ಹದಿಹರೆಯದವರಲ್ಲೂ ಹೆಚ್ಚಾಯ್ತು ಇ-ಸಿಗರೇಟ್‌ ಕ್ರೇಜ್‌ – WHO ನಿಂದ ಆತಂಕಕಾರಿ ವರದಿ ಬಹಿರಂಗ

Public TV
4 Min Read

ಇ-ಸಿಗರೇಟ್‌ ಸೇವನೆ ಹಾನಿಕಾರಕವಲ್ಲ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ವಾಸ್ತವದಲ್ಲಿ ಇ-ಸಿಗರೇಟ್ (E-Cigarette) ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನ ಖುದ್ದು ಪ್ರಧಾನಿ ನರೇಂದ್ರ ಮೋದಿ (PM Modi) ಅವರೇ ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಈ ಹಿಂದೆ ಹೇಳಿದ್ದರು.

ಸುಗಂಧ ದ್ರವ್ಯದಂತಹ ರಾಸಾಯನಿಕಗಳ ಮಿಶ್ರಣವಿರುವ ಹಿನ್ನೆಲೆಯಲ್ಲಿ ಇ-ಸಿಗರೇಟ್ ಸೇವನೆಯಿಂದ ದುರ್ವಾಸನೆ ಬರುವುದಿಲ್ಲ. ಹಾಗೆಂದ ಮಾತ್ರಕ್ಕೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಇದರಲ್ಲೂ ನಿಕೋಟಿನ್‌ ಅಂಶವಿರುವ ಕಾರಣ ಆರೋಗ್ಯಕ್ಕೆ ಯಾವತ್ತಿದ್ದರೂ ಮಾರಕ. ಕಳೆದ ಹಲವು ವರ್ಷಗಳಿಂದ ತಂಬಾಕು ಸಿಗರೇಟ್‌ (Cigarette) ಸೇವನೆಯ ಚಟ ಬಿಡಿಸಲು ಯೋಗ್ಯವಾದ ಸಿಗರೇಟ್‌ ಎಂದೇ ಹೇಳಿಕೊಂಡು ಮಾರುಕಟ್ಟೆ ಪ್ರವೇಶಿಸಿದ ಇ-ಸಿಗರೇಟ್‌ನಲ್ಲೂ ಅತ್ಯಧಿಕ ಪ್ರಮಾಣ ಹಾನಿ ಸಂಭವಿಸುತ್ತದೆ ಎಂದು ವಿಜ್ಞಾನಿಗಳು ಹಾಗೂ ಸಂಶೋಧಕರು ಹೇಳುತ್ತಲೇ ಬಂದಿದ್ದಾರೆ.

ಕಡಿಮೆ ಪ್ರಮಾಣದಲ್ಲಿ ಹಾನಿ ಉಂಟುಮಾಡುತ್ತದೆ ಎಂದು ಮಾರುಕಟ್ಟೆಗೆ ಬಿಡಲಾಗಿದ್ದ ಇ-ಸಿಗರೇಟ್ ಯುವಕರನ್ನ ಹೆಚ್ಚಾಗಿ ಸೆಳೆದಿತ್ತು, ಈಗಲೂ ಸೆಳೆಯುತ್ತಿದೆ. ಆದ್ರೆ ಇದರ ಮೇಲೆ ಸಂಶೋಧನೆ ನಡೆಸಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯೇ ಈ ಉತ್ಪನ್ನಗಳಲ್ಲಿ ಸಿಗರೇಟು ಚಟ ಬಿಡಿಸುವ ಯಾವುದೇ ವಿಶೇಷ ಪದಾರ್ಥಗಳು ಇಲ್ಲ ಎಂದು ಹೇಳಿತ್ತು. ಇದೀಗ ಆತಂಕಕಾರಿ ವರದಿಯೊಂದನ್ನ ವಿಶ್ವ ಆರೋಗ್ಯ ಸಂಸ್ಥೆಯೇ ಬಹಿರಂಗಪಡಿಸಿದೆ. ಇ-ಸಿಗರೇಟ್‌ನಿಂದ ಏನು ಆರೋಗ್ಯ ಅಪಾಯಗಳಿವೆ? ವಿಶ್ವ ಆರೋಗ್ಯ ಸಂಸ್ಥೆ ವರದಿ ಏನು ಹೇಳಿದೆ? ಭಾರತದಲ್ಲಿ (India) ಇದರ ಬಳಿಕೆ ಪ್ರಮಾಣ ಹೇಗಿದೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿ ತಿಳಿಯೋಣ… ಅದಕ್ಕೂ ಮುನ್ನ ಇ-ಸಿಗರೇಟ್‌ ಅಂದ್ರೇನು ಅನ್ನೋದನ್ನ ತಿಳಿದುಕೊಳ್ಳೋಣ…

ಇ ಸಿಗರೇಟ್‌ ಅಂದ್ರೆ ಏನು?
E Cigeretteಗಳನ್ನು ವೇಪ್ಸ್‌, ವೇಪ್‌ ಪೆನ್‌, ಹುಕ್ಕ ಪೆನ್‌ ಇ-ಸಿಗಾರ್‌, ಇ-ಪೈಪ್‌ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ಸಾಧನಗಳು E-ದ್ರವವನ್ನು ಉಪಯೋಗ ಮಾಡಿಕೊಂಡು ಏರಸಾಲ್‌ಗಳನ್ನ ಉತ್ಪತ್ತಿಮಾಡುತ್ತವೆ. E-ದ್ರವದಲ್ಲಿ ಸಾಮಾನ್ಯವಾಗಿ ತಂಬಾಕಿನಿಂದ ಉತ್ಪತ್ತಿಯಾಗುವ ನಿಕೋಟಿನ್‌ ಅಂಶ, ಪ್ರೊಪಿಲೀನ್‌, ಗ್ಲೈಕಾಲ್‌, ಗ್ಲಿಸರೀನ್‌, ಪರಿಮಳ ಸೂಸುವಂತಹ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.

ಈ ಸಾಧನಗಳು ಶಾಖವನ್ನು ಉತ್ಪತ್ತಿ ಮಾಡಿ E-ದ್ರವವನ್ನು ಬಿಸಿ ಮಾಡುವುದರಿಂದ ಏರಸಾಲ್‌ ಉತ್ಪತ್ತಿಯಾಗುತ್ತದೆ. ಈ ಸಾಧನಗಳು ಎಲೆಕ್ಟ್ರಾನಿಕ್‌ ನಿಕೋಟಿನ್‌ ಉತ್ಪಾದನೆಯಾಗುತ್ತದೆ. ಈ ಸಾಧನಗಳನ್ನು ಎಲೆಕ್ಟ್ರಾನಿಕ್‌ ನಿಕೋಟಿನ್‌ ಡೆಲಿವರಿ ಸಿಸ್ಟಮ್ಸ್‌ (ENDS)ಎಂದು ಕರೆಯಲಾಗುತ್ತದೆ. ಇದನ್ನ ಸಾಧಾರಣ ಸಿಗರೇಟ್‌, ಸಿಗಾರ್‌, ಪೈಪ್‌ಗಳ ರೂಪದಲ್ಲಿ ಉತ್ಪಾದಿಸಲಾಗುತ್ತದೆ,, ಕೆಲವು ಯುಎಸ್‌ಬಿ ಫ್ಲ್ಯಾಶ್‌ ಡ್ರೈವ್‌ಗಳನ್ನೂ ಸಹ ಹೋಲುವಂತಿರುತ್ತದೆ.

ಇ-ಸಿರೇಟ್‌ಗಳು ಸಾಧಾರಣ ಸಿಗರೇಟ್‌ಗಳಿಗಿಂತ ಭಿನ್ನವಾಗಿದೆ. ಇದು ತಂಬಾಕು ಸುಡುವುದರಿಂದ ಹೊರಹೊಮ್ಮುವ ಹಾನಿಕಾರಕ ಹೊಗೆಯಿಂದ ಕೂಡಿರುವುದಿಲ್ಲವಾದರೂ ನಿಕೋಟಿನ್‌ ಅಂಶವಿರುವುದರಿಂದ ಚಟ, ವ್ಯಸನಗಳಿಗೆ ಎಡೆ ಮಮಾಡಿಕೊಡುತ್ತವೆ. ಅತಿಯಾದ ಶಾಖ, ಶ್ವಾಸಕೋಶದ ತೊಂದರೆಗಳು, ನರ ಸಂಬಂಧಿ ದೌರ್ಬಲ್ಯಕ್ಕೆ ಕಾರಣವಾಗುವುದರಿಂದ ಯುವಜನತೆ E-ಸಿಗರೇಟ್‌ ಬಳಸುವ ಮುನ್ನ ಯೋಚಿಸಬೇಕಾಗಿದೆ.

ಭಾರತದಲ್ಲಿ ಇ-ಸಿಗರೇಟ್‌ ಬಳಕೆ ಹೇಗಿದೆ?
20219ರಲ್ಲೇ ಇ-ಸಿಗರೇಟ್‌ ಬಳಕೆ ಭಾರತದಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದ್ದರೂ ಬಳಕೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಆನ್‌ಲೈನ್‌ ಮಾರುಕಟ್ಟೆ, ಇತರ ಅಕ್ರಮ ಮಾರ್ಗಗಳ ಮೂಲಕ ಯುವ ಜನರು ಖರೀದಿಸಿ ಬಳಸುತ್ತಿದ್ದಾರೆ. 2022ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 18 ರಿಂದ 30 ವರ್ಷ ವಯಸ್ಸಿನ 23% ಶಿಕ್ಷಿತರು ಇ-ಸಿಗರೇಟ್‌ ಬಳಕೆ ಮಾಡ್ತಿದ್ದಾರೆ. ದೇಶದ ಶೇ.8 ರಷ್ಟು ಜನ ಮಾತ್ರ ದಿನನಿತ್ಯ ಇ-ಸಿಗರೇಟ್‌ ಬಳಕೆ ಮಾಡ್ತಿದ್ದಾರೆ. ಈ ಪ್ರಮಾಣ 2025ರಲ್ಲಿ ಬಹಳಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿ ಪ್ರಕಾರ, ವಿಶ್ವಾದ್ಯಂತ 13 ರಿಂದ 15 ವರ್ಷ ವಯಸ್ಸಿನ ಸುಮಾರು 15 ಲಕ್ಷ ಮಕ್ಕಳು ಇ-ಸಿಗರೇಟ್‌ ಬಳಸುತ್ತಿದ್ದಾರೆ. ಇದು ವಯಸ್ಕರಿಗಿಂತ 9% ಹೆಚ್ಚಾಗಿದೆ. ಒಟ್ಟಾರೆಯಾಗಿ 91 ಲಕ್ಷ ಪುರುಷರು, 56 ಲಕ್ಷ ಹುಡುಗಿಯರು ಇ-ಸಿಗರೇಟ್‌ ಸೇದುತ್ತಿದ್ದಾರೆ. ಅಮೆರಿಕದಲ್ಲಿ 40% ಜನರು ತಿಂಗಳಿಗೆ 20 ಅಥವಾ ಅದಕ್ಕಿಂತಲೂ ಹೆಚ್ಚಿನ ದಿನಗಳಲ್ಲಿ ಇ-ಸಿಗರೇಟ್‌ ಬಳಸುತ್ತಿದ್ದಾರೆ.

ಯುವಕರೇಕೆ ಈ ಚಟಕ್ಕೆ ತಿರುಗುತ್ತಿದ್ದಾರೆ?
ಸಾಮಾನ್ಯವಾಗಿ ಪೋಷಕರಿಗೆ ಸಾಂಪ್ರದಾಯಿಕ ಸಿಗರೇಟು ಸೇವನೆಯಿಂದಾಗುವ ಹಾನಿಯ ಬಗ್ಗೆ ಅರಿವಿರುವ ಕಾರಣ ಮಕ್ಕಳು ಇದರ ದಾಸರಾಗದಂತೆ ಎಚ್ಚರ ವಹಿಸುವುದು ಸಾಮಾನ್ಯ. ಆದರೆ ಇ-ಸಿಗರೇಟಿನ ಬಗ್ಗೆ ಅಷ್ಟೊಂದು ಅರಿವಿಲ್ಲದ ಕಾರಣ ತಮ್ಮ ಮಕ್ಕಳು ಇದರ ಚಟಕ್ಕೆ ಬಿದ್ದರೂ ಅದು ಪೋಷಕರಿಗೆ ಅಷ್ಟೊಂದು ಬೇಗ ಗೊತ್ತಾಗುವುದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿಇ-ಸಿಗರೇಟು ಸೇವನೆ ಫ್ಯಾಷನ್‌ ಆಗಿಬಿಟ್ಟಿದೆ. ಸೋಷಿಯಲ್‌ ಮೀಡಿಯಾ ಪ್ರಭಾವ, ನೆಚ್ಚಿನ ಸೆಲೆಬ್ರಿಟಿಗಳ ಅನುಕರಣೆ ಮೊದಲಾದ ಕಾರಣಗಳನ್ನ ಯುವಸಮೂಹವನ್ನ ಈ ಚಟಕ್ಕೆ ಎಳೆಯುತ್ತಿವೆ. ಈ ಹೊಸ ವ್ಯಸನದಿಂದ ಯುವ ಸಮುದಾಯವನ್ನ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಪರಿಮಳದ ಆಕರ್ಷಣೆ ಕಾರಣವೇ?
ಹೌದು, ವಯಸ್ಕರಲ್ಲದವರಿಗೂ ಇ-ಸಿಗರೇಟ್‌ ಚಟ ಹಚ್ಚುತ್ತಿರುವುದು ಸುವಾಸನೆ ಹಾಗೂ ಪರಿಮಳವೇ. ಹಣ್ಣು, ಸಿಹಿ ತಿಂಡಿ, ಕ್ಯಾಂಡಿ ಸೇರಿದಂತೆ ಇತರೇ ಕೂಲ್‌ ಡ್ರಿಂಗ್ಸ್‌ ಸುವಾಸನೆ ಪ್ರೇರಿತ ನಿಕೋಟಿನ್‌ಗಳನ್ನ ಬಳಕೆ ಮಾಡಲಾಗುತ್ತಿದೆ. ಇದು ಮೊದಲ ಬಾರಿ ವೇಪ್‌ ಮಾಡುವವರನ್ನ ಸುಲಭವಾಗಿ ಚಟಕ್ಕೆ ತಳ್ಳುತ್ತದೆ. 2021ರ ಸಮೀಕ್ಷೆಯ ಪ್ರಕಾರ, ಹದಿಹರೆಯದವರು, ಒತ್ತಡ, ಆತಂಕ ಹಾಗೂ ಖಿನ್ನತೆಯಿನ್ನ ನಿಭಾಯಿಸಲು ಇ-ಸಿಗರೇಟ್‌ ಚಟಕ್ಕೆ ಸಿಲುಕಿದ್ದುಂಟು. ಇನ್ನೂ ಕೆಲವರು ತಮ್ಮ ಸ್ನೇಹಿತರ ಸಹವಾಸದಿಂದ ಚಟ ಹಿಡಿಸಿಕೊಂಡಿದ್ದು, ಈಗ ಅದರಿಂದ ಹೊರಬರಲಾರದೇ ಬಳಲುತ್ತಿದ್ದಾರೆಂದು ಹೇಳಲಾಗಿದೆ. ಮುಖ್ಯವಾಗಿ ಆನ್‌ಲೈನ್‌ನಲ್ಲಿ ಸುಲಭ ಶಾಪಿಂಗ್‌ಗೆ ಅವಕಾಶ ಸಿಕ್ಕಿರುವುದು ಬಳಕೆ ಹೆಚ್ಚಾಗಲು ಕಾರಣವಾಗಿದೆ.

ಒಟ್ಟಿನಲ್ಲಿ ತಂಬಾಕು ಸಂಬಂಧಿತ ಸಿಗರೇಟ್‌, ಬೀಡಿ ಚುಟ್ಟಾ ಅಥವಾ ಹುಕ್ಕಾ ಇರಬಹುದು ಅಥವಾ ಇ ಸಿಗರೇಟ್‌ಗಳಲ್ಲಿನ ನಿಕೋಟಿನ್‌ ಅಂಶವು ಮಿದುಳಿನಲ್ಲಿ ಡೊಪಮಿನ್‌ ಎಂಬ ಕ್ಷಣಿಕ ಸುಖ ನೀಡುವ ಹಾರ್ಮೂನ್‌ಗಳನ್ನ ಸೃಷ್ಟುಸುತ್ತವೆ. ಇದು ವ್ಯಕ್ತಿಯಲ್ಲಿ ಮತ್ತೆ ಮತ್ತೆ ಆ ಕ್ಷಣಿಕ ಸುಃಖ ಕಳೆಯಬೇಕೆಂಬ ದಾಹ ಸೃಷ್ಟಿಸುತ್ತದೆ. ಇದರಿಂದ ವ್ಯಕ್ತಿ ವ್ಯಸನಿಯಾಗುತ್ತಾನೆ. ಆದ್ರೆ ದೀರ್ಘಕಾಲದ ಈ ದುಶ್ಚಟದಿಂದ ಆರೋಗ್ಯಕ್ಕೆ ಹಾನಿಕಾರವಲ್ಲದೇ ಬೇರೆ ಯಾವುದೇ ಉಪಯೋಗವಿಲ್ಲ ಎಂಬುದನ್ನು ಯುವಜನತೆ ಮನಗಾಣಬೇಕಿದೆ.

Share This Article