ಯಾರಾಗ್ತಾರೆ ಮುಂದಿನ ರಾಜ್ಯ ಪೊಲೀಸ್ ಮಹಾನಿರ್ದೇಶಕ?

Public TV
2 Min Read

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಸಮರ್ಥ ಅಧಿಕಾರಿ ಆಯ್ಕೆಗೆ ಸರ್ಕಾರ ಕಸರತ್ತು ಆರಂಭಿಸಿದೆ. ಹಾಲಿ ಡಿಜಿ-ಐಜಿಪಿ ನೀಲಮಣಿ ಎನ್ ರಾಜು ಅವರು ಇದೇ ತಿಂಗಳ 31ಕ್ಕೆ ನಿವೃತ್ತಿ ಹೊಂದಲಿದ್ದಾರೆ. ನೀಲಮಣಿ ಎನ್ ರಾಜು 2017ರ ಅಕ್ಟೋಬರ್‍ನಲ್ಲಿ ರಾಜ್ಯದ ಮೊದಲ ಮಹಿಳಾ ಡಿಜಿ-ಐಜಿಪಿಯಾಗಿ ನೇಮಕವಾಗಿದ್ದರು. ಇದೀಗ ನೀಲಮಣಿ ರಾಜು ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಡಿಜಿ ಐಜಿಪಿ ಆಯ್ಕೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಡಿಜಿ-ಐಜಿಪಿ ಹುದ್ದೆಯ ರೇಸ್‍ನಲ್ಲಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿದ್ದಾರೆ. ಸೇವಾ ಹಿರಿತನ ಹೊಂದಿರುವ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎಎಂ ಪ್ರಸಾದ್, ಸಿಐಡಿ, ಡಿಜಿಪಿ ಪ್ರವೀಣ್ ಸೂದ್, ನೇಮಕಾತಿ ವಿಭಾಗದ ಡಿಜಿಪಿ ಪಿ.ಕೆ ಗರ್ಗ್ ಹೆಸರುಗಳು ಡಿಜಿ-ಐಜಿಪಿ ರೇಸ್‍ನಲ್ಲಿ ಕೇಳಿಬಂದಿದೆ.

ಡಿಜಿ- ಐಜಿಪಿ ಹುದ್ದೆಗೆ ಸೇವಾ ಹಿರಿತನ ಹೊಂದಿರುವ ಈ ಮೂವರು ಹಿರಿಯ ಅಧಿಕಾರಿಗಳ ಹೆಸರುಗಳನ್ನೂ ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳಿಸಿಕೊಟ್ಟಿದೆ. ಈ ಅಧಿಕಾರಿಗಳ ವೃತ್ತಿ ಬದುಕಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಸರ್ಕಾರ ರವಾನೆ ಮಾಡಿದೆ.

ಸದ್ಯದಲ್ಲೇ ಕೇಂದ್ರ ಲೋಕಸೇವಾ ಆಯೋಗವು ಲಕೋಟೆ ಮೂಲಕ ಡಿಜಿ-ಐಜಿಪಿ ಹುದ್ದೆಗೆ ಆಯ್ಕೆ ಮಾಡಬೇಕಾದ ಹೆಸರುಗಳನ್ನು ಆಯ್ಕೆ ಮಾಡಿ ಕಳಿಸಿಕೊಡಲಿದೆ. ಯುಪಿಎಸ್‍ಸಿ ಲಕೋಟೆ ಬಂದ ಬಳಿಕ ರಾಜ್ಯ ಸರ್ಕಾರ ಹೊಸ ಡಿಜಿ-ಐಜಿಪಿ ಹುದ್ದೆಗೆ ಆಯ್ಕೆ ಮಾಡಲಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಕೇಂದ್ರ ಲೋಕಸೇವಾ ಆಯೋಗಕ್ಕೆ ಡಿಜಿ-ಐಜಿಪಿ ಹುದ್ದೆಗೆ ಆಯ್ಕೆ ಮಾಡಬೇಕಾದ ಸಂಭಾವ್ಯರ ಹೆಸರುಗಳನ್ನು ಆಯ್ಕೆ ಮಾಡಿತ್ತು.

ಸದ್ಯ ಡಿಜಿ-ಐಜಿಪಿ ಹುದ್ದೆಯ ರೇಸ್‍ನಲ್ಲಿ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ಪ್ರಬಲವಾಗಿ ಕೇಳಿಬರ್ತಿದೆ. ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ ಪ್ರಸಾದ್ ಮತ್ತು ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದೆ.

ಈ ಪೈಕಿ 1985 ಕೇಡರ್‍ನ ಅಧಿಕಾರಿ ಎ.ಎಂ ಪ್ರಸಾದ್ ಅವರಿಗೆ ಇನ್ನೂ 9 ತಿಂಗಳ ಸೇವಾವಧಿ ಇದೆ. 1986ನೇ ಕೇಡರ್‍ನ ಅಧಿಕಾರಿಗಳಾದ ಪ್ರವೀಣ್ ಸೂದ್ ಅವರಿಗೆ ಇನ್ನೂ 2 ವರ್ಷ ಸೇವಾವಧಿ ಉಳಿದಿದ್ರೆ, ಪಿ ಕೆ ಗರ್ಗ್ ಅವರಿಗೆ 1.5 ವರ್ಷ ಸೇವಾವಧಿ ಇದೆ.

Share This Article
Leave a Comment

Leave a Reply

Your email address will not be published. Required fields are marked *