ಯಾರೀ ಶೆಹಬಾಜ್‌ ಷರೀಫ್‌- ಇವರೇ ಪಾಕಿಸ್ತಾನದ ಮುಂದಿನ ಪ್ರಧಾನಿ?

Public TV
2 Min Read

ಇಸ್ಲಾಮಾಬಾದ್‌: ಅವಿಶ್ವಾಸ ಗೊತ್ತುವಳಿ ಮಂಡನೆ ಬೆನ್ನಲ್ಲೇ ಇಮ್ರಾನ್‌ ಖಾನ್‌ ಅವರು ಪಾಕಿಸ್ತಾನದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಇದರ ನಡುವೆಯೇ ಶೆಹಬಾಜ್‌ ಷರೀಫ್‌ ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಸಂದರ್ಭದಲ್ಲೇ ಶೆಹಬಾಜ್‌ ಷರೀಫ್‌ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಯಾರೀ ಶೆಹಬಾಜ್‌ ಷರೀಫ್‌? ಅವರ ಹಿನ್ನೆಲೆ ಏನು? ಇಲ್ಲಿದೆ ನೋಡಿ ಮಾಹಿತಿ. ಇದನ್ನೂ ಓದಿ: ಇಮ್ರಾನ್ ಖಾನ್ ಕೊನೆಯ ಬಾಲ್ ವರೆಗೂ ಹೋರಾಡುತ್ತಾರೆ, ರಾಜೀನಾಮೆ ಕೊಡಲ್ಲ: ಪಾಕ್ ಸಚಿವ

ಇಮ್ರಾನ್ ಖಾನ್ ಅವಿಶ್ವಾಸ ಮತದಲ್ಲಿ ಸೋತರೆ, ವಿರೋಧ ಪಕ್ಷದ ನಾಯಕ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಶೆಹಬಾಜ್ ಷರೀಫ್ ಅವರ ನೇತೃತ್ವದಲ್ಲಿ ಹೊಸ ಸರ್ಕಾರವನ್ನು ರಚಿಸಬಹುದು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ಬುಧವಾರ ಈ ಸೂಚನೆ ನೀಡಿದ್ದಾರೆ.

ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಸಹೋದರ
ಶೆಹಬಾಜ್‌ ಶರೀಫ್‌ 1951ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಜನಿಸಿದರು. ಇವರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ. ಶೆಹಬಾಜ್‌ ಶರೀಫ್‌ ಅವರಿಗೆ ಕಲ್ಸೂಮ್‌ ಹಾಯಿ, ತೆಹ್ಮಿನಾ ದುರ್ರಾನಿ, ಆಲಿಯಾ ಹೊನೇಯ್‌, ನರ್ಗಿಸ್‌ ಖೋಸಾ, ಬೆಗುಮ್‌ ನುಸ್ರತ್‌ ಶೆಹಬಾಜ್‌ ಎಂಬ ನಾಲ್ವರು ಪತ್ನಿಯರಿದ್ದಾರೆ.

ವಿರೋಧ ಪಕ್ಷದ ನಾಯಕ
ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್)ನ ಅಧ್ಯಕ್ಷರಾಗಿರುವ ಶೆಹಬಾಜ್‌ ಷರೀಫ್‌ ಅವರು ಪ್ರಸ್ತುತ ಪಾಕಿಸ್ತಾನ ಪಾರ್ಲಿಮೆಂಟ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇದನ್ನೂ ಓದಿ: ಅಲ್ಪಮತಕ್ಕೆ ಕುಸಿದ ಇಮ್ರಾನ್ ಖಾನ್ ಸರ್ಕಾರ- ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಸಾಧ್ಯತೆ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ ಷರೀಫ್ ಅವರು ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೌದಿ ಅರೇಬಿಯಾಗೆ ಗಡಿಪಾರು
ಷರೀಫ್‌ ಅವರು 1997 ರಲ್ಲಿ ಮೊದಲ ಬಾರಿಗೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾದರು. ಆದರೆ 1999 ರ ಜನರಲ್ ಪರ್ವೇಜ್ ಮುಷರಫ್ ಅವರ ದಂಗೆಯ ನಂತರ, ಅವರು ಪಾಕಿಸ್ತಾನವನ್ನು ತೊರೆದು ಮುಂದಿನ ಎಂಟು ವರ್ಷ ಸೌದಿ ಅರೇಬಿಯಾದಲ್ಲಿ ಕಾಲ ಕಳೆದರು.

PAK

ಶೆಹಬಾಜ್ ಷರೀಫ್ ಮತ್ತು ಅವರ ಸಹೋದರ 2007 ರಲ್ಲಿ ಪಾಕಿಸ್ತಾನಕ್ಕೆ ಮರಳಿದರು. 2008 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಪಕ್ಷವು ಗೆದ್ದ ನಂತರ ಮತ್ತೆ ಪಂಜಾಬ್ ಮುಖ್ಯಮಂತ್ರಿಯಾದರು. ಪಂಜಾಬ್ ಮುಖ್ಯಮಂತ್ರಿಯಾಗಿ ಷರೀಫ್ ಅವರ ಮೂರನೇ ಅವಧಿಯು 2013 ರಲ್ಲಿ ಪ್ರಾರಂಭವಾಯಿತು. 2018 ರ ಚುನಾವಣೆಯ ನಂತರ ಅವರನ್ನು ವಿರೋಧ ಪಕ್ಷದ ನಾಯಕನಾಗಿ ನಾಮನಿರ್ದೇಶನ ಮಾಡಲಾಯಿತು. ಇದನ್ನೂ ಓದಿ: ಚೀನಾದ ಶಾಂಫೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?

ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧನ
ಡಿಸೆಂಬರ್ 2019 ರಲ್ಲಿ, ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ಶೆಹಬಾಜ್ ಷರೀಫ್ ಮತ್ತು ಅವರ ಮಗ ಹಮ್ಜಾ ಅವರಿಗೆ ಸೇರಿದ 23 ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮುಟ್ಟುಗೋಲು ಹಾಕಿತ್ತು. ಅವರನ್ನು 2020ರ ಸೆಪ್ಟೆಂಬರ್‌ನಲ್ಲಿ ಅದೇ ಪ್ರಕರಣದಲ್ಲಿ ಎನ್‌ಎಬಿ ಬಂಧಿಸಿತು. 2021ರ ಏಪ್ರಿಲ್‌ನಲ್ಲಿ ಲಾಹೋರ್ ಹೈಕೋರ್ಟ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *