತ ಶಿಕ್ಷಕ ವೃತ್ತಿ ನನಗೆ ಹೆಚ್ಚು ಖುಷಿ ನೀಡಿದೆ ಎಂದು ತಿಳಿಸಿದರು.

ತಮ್ಮ ಜೊತೆಯಲ್ಲಿ ಕುಳಿತಿದ್ದ ತನ್ವೀರ್ ಸೇಠ್ ಹಾಗೂ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಉದ್ದೇಶಿಸಿ, ನಾನೂ ವೈಯಕ್ತಿಕವಾಗಿ ಯಾರಿಗೂ ಏನೂ ಮಾಡಿ ಕೊಟ್ಟಿಲ್ಲ. ಮಾಡಿಕೊಟ್ಟಿರೋದು ಕೇವಲ ತನ್ವೀರ್ ಸೇಠ್‍ಗೆ ಮಾತ್ರ. ನಾನೂ ಸಚಿವ ಸ್ಥಾನವನ್ನು ಮಾತ್ರ ಮಾಡಿ ಕೊಟ್ಟಿದ್ದೇನೆ. ಮಾಜಿ ಶಾಸಕ ಮಂಜುನಾಥ್‍ಗೂ ಸಚಿವ ಸ್ಥಾನ ಕೇಳಿದೆ. ಆತನೇ ಬೇಡ ಅಂತ ಹೇಳಿದ, ಏನಪ್ಪ ಮಂಜು ನಿಜ ತಾನೇ ಎಂದು ಸಿದ್ದರಾಮಯ್ಯವರು ತಮ್ಮ ದಾಟಿಯಲ್ಲೇ ಕೇಳಿದರು.

ಕಳೆದ ವಾರ ಬಾದಾಮಿಯ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮಾತನಾಡಿ, ಸಿದ್ದರಾಮಯ್ಯನವರಿಗೆ 71 ವರ್ಷ ಆಗಿಲ್ಲ. ಈಗಿನ್ನೂ ಅವರಿಗೆ 21 ವರ್ಷ ಆಗಿದೆ. ಪಕ್ಷಕ್ಕಾಗಿ ಈಗಲೂ ಚಿರ ಯುವಕನಂತೆ ಕೆಲಸಮಾಡುತ್ತಿದ್ದಾರೆ. ಹಾಗಾಗಿ ಇನ್ನೊಂದು ಮದುವೆ ಮಾಡಬೇಕೆಂದು ತೀರ್ಮಾನಿಸಿದ್ದೇನೆ ಎಂದು ಹೇಳಿ ಹೊಗಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *