ಶಿವಮೊಗ್ಗದಲ್ಲಿ ಗೆಲುವಿನ ಮಾಲೆ ಯಾರಿಗೆ? – ದೋಸ್ತಿ, ಬಿಜೆಪಿ ಲೆಕ್ಕ ರಿವೀಲ್

Public TV
3 Min Read

– ಭಿನ್ನ ಉತ್ತರ ನೀಡಿತಾ ಗುಪ್ತಚರ ವರದಿ!

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕೊನೆಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರದಲ್ಲಿ ಅಡಕವಾಗಿದೆ. ಆದ್ರೆ ಚುನಾವಣೋತ್ತರ ಸಮೀಕ್ಷೆಗಳು ಹೊರ ಬರುತ್ತಿವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸಹ ಖಾಸಗಿ ಏಜೆನ್ಸಿಗಳಿಂದ ಸರ್ವೆ ಮಾಡಿಸಿವೆ. ಈ ಮೂರು ಪಕ್ಷಗಳ ಸರ್ವೆ ಒಂದೆಡೆಯಾದ್ರೆ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆ ಸಹ ತನ್ನ ಸಮೀಕ್ಷೆಯನ್ನು ನೀಡಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆಗಳ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮಾಜಿ ಸಿಎಂ ಪುತ್ರರಿಬ್ಬರಾದ ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಸ್ಪರ್ಧೆ ಮಾಡಿರುವ ಶಿವಮೊಗ್ಗ ಹೈ ವೋಲ್ಟೇಜ್ ಕಣವಾಗಿತ್ತು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಮುನ್ನಡೆ ಸಾಧಿಸಲಿದ್ದಾರೆ ಎಂದು ದೋಸ್ತಿ ಲೆಕ್ಕ ಹೀಗಿದೆ.

ದೋಸ್ತಿ ಲೆಕ್ಕ:
ದೋಸ್ತಿ ಲೆಕ್ಕದ ಪ್ರಕಾರ ಶಿವಮೊಗ್ಗ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಲೀಡ್ ಕಾಯ್ದುಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರದಲ್ಲಿ 1,70,635 ಮತಗಳು ಚಲಾವಣೆಯಾಗಿವೆ. ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಮಧು ಬಂಗಾರಪ್ಪ 10 ರಿಂದ 15 ಸಾವಿರ ಮತಗಳ ಲೀಡ್ ಪಡೆದುಕೊಳ್ಳುತ್ತಿದ್ದಾರೆ ಎಂದು ದೋಸ್ತಿ ಲೆಕ್ಕ ಹೇಳುತ್ತಿದೆ. ಉಳಿದಂತೆ ಶಿವಮೊಗ್ಗ ನಗರದಲ್ಲಿ 5ರಿಂದ 10 ಸಾವಿರ, ತೀರ್ಥಹಳ್ಳಿಯಲ್ಲಿ 10 ಸಾವಿರ, ಶಿಕಾರಿಪುರದಲ್ಲಿ 5 ಸಾವಿರ, ಸೊರಬದಲ್ಲಿ 15 ಸಾವಿರ, ಸಾಗರದಲ್ಲಿ 15 ಸಾವಿರ, ಬೈಂದೂರಿನಲ್ಲಿ 10 ಸಾವಿರ ಮತ್ತು ಭದ್ರಾವತಿಯಲ್ಲಿ 25 ಸಾವಿರ ಅಂತರದಲ್ಲಿ ಮಧು ಬಂಗಾರಪ್ಪ ಗೆಲುವು ದಾಖಲಿಸಲಿದ್ದಾರೆ ದೋಸ್ತಿ ಸಮೀಕ್ಷೆ ಹೇಳುತ್ತಿದೆ. ಒಟ್ಟಾರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 75ರಿಂದ 1 ಲಕ್ಷಗಳ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ 75 ಸಾವಿರದಿಂದ 1 ಲಕ್ಷ ಮತಗಳ ಅಂತರದಲ್ಲಿ ಗೆಲುವು ಕಾಣುತ್ತಾರೆ ಎಂದು ದೋಸ್ತಿ ಲೆಕ್ಕ ಹೇಳುತ್ತಿದೆ.

ಬಿಜೆಪಿ ಲೆಕ್ಕ:
ಬಿಜೆಪಿ ಲೆಕ್ಕದ ಪ್ರಕಾರ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿ.ವೈ.ರಾಘವೇಂದ್ರ ಗೆಲುವಿನ ನಗೆ ಬೀರಲಿದ್ದಾರೆ ಎಂದು ಕಮಲ ಸರ್ವೆ ಹೇಳುತ್ತಿದೆ. ಶಿವಮೊಗ್ಗ ಗ್ರಾಮಾಂತರ 20 ಸಾವಿರ, ಭದ್ರಾವತಿ 10 ರಿಂದ 15 ಸಾವಿರ, ಶಿವಮೊಗ್ಗ ನಗರ 25 ಸಾವಿರ, ತೀರ್ಥಹಳ್ಳಿ 15 ರಿಂದ 20 ಸಾವಿರ, ಶಿಕಾರಿಪುರ 10 ರಿಂದ 15 ಸಾವಿರ, ಸೊರಬ 17 ರಿಂದ 20 ಸಾವಿರ, ಸಾಗರ 17 ರಿಂದ 20 ಸಾವಿರ, ಬೈಂದೂರು 10 ರಿಂದ 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ರೆ ಒಟ್ಟಾರೆ 1 ರಿಂದ 1.5 ಲಕ್ಷ ಮತಗಳ ಅಂತರದಿಂದ ಬಿ.ವೈ.ರಾಘವೇಂದ್ರ ಗೆಲುವು ಕಾಣ್ತಾರೆ ಎಂದು ಬಿಜೆಪಿ ಸಮೀಕ್ಷೆ ಹೇಳುತ್ತಿದೆ.

ಗುಪ್ತಚರ ವರದಿ: ರಾಜ್ಯ ಸರ್ಕಾರ ಗುಪ್ತಚರ ಇಲಾಖೆ ಮೈತ್ರಿ  ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವು ಕಾಣ್ತಾರೆ ಎಂದು ಹೇಳಿ ಕೆಲವು ಅಂಕಿ ಅಂಶಗಳನ್ನು ಸಿಎಂಗೆ ಒಪ್ಪಿಸಿದೆಯಂತೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಸೊರಬದಲ್ಲಿ ಮಧು ಬಂಗಾರಪ್ಪ ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ. ಸಾಗರದಲ್ಲಿ ಎರಡೂ ಪಕ್ಷಗಳ ಸಮಬಲ ಸಾಧಿಸಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗ ಗ್ರಾಮಾಂತರ 6 ಸಾವಿರ, ಭದ್ರಾವತಿ 5 ಸಾವಿರ, ಶಿವಮೊಗ್ಗ ನಗರ 12 ರಿಂದ 14 ಸಾವಿರ, ತೀರ್ಥಹಳ್ಳಿ 6 ರಿಂದ 7 ಸಾವಿರ, ಶಿಕಾರಿಪುರ 14 ಸಾವಿರ, ಬೈಂದೂರು 8 ರಿಂದ 10 ಸಾವಿರ ಮತಗಳ ಅಂತರದಲ್ಲಿ ಬಿ.ವೈ.ರಾಘವೇಂದ್ರ ಮುನ್ನಡೆ ಕಾಯ್ದುಕೊಂಡು ಅಂದಾಜು 50 ರಿಂದ 52 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಗುಪ್ತಚರ ವರದಿ ತಿಳಿಸಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *